ದಾವಣಗೆರೆ:ವಧು ಅನಿವಾಸಿ ಭಾರತೀಯೆ. ವರ ಅಪ್ಪಟ ನ್ಯೂಜಿಲ್ಯಾಂಡ್ ವಾಸಿ. ಈ ಯುವಜೋಡಿ ಬುಧವಾರ, ಹಿಂದು ಸಂಪ್ರದಾಯದಂತೆ ವಿಶೇಷ ಮದುವೆಯ ಪವಿತ್ರ ಬಂಧನಕ್ಕೆ ಒಳಗಾಯಿತು.
ಅಲ್ಲಿ ಮಂಗಳ ವಾದ್ಯದ ಜತೆಗೆ ಧ್ವನಿಮುದ್ರಿತ ಹಾಡುಗಳ ಹಿಮ್ಮೇಳವಿತ್ತು. ಪುರೋಹಿತರ ವೇದ ಮಂತ್ರಗಳಿದ್ದವು. ಕಳೆದೆರಡು ದಿನಗಳಿಂದ ವಿವಾಹ ಮಹೋತ್ಸವದ ಸಂಪ್ರದಾಯಗಳು ವಿಧ್ಯುಕ್ತವಾಗಿ ನಡೆದವು. ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿದ್ದು ದಾವಣಗೆರೆ ಹೊರವಲಯದ ಅಪೂರ್ವ ರೆಸಾರ್ಟ್.
ಚಳ್ಳಕೆರೆ ಮೂಲದ ನೇತ್ರ ತಜ್ಞೆ ಪೂಜಾ ನಾಗರಾಜ್, ನ್ಯೂಜಿಲ್ಯಾಂಡ್‌ನ ಸಾಫ್ಟ್‌ವೇರ್ ಇಂಜಿನಿಯರ್ ಕ್ಯಾಂಪ್‌ಬೆಲ್ ವಿಟ್‌ವರ್ಥ್ ಇಬ್ಬರ ನಡುವಿನ ಪರಿಚಯ ಪ್ರೇಮಕ್ಕೆ ತಿರುಗಿದೆ.
ಎರಡೂ ಕುಟುಂಬದ ಒಪ್ಪಿಗೆಯಂತೆ ಮದುವೆ ಬುಧವಾರ ಶಾಸ್ತ್ರೋಕ್ತವಾಗಿ ನಡೆಯಿತು. ಕಳೆದ ನಾಲ್ಕು ದಿನದಿಂದ ರೆಸಾರ್ಟ್‌ನಲ್ಲಿ ಮದುವೆಯ ಕಾರ್ಯಗಳು ಸಾಂಗವಾಗಿ ನೆರವೇರಿದವು.
ವಧು ಪೂಜಾ ಅವರ ತಂದೆ ಪಿ. ನಾಗರಾಜ್ ಸಿವಿಲ್ ಇಂಜಿನಿಯರ್, ತಾಯಿ ರಾಣಿ ನಾಗರಾಜ್ ಮೆಕ್ಯಾನಿಕಲ್ ಇಂಜಿನಿಯರ್. 20 ವರ್ಷದ ಹಿಂದೆ ಮಗಳು ನ್ಯೂಜಿಲೆಂಡ್‌ನಲ್ಲಿ ಓದುವ ಹಂತದಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳಿದ್ದು ಪಾಲಕರು ಅಲ್ಲಿಯೇ ವಾಸವಿದ್ದರು.
ಸಂಪ್ರದಾಯದಂತೆ ಅರಿಶಿಣ ಶಾಸ್ತ್ರ, ಧಾರೆ ಶಾಸ್ತ್ರ, ಮೆಹಂದಿ, ಸಪ್ತಪದಿ, ಅರುಂಧತಿ ನಕ್ಷತ್ರಕ್ಕೆ ಪೂಜೆ ಸಲ್ಲಿಸುವುದು ಸೇರಿದಂತೆ ವಿಧ್ಯುಕ್ತವಾಗಿ ಮದುವೆ ಅದ್ದೂರಿಯಾಗಿ ನಡೆಯಿತು. ಕ್ಯಾಂಪ್‌ಬೆಲ್ ಪೂಜಾಗೆ ತಾಳಿ ಕಟ್ಟಿದರೆ ಕಾಲಿಗೆ ಕಾಲುಂಗುರ ತೊಡಿಸಿದರು. ಕೊನೆಯಲ್ಲಿ ಹಣೆಗೆ ಮುತ್ತಿಟ್ಟರು. ಇದರೊಂದಿಗೆ ಪ್ರೇಮಜೋಡಿ ಹೊಸ ದಾಂಪತ್ಯಕ್ಕೆ ಕಾಲಿಟ್ಟಿತು.
ನಾನು ಹುಟ್ಟಿದ್ದು ಈ ನೆಲದಲ್ಲಿಯೇ. ಹೀಗಾಗಿ ಇಲ್ಲಿಯೇ ಮದುವೆ ಆಗುವ ಬಯಕೆ ಇತ್ತು. ಎರಡೂ ಕುಟುಂಬದವರೂ ಒಪ್ಪಿ, ನಮ್ಮ ಸಂಪ್ರದಾಯದಂತೆ ವಿವಾಹ ಆಗಿದ್ದೇವೆ ಎಂದು ವಧು ಪೂಜಾ ಹೇಳಿದರು.
ನ್ಯೂಜಿಲ್ಯಾಂಡ್ ರಾಷ್ಟ್ರದ ಹೇಸ್ಟಿಂಗ್ಸ್ ನಗರ ನಿವಾಸಿ, ವರನ ಪಾಲಕರಾದ ಚೆರಿ ವಿಟ್‌ವರ್ಥ್-ಆ್ಯಂಡ್ರೂೃ ವಿಟ್‌ವರ್ಥ್ ‘ಇಲ್ಲಿಗೆ ಬಂದಿದ್ದು ನಮ್ಮ ಅದೃಷ್ಟ. ಇಲ್ಲಿನ ವಿಶಿಷ್ಟ ಸಂಸ್ಕೃತಿ, ಪದ್ಧತಿಗಳು ಸುಂದರವಾಗಿದ್ದು, ಅದನ್ನು ಅನುಭವಿಸುವ ಅವಕಾಶ ದಕ್ಕಿತು’ ಎಂದು ಹರ್ಷ ವ್ಯಕ್ತಪಡಿಸಿದರು. ನೂರಾರು ಬಂಧು ಮಿತ್ರರು ಈ ವಿಶೇಷ ಮದುವೆಯಲ್ಲಿ ಭಾಗಿಯಾಗಿದ್ದರು.
ನ್ಯೂಜಿಲ್ಯಾಂಡ್‌ನಲ್ಲಿ ಇರುವವರೆಲ್ಲ ಕ್ರೈಸ್ತರಲ್ಲ. ಅವರಲ್ಲಿ ಶೇ. 70ರಷ್ಟು ಜನರು ಬೇರೆ ಮತಗಳಿಗೆ ಸೇರಿದವರಿದ್ದಾರೆ. ನಾವು ಎಲ್ಲೇ ವಾಸವಿದ್ದರೂ ಮೂಲ ಸಂಪ್ರದಾಯ ಬಿಡಬಾರದು. ಹೀಗಾಗಿ ಹಿಂದು ಲಿಂಗಾಯತ ವಿಧಿಗಳಂತೆ ಮದುವೆ ಮಾಡಿದ್ದೇವೆ.