ಮೊದಲ ದಿನ ಸಿಇಟಿ ಪರೀಕ್ಷೆ ಸುಗಮ

ದಾವಣಗೆರೆಯಲ್ಲಿ ಗುರುವಾರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಸಾಲುಗಟ್ಟಿ ನಿಂತಿದ್ದ ದೃಶ್ಯ.
ದಾವಣಗೆರೆಯಲ್ಲಿ ಗುರುವಾರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಸಾಲುಗಟ್ಟಿ ನಿಂತಿದ್ದ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಬಿಗಿಯಾದ ತಪಾಸಣೆ, ವಸ್ತ್ರಸಂಹಿತೆ
  • 20 ಕೇಂದ್ರಗಳಲ್ಲಿ ನಡೆದ ಪರೀಕ್ಷೆ
ದಾವಣಗೆರೆ : ಬಿಗಿಯಾದ ತಪಾಸಣೆ ಮತ್ತು ವಸ್ತ್ರಸಂಹಿತೆ ನಡುವೆ ಸಿಇಟಿ ಮೊದಲ ದಿನದ ಪರೀಕ್ಷೆಗಳು ನಗರದ 20 ಕೇಂದ್ರಗಳಲ್ಲಿ ಗುರವಾರ ಸುಗಮವಾಗಿ ನಡೆದವು.
ಪರೀಕ್ಷೆಗೆ ಒಟ್ಟು 12,616 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಅವರ ಪೈಕಿ ಭೌತಶಾಸ್ತ್ರ ವಿಷಯಕ್ಕೆ 303 ಮಕ್ಕಳು, ರಸಾಯನಶಾಸ್ತ್ರ ವಿಷಯಕ್ಕೆ 305 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಮೊದಲೇ ನೀಡಲಾಗಿದ್ದ ಸೂಚನೆಯಂತೆ ಪರೀಕ್ಷೆ ಆರಂಭಕ್ಕೆ ಎರಡು ಗಂಟೆ ಮುಂಚಿತವಾಗಿ ಬೆಳಗ್ಗೆ 8.30ರಿಂದಲೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬರತೊಡಗಿದರು.
ನಗರದ ಮೋತಿವೀರಪ್ಪ ಕಾಲೇಜಿನ ಪರೀಕ್ಷಾ ಕೇಂದ್ರದ ಹೊರಗೆ ಸೂಚನಾ ಫಲಕದಲ್ಲಿ ನಮೂದಿಸಲಾಗಿದ್ದ ಸಿಇಟಿ ಸಂಖ್ಯೆ ಮತ್ತು ಕೊಠಡಿ ಸಂಖ್ಯೆಯನ್ನು ನೋಡಿಕೊಂಡು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸಿದರು. ಜತೆಯಲ್ಲಿ ತಂದಿದ್ದ ಬ್ಯಾಗುಗಳನ್ನು ಹೊರಗೆ ಇರಿಸಲಾಯಿತು.
ಕಿವಿಯೋಲೆ, ಸರ ಇನ್ನಿತರ ಆಭರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ ಎಂದು ಅಲ್ಲಿನ ಸಿಬ್ಬಂದಿ ಧ್ವನಿವರ್ಧಕದ ಮೂಲಕ ತಿಳಿಸುತ್ತಿದ್ದರು. ಬಹಳಷ್ಟು ಜೇಬುಗಳಿರುವ ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ, ಶೂ ಹಾಕುವಂತಿಲ್ಲ, ಕುಡಿಯುವ ನೀರಿನ ಬಾಟಲಿ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಮಾಹಿತಿ ನೀಡಲಾಯಿತು.
ಕೆಲವು ವಿದ್ಯಾರ್ಥಿಗಳು ತಾವು ಧರಿಸಿದ್ದ ಆಭರಣಗಳನ್ನು ತೆಗೆದು ಪಾಲಕರಿಗೆ ನೀಡಿದರು. ನಂತರ ವಿದ್ಯಾರ್ಥಿಗಳನ್ನು ಲೋಹ ಶೋಧಕದಿಂದ ತಪಾಸಣೆಗೆ ಒಳಪಡಿಸಲಾಯಿತು. ಮುಖ ಗುರುತಿಸುವಿಕೆ ಪ್ರಕ್ರಿಯೆ ಕೈಗೊಳ್ಳಲಾಯಿತು. ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಭದ್ರತೆಯ ವ್ಯವಸ್ಥೆ ನೋಡಿಕೊಂಡರು.
ನಗರದ 20 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು. ಯಾವುದೇ ಸಮಸ್ಯೆ ಉಂಟಾಗಿಲ್ಲ. ಎಲ್ಲರೂ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿದರು ಎಂದು ಡಿಡಿಪಿಯು ಪಳನಿವೇಲು ದೊರೈಸ್ವಾಮಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net