ಗುಣಮಟ್ಟ ನೋಡಿ ಸಾಮಗ್ರಿ ಖರೀದಿಸಿ

ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಿ.ಎಸ್. ತ್ಯಾಗರಾಜನ್, ವೆಂಕಟೇಶಬಾಬು, ಕೆ.ಪಿ.ಮಧುಸೂದನ್, ಮಂಜುನಾಥ್, ಬಿ.ಯು.ಗೀತಾ, ಬಸವರಾಜ್ ಸಿ ತಹಸೀಲ್ದಾರ್ ಇತರರಿದ್ದರು.
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಿ.ಎಸ್. ತ್ಯಾಗರಾಜನ್, ವೆಂಕಟೇಶಬಾಬು, ಕೆ.ಪಿ.ಮಧುಸೂದನ್, ಮಂಜುನಾಥ್, ಬಿ.ಯು.ಗೀತಾ, ಬಸವರಾಜ್ ಸಿ ತಹಸೀಲ್ದಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹ ಪ್ರಾಧ್ಯಾಪಕ ವೆಂಕಟೇಶಬಾಬು ಹೇಳಿಕೆ
  • ದಾವಣಗೆರೆಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
  • ಗ್ರಾಹಕರ ಅಭಿರುಚಿ ಗಮನಿಸದ ಉತ್ಪಾದಕರು
ದಾವಣಗೆರೆ: ಗ್ರಾಹಕರು ಗುಣಮಟ್ಟ ಗಮನಿಸಿ ವಸ್ತುಗಳನ್ನು ಖರೀದಿಸಬೇಕು. ಜಾಹೀರಾತಿಗೆ ಮರುಳಾಗಿ ಮೋಸ ಹೋಗಬಾರದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ವೆಂಕಟೇಶಬಾಬು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನ, ಡಿಜಿಟಲ್ ನ್ಯಾಯದ ಮೂಲಕ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿ ಕುರಿತ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಉತ್ಪಾದಕರು ಲಾಭದ ಉದ್ದೇಶಕ್ಕಾಗಿ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದು, ಗ್ರಾಹಕರ ಅಭಿರುಚಿ ಗಮನಿಸುತ್ತಿಲ್ಲ. ಬಿಸ್ಕತ್ತು, ಚಾಕಲೇಟ್, ಸಾಬೂನು ಮೊದಲಾದ ಉತ್ಪಾದಕ ಕಂಪನಿಗಳು ಗ್ರಾಹಕರನ್ನು ಮೋಸ ಮಾಡುತ್ತಿವೆ. ಅವುಗಳ ತೂಕ ಮತ್ತು ಬೆಲೆಗಳ ವ್ಯತ್ಯಾಸ ಪರಿಶೀಲಿಸಿ ವಸ್ತುಗಳನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.
ಗ್ರಾಹಕರು ಪ್ರಶ್ನೆ ಮಾಡಿದಾಗ ಉತ್ಪಾದಕರು ಎಚ್ಚರಗೊಳ್ಳುತ್ತಾರೆ. ಪ್ರತಿ ಪ್ರಜೆಯು ಗ್ರಾಹಕನೇ. ಕಷ್ಟಪಟ್ಟು ದುಡಿದ ಹಣದಿಂದ ವಸ್ತುಗಳನ್ನು ಖರೀದಿಸುವಾಗ ಜಾಗೃತಿ ವಹಿಸಬೇಕು. ತಮಗಾದ ಅನ್ಯಾಯ ಸರಿಪಡಿಸಿಕೊಳ್ಳಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಿ.ಎಸ್. ತ್ಯಾಗರಾಜನ್ ಮಾತನಾಡಿ ದೇಶದಲ್ಲಿ ಮಾ.15ರಂದು ವಿಶ್ವ ಗ್ರಾಹಕರ ದಿನ, ಡಿ.24ರಂದು ರಾಷ್ಟ್ರೀಯ ಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ. ಗ್ರಾಹಕರಲ್ಲಿ ಕೊಳ್ಳುವ ವಸ್ತುಗಳ ಬಗ್ಗೆ ಅರಿವು ಮುಖ್ಯವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಆನ್‌ಲೈನ್ ಮೂಲಕ ವಸ್ತುಗಳ ಖರೀದಿ ಹೆಚ್ಚಾಗಿದೆ. ಅವುಗಳ ಗುಣಮಟ್ಟ ಪರಿಶೀಲಿಸಲಾಗದು. ಖರೀದಿ ನಂತರ ಕಳಪೆ ಎಂದು ತಿಳಿದ ನಂತರ ಮೋಸ ಹೋಗಿರುವುದು ತಿಳಿದು ಬರುತ್ತದೆ. ಖರೀದಿಸುವ ಸಂದರ್ಭದಲ್ಲಿ ಅವಧಿ ಮುಗಿದ ವಸ್ತುಗಳ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ತಿನ್ನುವ ವಸ್ತುಗಳನ್ನು ನೋಡದೆ ಕೊಂಡಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.
ಆಹಾರ , ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಬಿ.ಯು.ಗೀತಾ, ಪ್ರಾಧ್ಯಾಪಕಿ ಯಶೋದಮ್ಮ ಮಾತನಾಡಿದರು. ಪ್ರಾಚಾರ್ಯ ಬಸವರಾಜ್ ಸಿ ತಹಸೀಲ್ದಾರ್ ಇತರರಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಹಕರು ತಾವು ಮೋಸ ಹೋಗಿದ್ದನ್ನು ತಿಳಿದ ತಕ್ಷಣ ಅಗತ್ಯ ದಾಖಲಾತಿಗಳೊಂದಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿ ಪರಿಹಾರ ಪಡೆಯಬಹುದು. 3 ತಿಂಗಳಿನಿಂದ 1 ವರ್ಷದ ಅವಧಿಯಲ್ಲಿ ಪರಿಹಾರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net