ಬಿಪಿ ಮರೆಸಿದ ವಿಪಿ ಗಾಯನ ರೆಸಿಪಿ!

ದಾವಣಗೆರೆಯ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಮಲ್ಲಿಕಾ ಸಾಂಸ್ಕೃತಿಕ ಉತ್ಸವದಲ್ಲಿ ಶನಿವಾರ ರಾತ್ರಿ ಖ್ಯಾತ ಹಿನ್ನೆಲೆಗಾಯಕ ವಿಜಯ್‌ಪ್ರಕಾಶ್ ತಮ್ಮ ತಂಡದೊಂದಿಗೆ ಹಾಡಿನ ಮೋಡಿ ಮಾಡಿದರು.
ದಾವಣಗೆರೆಯ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಮಲ್ಲಿಕಾ ಸಾಂಸ್ಕೃತಿಕ ಉತ್ಸವದಲ್ಲಿ ಶನಿವಾರ ರಾತ್ರಿ ಖ್ಯಾತ ಹಿನ್ನೆಲೆಗಾಯಕ ವಿಜಯ್‌ಪ್ರಕಾಶ್ ತಮ್ಮ ತಂಡದೊಂದಿಗೆ ಹಾಡಿನ ಮೋಡಿ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮನರಂಜಿಸಿದ ಹಿನ್ನೆಲೆಗಾಯಕ ವಿಜಯ್‌ಪ್ರಕಾಶ್
  • ‘ಮಲ್ಲಿಕಾ‘ ಸಾಂಸ್ಕೃತಿಕ ಉತ್ಸವ ಸುಸಂಪನ್ನ
  • ಒಂದೂವರೆ ತಾಸು ಶ್ರೋತೃಗಳ ಕಿವಿ ತಣಿಸಿದ ತಂಡ
ದಾವಣಗೆರೆ: ಖ್ಯಾತ ಹಿನ್ನೆಲೆಗಾಯಕ ವಿಜಯ್‌ಪ್ರಕಾಶ್ ಅವರ ಹಾಡಿನ ಮೋಡಿಯೊಂದಿಗೆ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ‘ಮಲ್ಲಿಕಾ-26.0’ ಸಾಂಸ್ಕೃತಿಕ ಉತ್ಸವ ಶನಿವಾರ ರಾತ್ರಿ ಸುಸಂಪನ್ನಗೊಂಡಿತು.
ವಿಜಯ್‌ಪ್ರಕಾಶ್ ತಮ್ಮ ಕಂಚಿನ ಕಂಠದ ಗಾಯನ ಶುರು ಮಾಡುತ್ತಿದ್ದಂತೆ ಕಾರ್ಯಕ್ರಮದ ವೇದಿಕೆ ಹೌಸ್‌ಫುಲ್ ಆಗಿತ್ತು. ಒಂದೂವರೆ ತಾಸುಗಳ ಕಾಲ ಅವರ ತಂಡ ಶ್ರೋತೃಗಳ ಕಿವಿ ತಣಿಸಿತು. ನೋಡುಗರ ಮನಸೂರೆಗೊಂಡಿತು. ಝಗಮಗಿಸುವ ವಿದ್ಯುತಲಂಕಾರದ ಜತೆಗೆ ಬಾನೆತ್ತರಕ್ಕೆ ಹಾರಿದ ಸಿಡಿಮದ್ದುಗಳು ಕಣ್ಸೆಳೆಯಿತು.
ಶಿವೋಹಂ.. ಹಾಡಿನೊಂದಿಗೆ ಭಕ್ತಿ, ಜೈ ಹೋ.. ದೇಶಭಕ್ತಿಯ ಸಂಚಲನ ಮೂಡಿಸಿದರು. ಹಮ್ ತೇರೆ ಬಿನ್ ಜೀ ನಹೀ ಸಕತೇ, ಸಿಂಗಾರ ಸಿರಿಯೇ.. ಬೊಂಬೆ ಹೇಳುತೈತೆ, ಬೆಳಗೆದ್ದು ಯಾರ ಮುಖವ ನಾನು ನೋಡಿದೆ.. ಎ ಬ್ರದರ್ ಫ್ರಂ ಅನದರ್ ಮದರ್, ಯಾರೆ ಬಂದರೂ ಎದುರು ಯಾರೇ ನಿಂತರೂ..ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ, ನೂರೊಂದು ನೆನಪು ಎದೆಯಾಳದಿಂದ, ಬಾನಿಗೊಂದು ಎಲ್ಲೆ ಎಲ್ಲಿದೆ, ಕಾಣದಂತೆ ಮಾಯವಾದನು.. ಮೊದಲಾದ ಹಾಡಿನ ತುಣುಕುಗಳಿಂದಲೂ ಎಲ್ಲರ ಹೃದಯ ಗೆದ್ದರು.
ಜೀವನ ಟಾನಿಕ್ ಬಾಟ್ಲಿ ಅಲ್ಲಾಡ್ಸು.. ನಾವ್ ಮನಿಗೋಗೋದಿಲ್ಲ.. ಫೋನು ಇಲ್ಲ ಮೆಸೇಜ್ ಇಲ್ಲ ನಿಂದು.. ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು.. ಮೊದಲಾದ ಹಾಡುಗಳೊಂದಿಗೆ ನಗೆಯ ಕಚಗುಳಿಗಳೊಂದಿಗೆ ಪಡ್ಡೆ ಹುಡುಗರನ್ನು ರಂಜಿಸಿದರು. ‘ಇದು ಹಾಡು ಮಾತ್ರ. ಯಾರೂ ಕುಡಿಯಬೇಡಿ. ಅದರಿಂದ ಯಾರೂ ಉದ್ದಾರ ಆಗಿಲ್ಲ’ ಎಂದೂ ಮೆಸೇಜ್ ನೀಡಿದರು.
ಅವರ ತಂಡದ ಸಹ ಗಾಯಕರು ರಾರಾ ರಕ್ಕಮ್ಮ, ಕಣ್ಣು ಹೊಡಿಯಾಕ, ಟೇಕಿಟ್ ಪುಷ್ಪವತಿ, ಬಸಣ್ಣಿ ಬಾ.. ಹಾಡಿದಾಗಲೂ ವಿಜಯ್‌ಪ್ರಕಾಶ್ ವಿದ್ಯಾರ್ಥಿಗಳನ್ನು ಡಾನ್ಸ್ ಮಾಡುವಂತೆ ಪ್ರೇರೇಪಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.
ವಿಜಯ್ ಹಾಡಿಗೆ ಅರುಣ್ ಡ್ರಮ್ಸ್ ನುಡಿಸಿದರೆ, ಅದ್ವಯ್ ಹಾಗೂ ನವೀನ್ ಗಿಟಾರ್, ಪ್ರವೀಣ್ ರಿದಂ ಪ್ಯಾಡ್, ಭರತ್ ಕೊಳಲು ಹಾಗೂ ಸ್ಯಾಕ್ಸೋಫೋನ್, ಆಕಾಶ್ ಕೀಬೋರ್ಡ್ ನುಡಿಸಿದರೆ ಕಿರಣ್, ಘನಶ್ಯಾಮ್, ಸಂತೋಷ್ ಇತರೆ ಸಹಕಾರ ನೀಡಿದರು.
ಉಳಿಸಬೇಕು ನೈತಿಕ ಮೌಲ್ಯ
ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳನ್ನು ಜವಾಬ್ದಾರಿಯಿಂದ ಬಳಸಬೇಕು. ನಮ್ಮ ಸಂಸ್ಕೃತಿ, ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಿದೆ ಎಂದು ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್ ಹೇಳಿದರು.
ಶಿಕ್ಷಣ ಎಂಬುದು ತರಗತಿ, ಪ್ರಯೋಗಾಲಯಕ್ಕೆ ಸೀಮಿತವಾಗಿಲ್ಲ. ಮಲ್ಲಿಕಾದಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತವೆ ಎಂದು ಕುಲಪತಿ ಡಾ. ಎಸ್.ಆರ್. ಶಂಕಪಾಲ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಾಧಿಪತಿ ಜಿ.ಎಂ. ಲಿಂಗರಾಜು, ಸಹ ಉಪಕುಲಪತಿ ಡಾ. ಎಂ. ವೇಣುಗೋಪಾಲ ರಾವ್, ಕುಲಸಚಿವ ಡಾ.ಬಿ.ಎಸ್. ಸುನೀಲ್ ಕುಮಾರ್, ಜಿಎಂ ಹಾಲಮ್ಮ ಪ.ಪೂ ಕಾಲೇಜಿನ ಎಎಒ ಜಿ.ಜೆ. ಶಿವಕುಮಾರ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಎಸ್. ಕಿರಣ್‌ಕುಮಾರ್, ಉಪ ನಿರ್ದೇಶಕ ಡಾ. ಸಂತೋಷ್ ಕುಮಾರ್ ಇದ್ದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net