ಚನ್ನಗಿರಿಯ ಸರ್ಕಾರಿ ಸಾರ್ವಜನಿಕ ಗ್ರಂಥಾಯಲದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಕಸಾಪ ಹೋಬಳಿ ಅಧ್ಯಕ್ಷ ಜಿ. ಚಿನ್ನಸ್ವಾಮಿ ಉದ್ಘಾಟಿಸಿದರು. ಗ್ರಂಥಪಾಲಕ ಜಾಧವ್, ನಿವೃತ್ತ ಶಿಕ್ಷಕ ಎಂ.ಯು. ಚನ್ನಬಸಪ್ಪ, ಅಶೋಕ್ ಇದ್ದರು.
ಚನ್ನಗಿರಿ: ಪುಸ್ತಕಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಜಿ. ಚಿನ್ನಸ್ವಾಮಿ ಹೇಳಿದರು.
ಇಲ್ಲಿನ ಸರ್ಕಾರಿ ಸಾರ್ವಜನಿಕ ಗ್ರಂಥಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಗತ್ಯವಿರುವ ಪುಸ್ತಕಗಳನ್ನು ವೈಯಕ್ತಿಕವಾಗಿ ಖರೀದಿಸಿ ಓದುವುದು ಆರ್ಥಿಕವಾಗಿ ಕಷ್ಟವಾಗಬಹುದು. ಅದಕ್ಕಾಗಿ ಓದುಗರ ಅಭಿರುಚಿ ಮತ್ತು ಅಗತ್ಯಕ್ಕೆ ಅನುಗುಣವಾದ ಪುಸ್ತಕಗಳು ಗ್ರಂಥಾಲಯದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರಲ್ಲೂ ಓದುವ ಸಂಸ್ಕೃತಿ ಬೆಳೆಸುವಲ್ಲಿ ಗ್ರಂಥಾಲಯ ಮಹತ್ತರ ಪಾತ್ರ ವಹಿಸಿದೆ ಎಂದರು.
ಸಾರ್ವಜನಿಕ ಗ್ರಂಥಾಲಯಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಸಲುವಾಗಿ ದೇಶದಲ್ಲಿ ಗ್ರಂಥಾಲಯ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕರಿಂದ ಸಂಗ್ರಹವಾಗುವ ಆಸ್ತಿ ತೆರಿಗೆಯಲ್ಲಿ ಶೇ.6 ರಷ್ಟು ಗ್ರಂಥಾಲಯಗಳ ಅಭಿವೃದ್ಧಿಗಾಗಿ ಖರ್ಚು ಮಾಡಬೇಕು ಎನ್ನುವುದನ್ನು ಈ ಕಾಯ್ದೆಯಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಪಿ. ರುದ್ರಪ್ಪ ಮಾತನಾಡಿ, ಪ್ರಸ್ತುತ ಸರ್ಕಾರ ಗ್ರಾಮ ಪಂಚಾಯಿತಿಗೊಂದು ಗ್ರಂಥಾಲಯ ಸ್ಥಾಪನೆ ಮಾಡಿದೆ. ಆದರೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಗಳು ನಿವೃತ್ತ ನೌಕರರು, ವೃದ್ಧರಿಗೆ ಮಾತ್ರ ಸೀಮಿತವಾಗುತ್ತಿರುವುದು ವಿಷಾದನೀಯ ಎಂದರು.
ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡು ಪ್ರತಿದಿನ ಒಂದು ಗಂಟೆ ಗ್ರಂಥಾಲಯಗಳಿಗೆ ಭೇಟಿ ನೀಡಿ ಅಭ್ಯಾಸ ಮಾಡಬೇಕು ಎಂದರು. ಗ್ರಂಥಪಾಲಕ ಜಾಧವ್, ನಿವೃತ್ತ ಶಿಕ್ಷಕ ಎಂ.ಯು. ಚನ್ನಬಸಪ್ಪ, ಅಶೋಕ್, ಮಲ್ಲಿಕಾರ್ಜುನ್, ಸುರೇಶ್ ಇತರರು ಇದ್ದರು.