ದಾವಣಗೆರೆ :ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡ ಅನಿರ್ದಿಷ್ಟ ಧರಣಿಯ ಕೊನೆಯ ದಿನವಾದ ಶುಕ್ರವಾರ, ನಗರದಲ್ಲಿ ರಸ್ತೆತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಧರಣಿ ನಡೆಸುತ್ತಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರತಿಭಟನಾ ಸಭೆಯ ನಂತರ ಪ್ರತಿಭಟನಾಕಾರರು ಎಸಿ ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ‘ಕಾಂಗ್ರೆಸ್ ತೊಲಗಲಿ’ ಎಂದು ಘೋಷಣೆ ಹಾಕಿದರು.
ಈ ನಡುವೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿ ಕೆಲವು ಮುಖಂಡರು ರಸ್ತೆ ಮೇಲೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆತಡೆ ಕೈಬಿಡುವಂತೆ ಡಿವೈಎಸ್ಪಿ ಶರಣಬಸವೇಶ್ವರ, ಇನ್‌ಸ್ಪೆಕ್ಟರ್ ಉಮೇಶ್ ಇನ್ನಿತರ ಪೊಲೀಸರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈ ಹಂತದಲ್ಲಿ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರ ಮತ್ತೊಂದು ಗುಂಪು ಟೈರ್ ಸುಡಲು ಪ್ರಯತ್ನಿಸಿದಾಗ ಪೊಲೀಸರು ತಡೆದರು.
ಅಂತಿಮವಾಗಿ ಪೊಲೀಸರು ರೇಣುಕಾಚಾರ್ಯ ಸೇರಿ ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರನ್ನು ಬಂಧಿಸಿದರು.
ಬುಡಕ್ಕೆ ಬೆಂಕಿ ಬಿದ್ದಾಗ ಸಮಾಜದ ನೆನಪು
ರಾಜ್ಯದಲ್ಲಿ ಭ್ರಷ್ಟಾಚಾರ ಅತಿಯಾಗಿದೆ. ಇದರ ಪಾಲುದಾರರಾದ ಕಾಂಗ್ರೆಸ್ ನಾಯಕರಿಗೆ ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಸಮಾಜ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ನೆನಪಾಗುತ್ತಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಎಸಿ ಕಚೇರಿ ಬಳಿ ಬಿಜೆಪಿಯಿಂದ ಆಯೋಜಿಸಿದ್ದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರ, ಅದರಿಂದ ಸಮಾಜದ ಜನರಿಗೆ ಆಗಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ರಚಿಸಿ, ವಾಲ್ಮೀಕಿ ಜಯಂತಿಯಂದು ರಜೆ ಘೋಷಣೆ ಮಾಡಿದವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಬಸವರಾಜ ಬೊಮ್ಮಾಯಿ ಆಡಳಿತ ಅವಧಿಯಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 7.5ಕ್ಕೆ ಏರಿಕೆ ಮಾಡಲಾಯಿತು ಎಂದು ಬಿಜೆಪಿ ಸರ್ಕಾರದ ಸಾಧನೆಯನ್ನು ಮೆಲುಕು ಹಾಕಿದರು.
ನಾಗೇಂದ್ರ ಬಿಜೆಪಿಯಲ್ಲಿದ್ದಾಗ ಚೆನ್ನಾಗಿದ್ದರು, ಕಾಂಗ್ರೆಸ್‌ಗೆ ಹೋಗಿ ಕೆಟ್ಟಿದ್ದಾರೆ. ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಬಂದಿರುವ ಸಂದರ್ಭದಲ್ಲಿ ನಾಗೇಂದ್ರ ಅವರು ಸದನದಲ್ಲಿ ಸಂವಿಧಾನದ ಪುಸ್ತಕ ತೋರಿಸಿದ್ದು ವಿಪರ್ಯಾಸ ಎಂದರು.
ಸಮಾಜದ ವಿದ್ಯಾರ್ಥಿಗಳು, ರೈತರು, ಬೀದಿಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಚನೆಯಾದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡಿದ್ದಾರೆ. ಅದಕ್ಕೆ ಅವರು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್ಟಿ ಸಮಾಜದ ನಾಯಕರಾದ ಶ್ರೀರಾಮುಲು, ಶಿವನಗೌಡ ಪಾಟೀಲ್, ರಾಜುಗೌಡ ಇನ್ನಿತರರು ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಚ್.ಪಿ. ರಾಜೇಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರಾದ ಎನ್. ರಾಜಶೇಖರ್, ವೀರೇಶ್ ಹನಗವಾಡಿ, ಪಕ್ಷದ ಮುಖಂಡರಾದ ಲೋಕಿಕೆರೆ ನಾಗರಾಜ, ಕೆ.ಎಂ. ಸುರೇಶ್, ಧನಂಜಯ ಕಡ್ಲೆಬಾಳ್, ಲಕ್ಷ್ಮಣ, ಐರಣಿ ಅಣ್ಣೇಶ್, ಬಿ.ಎಸ್. ಜಗದೀಶ, ಗೌತಂ ಜೈನ್, ರಾಕೇಶ್, ರುದ್ರಮುನಿಸ್ವಾಮಿ ಇದ್ದರು.