ಬೆಳಗಾವಿ ಸುವರ್ಣಸೌಧಕ್ಕೆ ಬಿಜೆಪಿ ಮುತ್ತಿಗೆ-ಜಿಲ್ಲಾಧ್ಯಕ್ಷ ರಾಜಶೇಖರ

ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜತೆ ಜಿಲ್ಲಾಧ್ಯಕ್ಷ ರಾಜಶೇಖರ ಎನ್. ನಾಗಪ್ಪ, ಬಸವರಾಜನಾಯ್ಕ, ಧನಂಜಯ ಕಡ್ಲೇಬಾಳು ಇದ್ದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜತೆ ಜಿಲ್ಲಾಧ್ಯಕ್ಷ ರಾಜಶೇಖರ ಎನ್. ನಾಗಪ್ಪ, ಬಸವರಾಜನಾಯ್ಕ, ಧನಂಜಯ ಕಡ್ಲೇಬಾಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯೇಂದ್ರ ನೇತೃತ್ವದಲ್ಲಿ ಹೋರಾಟಕ್ಕೆ ನಿರ್ಧಾರ
  • 50 ಸಾವಿರಕ್ಕೂ ಹೆಚ್ಚಿನ ಬಿಜೆಪಿ ಮುಖಂಡರ ಭಾಗಿ ಸಾಧ್ಯತೆ
  • ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ
ದಾವಣಗೆರೆ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಡಿ.9ಕ್ಕೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದರು.
ರಾಜ್ಯದ ವಿವಿಧೆಡೆಗಳ 50 ಸಾವಿರಕ್ಕೂ ಹೆಚ್ಚಿನ ಬಿಜೆಪಿ ಮುಖಂಡರು, ಕಾರ್ಯಕರ್ತರು, ಜಿಲ್ಲೆಯಿಂದ 1 ಸಾವಿರಕ್ಕೂ ಅಧಿಕ ಜನರು ಹೋರಾಟದಲ್ಲಿ ಪಾಲ್ಗೊಳ್ಳುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ, ಜನ ಹಾಗೂ ಹಿಂದು ವಿರೋಧಿ ನೀತಿ ತಳೆದಿದೆ. ಬಿಜೆಪಿ ಹೋರಾಟದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸ್ಟಿಲರಿಗಳಿಗೆ ಪತ್ರ ಬರೆದರು ಎಂದು ಹೇಳಿದರು.
ರಾಜ್ಯದಲ್ಲಿ 70 ಲಕ್ಷ ಟನ್‌ಗೂ ಅಧಿಕ ಮೆಕ್ಕೆಜೋಳ ಇಳುವರಿಯಾಗಿದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಒಂದಕ್ಕೆ 1,600 ರೂ.ನಿಂದ 1,800 ರೂ. ದರವಿದೆ. ರಾಜ್ಯ ಸರ್ಕಾರ ಕೂಡಲೇ ಬೆಂಬಲ ಬೆಲೆ ಜತೆಗೆ ಪ್ರೋತ್ಸಾಹಧನ ಸೇರಿಸಿ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿದರು.
ಆಡಳಿತ ಯಂತ್ರ ಕುಸಿತ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಯಾವೊಬ್ಬ ಸಚಿವರೂ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೆಲಸ ಮಾಡುತ್ತಿಲ್ಲ. ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಕಿಡಿ ಕಾರಿದರು.
ಸಿಎಂ-ಡಿಸಿಎಂ ಸಂಬಂಧ ಹಳಸಿದೆ. ಕೆಲವೇ ದಿನಗಳಲ್ಲಿ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ಚಾಕು- ಚೂರಿ ಬಡಿದಾಟವೂ ನಡೆಯಲಿದೆ. ಸಿಎಂ ಕುರ್ಚಿ ಕಿತ್ತಾಟದಲ್ಲಿ ರೈತರ ಗಂಭೀರ ಸಮಸ್ಯೆಗಳು ಚರ್ಚೆಯಾಗುತ್ತಿಲ್ಲ. ರೈತರನ್ನು ಮರೆತರೆ ಚಳಿ ಬಿಡಿಸುವ ಕೆಲಸ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಚಂದ್ರಶೇಖರ ಪೂಜಾರ್, ಬಿ.ಎಂ.ಸತೀಶ್ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಕೊಟ್ರೇಶ ಗೌಡ, ರಾಜು ವೀರಣ್ಣ, ಪ್ರವೀಣ ಜಾಧವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net