ಸಣ್ಣ ಪ್ರಯತ್ನದಿಂದ ದೊಡ್ಡ ಬದಲಾವಣೆ

ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿಗೆ ನೀರೆರೆಯಲಾಯಿತು. ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲ ರಾವ್, ಡಾ.ಎಚ್.ಬಿ. ಅರವಿಂದ್, ಹರ್ಷವರ್ಧನ್, ಶೈಲಜಾ ಇದ್ದರು.
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಸಿಗೆ ನೀರೆರೆಯಲಾಯಿತು. ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲ ರಾವ್, ಡಾ.ಎಚ್.ಬಿ. ಅರವಿಂದ್, ಹರ್ಷವರ್ಧನ್, ಶೈಲಜಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಸಂರಕ್ಷಣೆ ಎಲ್ಲರ ಹೊಣೆ
  • ಡಿಸಿ ಗಂಗಾಧರ ಸ್ವಾಮಿ ಹೇಳಿಕೆ
ದಾವಣಗೆರೆ : ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ, ಸಣ್ಣ ಸಣ್ಣ ಪ್ರಯತ್ನಗಳ ಮೂಲಕ ದೊಡ್ಡ ಬದಲಾವಣೆ ತರುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಉಪದೇಶ ನೀಡುವುದರಿಂದ ಪ್ರಯೋಜನವಿಲ್ಲ. ಸ್ವತಃ ಆಚರಣೆಗೆ ತರಬೇಕು. ದೈನಂದಿನ ಬದುಕಿನಲ್ಲಿ ಸಾಧ್ಯವಾದ ಮಟ್ಟಿಗೆ ಪರಿಸರ ಸ್ನೇಹಿಯಾಗಿರಬೇಕು. ಅಂಥ ಪ್ರಜ್ಞೆ ಸಾರ್ವಜನಿಕರಲ್ಲಿ ಮೂಡಬೇಕು ಎಂದು ಆಶಿಸಿದರು.
ಹೆಚ್ಚು ಗಿಡಗಳನ್ನು ಬೆಳೆಸಬೇಕು, ಕನಿಷ್ಠ ಪಕ್ಷ ಇರುವ ಗಿಡಗಳನ್ನಾದರೂ ಉಳಿಸಬೇಕು. ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಸಾಮೂಹಿಕ ಸಾರಿಗೆ ಬಳಸಬೇಕು. ಪ್ಲಾೃಸ್ಟಿಕ್ ಉಪಯೋಗ ಕಡಿಮೆ ಮಾಡಬೇಕು. ಸೈಕಲ್ ಸವಾರಿ ರೂಢಿಸಿಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ಜನಸಂಖ್ಯೆ 5 ಲಕ್ಷ ಇದೆ. ಕೇವಲ 300 ಪೌರ ಕಾರ್ಮಿಕರು ಇಡೀ ನಗರದ ನೈರ್ಮಲ್ಯ ಕಾಪಾಡಬೇಕಾದ ಸವಾಲಿದೆ. 26 ಸಾವಿರ ನಾಯಿಗಳಿವೆ. ಇರುವ ವ್ಯವಸ್ಥೆಯಲ್ಲಿ ಸರ್ಕಾರ, ಸ್ಥಳೀಯ ಸಂಸ್ಥೆಗಳು ಒಳ್ಳೆಯ ಕೆಲಸ ಮಾಡುತ್ತಿವೆ. ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಂಗೇಗೌಡ ಅವರು ಮಾತನಾಡಿ, ಹಸಿರೇ ಉಸಿರು. ಪರಿಸರವಿಲ್ಲದೆ ನಾವಿಲ್ಲ. ಪರಿಸರ ಮಾಲಿನ್ಯ ಹೆಚ್ಚುತ್ತಿರುವುದರಿಂದ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಧ್ರುವಗಳಲ್ಲಿ ಮಂಜುಗಡ್ಡೆ ಕರಗಿ, ಸಮುದ್ರದ ಮಟ್ಟ ನಿಧಾನವಾಗಿ ಏರುತ್ತಿದೆ. ಯಾವುದೇ ಒಂದು ಭಾಗದಲ್ಲಿ ಪರಿಸರಕ್ಕೆ ಹಾನಿಯಾದರೆ, ಅದರ ದುಷ್ಪರಿಣಾಮ ಮತ್ತೊಂದು ಭಾಗದ ಮೇಲೆಯೂ ಬೀರುತ್ತದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಹರ್ಷವರ್ಧನ್ ಮಾತನಾಡಿದರು. ಉಪ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ನವೀನ್, ಪರಿಸರ ಅಧಿಕಾರಿ ಶೈಲಜಾ, ಡಾ.ಕೆ.ಸಿ. ದೇವೆಂದ್ರಪ್ಪ ಇದ್ದರು.

ಪರಿವರ್ತನೆ ಸಾಧ್ಯ

ಪರಿಸರಕ್ಕೆ ಹಾನಿಯಾಗುತ್ತಿದ್ದು ಅದರಿಂದ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಆದರೆ ಎಲ್ಲರೂ ಮನಸ್ಸು ಮಾಡಿದರೆ ಈ ಚಿತ್ರಣ ಬದಲಿಸಲು ಸಾಧ್ಯವಿದೆ ಎಂದು ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದರು.
ರಾಜ್ಯದ ನೈಸರ್ಗಿಕ ಸೌಂದರ್ಯದ ಬಗ್ಗೆ ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಅದನ್ನು ರಕ್ಷಿಸಬೇಕಾದ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
‘ಒಂದು ಸಸಿ ತಾಯಿ ಹೆಸರಿನಲ್ಲಿ’ ಎಂದು ಸಂಕಲ್ಪ ಮಾಡಬೇಕು. ಕಾಡನ್ನು ಉಳಿಸಿ ಬೆಳೆಬೇಕು. ಪ್ಲಾೃಸ್ಟಿಕ್ ಬದಲು ಬಟ್ಟೆಯ ಚೀಲ ಬಳಸಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು 4 ರೀತಿಯಲ್ಲಿ ವಿಂಗಡಿಸಿ ಕೊಡಬೇಕು ಎಂದರು.
"

ಪರಿಸರ ಸಂರಕ್ಷಣೆ ವಿಷಯದಲ್ಲಿ ಸ್ಥಳೀಯ ಸಮಸ್ಯೆಗಳ ಕಡೆಗೆ ಮೊದಲು ಗಮನ ಹರಿಸಬೇಕು. ನದಿಗಳು ಕಲುಷಿತವಾಗುತ್ತಿವೆ. ನಮ್ಮ ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯ ಸ್ಥಿತಿಯೂ ಬೇರೆಯಾಗಿಲ್ಲ. ನೀರನ್ನು ಹೇಗೆ ಉಳಿಸಬಹುದು ಎಂದು ಆಲೋಚಿಸಬೇಕು. ಗೃಹಿಣಿಯರು ಅಡುಗೆ ಮನೆ ತ್ಯಾಜ್ಯ ಸರಿಯಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು.

— ಡಾ.ಎಚ್.ಬಿ. ಅರವಿಂದ್, ಬಿಐಇಟಿ ಪ್ರಾಚಾರ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net