ಸಂದಿಗ್ಧದಲ್ಲಿ ಭದ್ರಾ ಅಚ್ಚುಕಟ್ಟು ರೈತ

ಭದ್ರಾ ಜಲಾಶಯ
ಭದ್ರಾ ಜಲಾಶಯ
Published on

ಪ್ರಮುಖ ಮುಖ್ಯಾಂಶಗಳು

  • ರೈತ ಮುಖಂಡರಲ್ಲೇ ಭಿನ್ನ ಅಭಿಪ್ರಾಯ
  • ಐಸಿಸಿ ಸಭೆ ಕರೆಯಲು ಒತ್ತಡ

ರಮೇಶ ಜಹಗೀರದಾರ್ ದಾವಣಗೆರೆ :

ಭತ್ತ ನಾಟಿ ಮಾಡಲು ಸಮಯ ಮೀರುವ ಮುನ್ನವೇ ಭದ್ರಾ ಜಲಾಶಯದ ನೀರನ್ನು ನಾಲೆಗಳಿಗೆ ಹರಿಸುವ ಸಂಬಂಧ ಸರ್ಕಾರ ನಿರ್ಧಾರಕ್ಕೆ ಬರಬೇಕಿದೆ. ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ತೀರ್ಮಾನಿಸಬೇಕು ಎನ್ನುವ ಒತ್ತಡ ರೈತ ಮುಖಂಡರಿಂದ ಬರುತ್ತಿದೆ. ಡ್ಯಾಮ್‌ನ ಒಳಹರಿವು, ನೀರಿನ ಸಂಗ್ರಹ ಆಧರಿಸಿ ಸರ್ಕಾರ ಮುಂದಿನ ಹೆಜ್ಜೆ ಇಡಬೇಕಿದೆ.

ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 165.9 ಅಡಿ ಇದೆ. ಡ್ಯಾಮ್ ಭರ್ತಿಯಾಗಲು ಇನ್ನೂ 20 ಅಡಿಯಷ್ಟು ನೀರು ಶೇಖರಣೆಯಾಗಬೇಕು. ನಾಲೆಗೆ ಬಿಡಬೇಕಾದರೆ ಕನಿಷ್ಠ 170 ಅಡಿಯಷ್ಟಾದರೂ ನೀರಿರಬೇಕು ಎಂಬುದು ಕೆಲವರ ವಾದ. ಈಗಲೇ ಬಿಟ್ಟರೂ ತೊಂದರೆ ಇಲ್ಲ, ಇನ್ನೂ ಮಳೆಗಾಲ ಮುಗಿದಿಲ್ಲ ಎಂಬ ಮತ್ತೊಂದು ವಾದವೂ ಇದೆ.
ಅಚ್ಚುಕಟ್ಟಿನಲ್ಲಿ ಇಷ್ಟು ಹೊತ್ತಿಗಾಗಲೇ ಭತ್ತದ ನಾಟಿ ಮುಗಿಯಬೇಕಿತ್ತು. ಕಳೆದ ವರ್ಷ ರೈತರು ಜುಲೈನಲ್ಲೇ ಬೀಜ ಚೆಲ್ಲಿ, ಸಸಿಮಡಿ ಮಾಡಿಕೊಂಡು ನಾಟಿಯನ್ನೂ ಮುಗಿಸಿದ್ದರು. ಈ ವರ್ಷ ಹಾಗಾಗಿಲ್ಲ. ಆಗಸ್ಟ್ ಮೊದಲ ವಾರ ಮುಗಿಯುತ್ತ ಬಂದರೂ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿಲ್ಲ. ನಾಲೆಗೆ ನೀರು ಹರಿಸಿದ ನಂತರ ಬೀಜ ಚೆಲ್ಲಿ ಸಸಿಮಡಿ ಮಾಡಿಕೊಳ್ಳಬೇಕಿದೆ. ಎಲ್ಲೋ ಕೆಲ ರೈತರು ಹಳ್ಳದ ನೀರು ಬಳಸಿಕೊಂಡು ನಾಟಿ ಮಾಡಿದ್ದಾರೆ.
ಈ ಹಂತದಲ್ಲಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಬಿಡುವುದಾದರೆ ಜಲಾಶಯದಲ್ಲಿ ಎಷ್ಟು ಟಿಎಂಸಿ ನೀರಿದೆ ಎಂಬುದು ಮುಖ್ಯ. ಡೆಡ್ ಸ್ಟೋರೇಜ್ ಹೊರತುಪಡಿಸಿ, ಕುಡಿಯುವ ನೀರಿಗೆ ನಿಗದಿತ ಪ್ರಮಾಣದ ನೀರನ್ನು ಮೀಸಲಿಡಬೇಕು. ಇನ್ನಿತರ ಅಂಶಗಳನ್ನು ಪರಿಗಣಿಸಿ ಉಳಿಯುವ ನೀರೆಷ್ಟು, ಎಷ್ಟು ದಿನ ಹರಿಸಬಹುದು ಎಂಬ ಲೆಕ್ಕ ಹಾಕಬೇಕಾಗುತ್ತದೆ.

ಮಳೆಗಾಲಕ್ಕೋ ಬೇಸಿಗೆಗೊ?

ಡ್ಯಾಮ್‌ನಲ್ಲಿರುವ ನೀರನ್ನು ಇದೇ ಮಳೆಗಾಲದ ಬೆಳೆಗೆ ಬಿಡಬೇಕೋ ಅಥವಾ ಬೇಸಿಗೆಗೆ ಕಾದಿಟ್ಟುಕೊಳ್ಳಬೇಕೋ ಎಂಬ ಪ್ರಶ್ನೆ ಇದೆ. ಮಳೆಯ ಕೊರತೆ ಮುಂದುವರಿದು, ಜಲಾಶಯಕ್ಕೆ ಸಾಕಷ್ಟು ಒಳ ಹರಿವು ಬರದೇ ಇದ್ದರೆ ಏನು ಮಾಡಬೇಕು ಎಂಬ ಆತಂಕವೂ ಇದೆ.
ಈ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಈಗ ಇಲ್ಲ ಎಂದಾದರೆ ಬೇಸಿಗೆ ಬೆಳೆಗೆ ಕೊಡುತ್ತೇವೆ ಎನ್ನುವ ಭರವಸೆಯನ್ನಾದರೂ ನೀಡಬೇಕು ಎಂದು ಅಚ್ಚುಕಟ್ಟಿನ ಕೆಲವು ರೈತರು ಆಗ್ರಹಿಸುತ್ತಿದ್ದಾರೆ.
ಸಸಿಮಡಿ ಮಾಡಿಕೊಳ್ಳಲು ಎಕರೆಗೆ 5 ಸಾವಿರದ ವರೆಗೆ, ಮತ್ತು ಭತ್ತ ಬೆಳೆಯಲು ಎಕರೆಗೆ 40 ಸಾವಿರದ ವರೆಗೆ ರೈತರು ಬಂಡವಾಳ ಹಾಕಿರುತ್ತಾರೆ. ಎಲ್ಲವನ್ನೂ ಪರಿಗಣಿಸಿ ನಿರ್ಧಾರ ಮಾಡಬೇಕಾಗುತ್ತದೆ.
ಆ. 15ರ ಒಳಗಾಗಿ ನಾಟಿ ಕಾರ್ಯ ಮುಗಿಯಬೇಕು. ಇನ್ನೂ ತಡವಾದರೆ ಇಳುವರಿ ಕುಂಠಿತವಾಗುತ್ತದೆ ಎನ್ನುತ್ತಾರೆ ಅನುಭವಿ ರೈತರು. ಏನೇ ನಿರ್ಧಾರವಿದ್ದರೂ ಬೇಗೆನೆ ತೆಗೆದುಕೊಳ್ಳಬೇಕು ಎಂಬ ಮಾತು ಕೇಳಿಬಂದಿದೆ.
"

ರೈತರ ಜೀವನ ಮುಂಗಾರು ಜತೆಗಿನ ಜೂಜಾಟ ಎಂಬುದು ಅಕ್ಷರಶಃ ನಿಜ. ಭದ್ರಾ ಅಚ್ಚುಕಟ್ಟು ರೈತರ ಸ್ಥಿತಿಯೂ ಅದೇ ಆಗಿದೆ. ಜಲಾಶಯದ ಒಳಹರಿವು ಕಡಿಮೆ ಇದೆ. ನೀರಿನ ಮಟ್ಟ 170 ಅಡಿಯಾದರೂ ತಲುಪಿದರೆ ಒಳ್ಳೆಯದು. ಬೇಸಿಗೆಯಲ್ಲಿ ಹೇಗೆ ಎಂಬುದನ್ನೂ ಆಲೋಚಿಸಬೇಕಿದೆ. ಈಗ ನಿರ್ಧಾರ ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ಕರೆದು ಚರ್ಚಿಸಬೇಕು. ನನ್ನ ಪ್ರಕಾರ ಐಸಿಸಿ ಸಭೆಗಳಲ್ಲಿ ರೈತರು ಮತ್ತು ಅಧಿಕಾರಿಗಳಷ್ಟೇ ಇರಬೇಕು.

— ತೇಜಸ್ವಿ ಪಟೇಲ್, ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net