ಹಿಂದೂ ಜನಸಂಖ್ಯೆ ತಗ್ಗದಂತೆ ಎಚ್ಚರವಹಿಸಿ

ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮವನ್ನು ಯರಗುಂಟೆ ಕ್ಷೇತ್ರದ ಪರಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಸಿ.ಆರ್.ಮುಕುಂದ, ಆಲೂರು ನಿಂಗರಾಜ್, ವೆಂಕಟೇಶ್, ಕಲ್ಯಾಣಮ್ಮ ಇತರರಿದ್ದರು.
ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮವನ್ನು ಯರಗುಂಟೆ ಕ್ಷೇತ್ರದ ಪರಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಸಿ.ಆರ್.ಮುಕುಂದ, ಆಲೂರು ನಿಂಗರಾಜ್, ವೆಂಕಟೇಶ್, ಕಲ್ಯಾಣಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೆಸ್ಸೆಸ್‌ನ ಸಹ ಸರಕಾರ್ಯವಾಹ ಮುಕುಂದ ಕಿವಿಮಾತು
  • ದಾವಣಗೆರೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ
  • ಇನ್ನೂ ಜೀವಂತವಿರುವ ಅಸ್ಪಶ್ಯತೆ, ಜಾತೀಯತೆ
ದಾವಣಗೆರೆ: ಸನಾತನ ಹಿಂದೂ ಮೌಲ್ಯ ಮತ್ತು ಗುಣಗಳನ್ನು ಮುಂದಿನ ಪೀಳಿಗೆಗೆ ನೀಡಬೇಕು. ಇದಕ್ಕಾಗಿ ಹಿಂದೂ ಸಮಾಜದ ಜನಸಂಖ್ಯೆ ಕಡಿಮೆ ಆಗದಂತೆ ಜನಜಾಗೃತಿ ಮೂಡಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಸಿ.ಆರ್.ಮುಕುಂದ ಆಶಿಸಿದರು.
ನಗರದ ಕೊಂಡಜ್ಜಿ ರಸ್ತೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಆರೆಸ್ಸೆಸ್ ಮೂಲಕ ಜಾಗೃತ ಹಿಂದೂ ಸಮಾಜ ಹಿಂದೂ ಮೌಲ್ಯಗಳನ್ನು ಉಳಿಸಿಕೊಂಡುಬಂದಿದೆ. ಇದನ್ನು ಯುವ ಪೀಳಿಗೆ ದೀರ್ಘಕಾಲ ಉಳಿಸಿಕೊಳ್ಳಬೇಕಾದರೆ ಹಿಂದೂ ಸಮಾಜದ ಜನಸಂಖ್ಯೆಯೂ ಹೆಚ್ಚಬೇಕು ಎಂದು ಪ್ರತಿಪಾದಿಸಿದರು.
ಜಗತ್ತಿನ ಎಲ್ಲ ದೇಶಗಳಿಗೂ ಜನಸಂಖ್ಯೆ ತಗ್ಗುವ ಹೆದರಿಕೆ ಇದೆ. ಹೆಚ್ಚು ಜನಸಂಖ್ಯೆಯುಳ್ಳ ಚೀನಾದಲ್ಲಿ ಒಂದೇ ಮಗುವನ್ನು ಹೊಂದುವ ನಿಯಮ ಜಾರಿಯಾಗಿದೆ. ಹೀಗಾಗಿ ಚೀನಾ ಇನ್ನು 10 ವರ್ಷದಲ್ಲಿ ವೃದ್ಧರ ದೇಶವಾಗಲಿದೆ. ಯುರೋಪಿನ ಅನೇಕ ದೇಶಗಳು ಕೂಡ ವೃದ್ಧರ ತಾಣವಾಗುತ್ತಿವೆ ಎಂದರು.
ಭಾರತ ಹೆಚ್ಚು ಯುವಕರನ್ನು ಹೊಂದಿದ ದೇಶವಾಗಿದೆ. ಮತಾಂತರ ಅಥವಾ ಅಕ್ರಮ ನುಸುಳುಕೋರರ ಕಾರಣಕ್ಕೆ ಇಲ್ಲಿನ ಹಿಂದೂ ಜನಸಂಖ್ಯೆ ಕ್ಷೀಣಿಸಬಾರದು. ಮತಾಂತರ ತಡೆಯುವುದು ಹಾಗೂ ವಿದೇಶಗಳ ಅಹಿಂದೂಗಳು ಭಾರತದಲ್ಲಿ ನೆಲೆಸಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಹಿಂದು ಸಮಾಜ ಒಳಪದರಗಳ ಪದ್ಧತಿ, ಜಾತಿ-ಮತ ಭೇದದಿಂದ ಹೊರಬಂದಾಗ ಮಾತ್ರ ದೇಶ ಗಟ್ಟಿಯಾಗಿ ಇರಲಿದೆ. ಇದಕ್ಕಾಗಿ ಆರೆಸ್ಸೆಸ್ ಬಯಸುವ ಪಂಚ ಪರಿವರ್ತನೆಗಳ ಅಗತ್ಯವಿದೆ. ಕುಟುಂಬ ವ್ಯವಸ್ಥೆ ಬಲಪಡಿಸುವ ಕುಟುಂಬ ಪ್ರಬೋಧನೆ, ದೇಶದಲ್ಲಿ ಸಾಮರಸ್ಯ ಅಚರಣೆ, ಪರಿಸರ ಸಂರಕ್ಷಣೆ, ಸ್ವದೇಶಿ ಭಾವನೆ ಹಗೂ ನಾಗರಿಕ ಕರ್ತವ್ಯಗಳ ಪಾಲನೆಗೆ ಒತ್ತು ನೀಡಬೇಕಿದೆ ಎಂದರು.
ಹಿಂದೂಗಳು ಇಂದು ರಾಮ-ಕೃಷ್ಣ, ಕಾಶಿ ಅಯೋಧ್ಯೆ, ಕಾಶ್ಮೀರದ ಹೆಸರಿನಲ್ಲಿ ಒಗ್ಗಟ್ಟಾದರೂ ಕೂಡ ಇಂದಿಗೂ ಅಸ್ಪಶ್ಯತೆ ಹಳ್ಳಿಗಳಲ್ಲಿ ಜೀವಂತವಿದೆ. ಕೆಲವು ಸ್ಮಶಾನ ಮತ್ತು ದೇವಸ್ಥಾನಗಳಲ್ಲಿ ಎಲ್ಲ ಜಾತಿಯವರಿಗೆ ಪ್ರವೇಶ ಸಿಗುತ್ತಿಲ್ಲ. ಒಂದೇ ಮೂಲದ ನೀರನ್ನು ಎಲ್ಲ ಜಾತಿಯ ಜನರು ಕುಡಿಯಲು ಆಗುತ್ತಿಲ್ಲ. ಈ ದೋಷಗಳಿಂದ ಹೊರತರುವತ್ತ ಆರೆಸ್ಸೆಸ್ ಪ್ರಯತ್ನ ನಡೆಸುತ್ತಿದೆ.
ಹಿಂದೂ ಎಂಬುದು ಕೇವಲ ಪೂಜಾ ಪದ್ಧತಿಯಲ್ಲ. ಅದೊಂದು ರಾಷ್ಟ್ರೀಯತೆ ಆಗಿದೆ. ಹಿಂದೂಗಳು ಆತ್ಮವಿಸ್ಮತಿಯಿಂದ ಹೊರಬರಲು, ಸ್ವಾರ್ಥ ಮನೋಭಾವದಿಂದ ದೂರವಿರಲು ಹಾಗೂ ಅಸಂಘಟನೆಯಿಂದ ವಿಮುಖರಾಗಿ ಹಿಂದೂ ಎಂದರೆ ಹೆಮ್ಮೆಯಿಂದ ಹೇಳಿಕೊಳ್ಳುವ ವಾತಾವರಣವನ್ನು ಆರೆಸ್ಸೆಸ್ ಮೂಡಿಸಿದೆ ಎಂದರು.
ನೂರು ವರ್ಷದಲ್ಲಿ ಸಂಘ ಸಾಧಿಸಿದ ದಾರಿಗಳನ್ನು ನೆನೆಸುತ್ತ ‘ನಾವೆಲ್ಲ ಹಿಂದು ನಾವೆಲ್ಲ ಒಂದು’ ಎಂಬ ಮನೋಭಾವದ ಪಾಂಚಜನ್ಯ ಮೊಳಗಿಸಲು ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದು ತಿಳಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಆಲೂರು ನಿಂಗರಾಜ್ ಮಾತನಾಡಿ ಆರೆಸ್ಸೆಸ್ ಜಾತಿವಾದಿಯಲ್ಲ. ಹಿಂದೂ ಸಮಾಜದ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸುತ್ತಿದೆ ಎಂದರು.
ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ ಛತ್ರಪತಿ ಶಿವಾಜಿ, ಕೃಷ್ಣದೇವರಾಯರಂತಹ ವೀರರ ಹೋರಾಟದ ಹಾದಿಯಲ್ಲಿ ನಮ್ಮ ಧರ್ಮ ಮತ್ತು ಸಂಸ್ಕೃತಿ ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.
ಯರಗುಂಟೆ ಕ್ಷೇತ್ರದ ಪರಮೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಕಲ್ಯಾಣಮ್ಮ ಇದ್ದರು. ನವ್ಯಾ ರಾಯ್ಕರ್, ಸಿರಿ, ಬೃಂದಾ, ಪದ್ಮಶ್ರೀ ಅವರು ಭರತನಾಟ್ಯ ಪ್ರದರ್ಶಿಸಿದರೆ, ಸಂಜೀವಿನಿ ಭಜನಾ ಮಂಡಳಿ ಭಜನೆಗಳನ್ನು, ಗಾಯತ್ರಿ-ವಿಮಲಾ ಅವರು ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಗಾನವಿ, ಶಿವಾಜಿ ಮಹಾರಾಜರ ಘೋಷಣೆ ಅಭಿವ್ಯಕ್ತಪಡಿಸಿದರು. ಪ್ರತಿಮಾ ಮಲ್ಲೇಶ್ ಪ್ರಾರ್ಥನೆಗೀತೆ ಹಾಡಿದರೆ, ರಾಜನಹಳ್ಳಿ ಶಿವಕುಮಾರ್ ಸ್ವಾಗತಿಸಿದರು. ಮಹಂತೇಶ್ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಿಬಾರದ ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಿಂದ ನಡೆದ ಶೋಭಾಯಾತ್ರೆಯಲ್ಲಿ ಕಲಾ ತಂಡಗಳು ಮೆರುಗು ನೀಡಿದವು. ಸ್ಥಳೀಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಹಿಂದೂ ಸಂಗಮದ ಮೂಲಕ ನಾಡು ಮತ್ತು ದೇಶದ ಅಭಿವೃದ್ಧಿಯ ಚರ್ಚೆಯಾಗಬೇಕು. ಭಿನ್ನಾಭಿಪ್ರಾಯ ಮರೆತು ಶಾಂತಿಪ್ರಿಯರಾಗಿ ಬಾಳಬೇಕು. ಯುವಪೀಳಿಗೆ ಸಂಸ್ಕಾರವಂತರಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net