ಡಿಡಿಪಿಐ ಎದುರು ಸಮಸ್ಯೆಗಳ ಸುರಿಮಳೆ

ಸಾಸ್ವೆಹಳ್ಳಿಯ ಉರ್ದು ಶಾಲೆಗೆ ದಾವಣಗೆರೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ರಸಾದ್ ಅವರು ಗುರುವಾರ ಭೇಟಿ ನೀಡಿದರು. ಉರ್ದು ಇಸಿಒ ಜಾಕಿರ್, ಸಿಆರ್‌ಪಿ ಆಸಿಫ್ ಉಲ್ಲಾ, ಶಾಲಾ ಶಿಕ್ಷಕರು ಇದ್ದರು.DDPI
ಸಾಸ್ವೆಹಳ್ಳಿಯ ಉರ್ದು ಶಾಲೆಗೆ ದಾವಣಗೆರೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ರಸಾದ್ ಅವರು ಗುರುವಾರ ಭೇಟಿ ನೀಡಿದರು. ಉರ್ದು ಇಸಿಒ ಜಾಕಿರ್, ಸಿಆರ್‌ಪಿ ಆಸಿಫ್ ಉಲ್ಲಾ, ಶಾಲಾ ಶಿಕ್ಷಕರು ಇದ್ದರು.DDPI
Published on
ಸಾಸ್ವೆಹಳ್ಳಿ: ಹೋಬಳಿಯ ಕೆಲವು ಪ್ರೌಢಶಾಲೆಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಡಿಡಿಪಿಐ ಕೃಷ್ಣಪ್ರಸಾದ್ ಅವರಿಗೆ ಪಾಲಕರು ಮತ್ತು ಸಾರ್ವಜನಿಕರಿಂದ ನೂರಾರು ಸಮಸ್ಯೆಗಳ ಸುರಿಮಳೆಯೇ ಎದುರಾಯಿತು.
ಬೆಳಗ್ಗೆ ಸಾಸ್ವೆಹಳ್ಳಿಯ ಉರ್ದು ಶಾಲೆಗೆ ಭೇಟಿ ನೀಡಿದ ಉಪನಿರ್ದೇಶಕರನ್ನು ಸುದ್ದಿಗಾರರು ಭೇಟಿಯಾಗಿ, ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಶೌಚಗೃಹದ ಸಮಸ್ಯೆ, ಕಾಯಂ ಶಿಕ್ಷಕರ ಕೊರತೆ, ರಾಜಕೀಯ ಪ್ರಭಾವದ ಅತಿಥಿ ಶಿಕ್ಷಕರ ದರ್ಬಾರ್ ಹಾಗೂ ರಾಜಕೀಯ ಪ್ರಭಾವ ಬಳಸಿ ಕಾಯಂ ಶಿಕ್ಷಕರು ಬೇರೆಡೆಗೆ ಡೆಪ್ಯುಟೇಶನ್ ಪಡೆದಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಒಮ್ಮೆ ಶಾಲೆಗೆ ಭೇಟಿ ನೀಡುವಂತೆ ಕೋರಿದರು.
ಈ ವೇಳೆ ಪ್ರತಿಕ್ರಿಯಿಸಿದ ಉಪನಿರ್ದೇಶಕರು, ಶಾಲಾ ಶೌಚಗೃಹಗಳ ನಿರ್ಮಾಣಕ್ಕೆ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದೆ, ಈಗಲೇ ಭೇಟಿ ನೀಡುವುದಾಗಿ ತಿಳಿಸಿದರು. ಆದರೆ, ಮಾಧ್ಯಮ ಪ್ರತಿನಿಧಿಗಳನ್ನು ಕೆಪಿಎಸ್ ಕಡೆಗೆ ಕಳುಹಿಸಿ, ತಾವು ಮಾತ್ರ ಲಿಂಗಾಪುರ ಪ್ರೌಢಶಾಲೆಯ ಕಡೆಗೆ ಪ್ರಯಾಣ ಬೆಳೆಸಿದರು.
ಇತ್ತ ಲಿಂಗಾಪುರ ಪ್ರೌಢಶಾಲೆಯಲ್ಲೂ ಸಮಸ್ಯೆಗಳೇ ಎದುರಾದವು. ಹೊನ್ನಾಳಿ ತಾಲೂಕು ಎಸ್‌ಡಿಎಂಸಿ ಸಂಘದ ತಾಲೂಕು ಘಟಕದ ಅಧ್ಯಕ್ಷ ಹುಣಸಘಟ್ಟದ ಶಿವಲಿಂಗಪ್ಪ ಅವರು ಉಪನಿರ್ದೇಶಕರನ್ನು ಭೇಟಿಯಾಗಿ, ಸರ್ಕಾರಿ ಶಾಲೆಗಳ ಶಿಕ್ಷಕರ ನಿರ್ಲಕ್ಷೃದ ಕಾರ್ಯವೈಖರಿ ಬಗ್ಗೆ ದೂರು ನೀಡಿದರು.
ಇದೇ ವೇಳೆ ಹನಗವಾಡಿ ಗ್ರಾಮದ ಸಾರ್ವಜನಿಕರು ಬಂದು, ತಮ್ಮ ಗ್ರಾಮದ ಶಾಲೆಯಲ್ಲಿ ಶಿಕ್ಷಕರೊಬ್ಬರು ಪಾಠ ಮಾಡದೆ ಕಾಲಹರಣ ಮಾಡುತ್ತಿರುವ ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು. ಎಲ್ಲ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಹೇಳಿದ ಉಪನಿರ್ದೇಶಕರು, ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಬೇಕಿದೆ ಎಂದು ಹೊರಟರು.
ಬಳಿಕ ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗಕ್ಕೆ ಮಾತ್ರ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚಿಸಿ ತೆರಳಿದರು. ಆದರೆ, ಅತ್ಯಂತ ಹೆಚ್ಚು ಸಮಸ್ಯೆಗಳಿರುವ ಇದೇ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಕಡೆಗೆ ಒಮ್ಮೆಯೂ ಮುಖ ಮಾಡದೆ ಭೇಟಿ ನೀಡದೆ ತೆರಳಿರುವುದು ಸಾರ್ವಜನಿಕರು ಹಾಗೂ ಪಾಲಕರು ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net