ಹಿಂದುಳಿದ ವರ್ಗಕ್ಕೆ ಬೇಕು ರಾಜಕೀಯ ಶಕ್ತಿ- ಶ್ರೀನಿವಾಸಾಚಾರಿ ಆಶಯ

ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್, ಜಿಲ್ಲಾ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಉದ್ಘಾಟಿಸಿದರು. ಪಿ. ಸುಜ್ಞಾನಮೂರ್ತಿ, ಎ.ರಾಜೇಶ್, ನಾಗೇಂದ್ರಾಚಾರ್, ಮರಿಯಾಚಾರ್, ಡಾ. ತಿಲಕ್, ಶ್ರೀಧರ್ ಸುಗಟೂರು ಇತರರಿದ್ದರು.
ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್, ಜಿಲ್ಲಾ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಉದ್ಘಾಟಿಸಿದರು. ಪಿ. ಸುಜ್ಞಾನಮೂರ್ತಿ, ಎ.ರಾಜೇಶ್, ನಾಗೇಂದ್ರಾಚಾರ್, ಮರಿಯಾಚಾರ್, ಡಾ. ತಿಲಕ್, ಶ್ರೀಧರ್ ಸುಗಟೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜಕಾರಣದಲ್ಲಿ ಜಾತಿ, ಹಣಬಲಕ್ಕೆ ಮನ್ನಣೆ
  • ಟಿಕೆಟ್ ನೀಡಲು ಗೆಲ್ಲುವ ಮಾನದಂಡವೇಕೆ?
  • ವಿದ್ಯಾರ್ಥಿಗಳು ಬಿಡಬೇಕು ಟಿವಿ, ಸಿನಿಮಾ ಗೀಳು
ದಾವಣಗೆರೆ: ಹಿಂದುಳಿದ ವರ್ಗಗಳಿಗೆ ರಾಜಕೀಯ ಶಕ್ತಿ ಬರದ ಹೊರತು ಮತ್ತೊಬ್ಬ್ಬರ ಅಡಿಯಾಳಾಗಿ ಇರಬೇಕಾಗುತ್ತದೆ. ನಾವು ಪ್ರಜಾಪ್ರಭುತ್ವದ ಪಾಲುದಾರರೂ ಆಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಹೇಳಿದರು.
ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್, ಜಿಲ್ಲಾ ವಿಶ್ವಕರ್ಮ ಸಮಾಜ, ಜಿಲ್ಲಾ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಇಲ್ಲಿನ ಜಿಲ್ಲಾ ಗುರುಭವನದಲ್ಲಿ ವಿಶ್ವಕರ್ಮ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣದಲ್ಲಿ ಮೊದಲೆಲ್ಲ ಜನಬಲ ಪದ ಕೇಳಿಬರುತ್ತಿತ್ತು. ಈಗ ಅದರ ಬದಲಾಗಿ ಜಾತಿ, ಹಣ ಬಲ ಸೇರ್ಪಡೆಯಾಗಿವೆ. ರಾಜಕೀಯ ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುವುದಾದರೆ ಹಿಂದುಳಿದ ಸಮಾಜಗಳು ವಿಧಾನಸಭೆ ಕಡೆ ಮುಖ ಮಾಡುವುದು ಹೇಗೆ? ಎಂದು ಪ್ರಶ್ನಿಸಿದರು.
90ಕ್ಕೂ ಹೆಚ್ಚು ಹಿಂದುಳಿದ ಸಮಾಜದವರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕಿದೆ. ಗೆಲ್ಲುವ ಮಾನದಂಡ ಬಿಟ್ಟು ಚುನಾವಣೆಯಲ್ಲಿ ಒಂದೆರಡು ಬಾರಿ ಸೋತರೂ ಸರಿ. ಟಿಕೆಟ್ ಕಲ್ಪಿಸಬೇಕು. ಈ ದಿಸೆಯಲ್ಲಿ ಸಂವಿಧಾನ ಅಥವಾ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಯೋಚಿಸಬೇಕಾದ ರಾಜಕೀಯ ಪಕ್ಷಗಳಲ್ಲಿ ಅಂಥಹ ಇಚ್ಛಾಶಕ್ತಿ ಇಲ್ಲ. ಅವರಲ್ಲಿ ಆತ್ಮಸಾಕ್ಷಿಯೂ ಇಲ್ಲ ಎಂದೂ ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಟಿವಿ, ಸಿನಿಮಾ ಗೀಳು ಬಿಡಬೇಕು. ಶ್ರಮ, ಗುರಿ ಮತ್ತು ಛಲ ಬೆಳೆಸಿಕೊಂಡರೆ ಯಾವ ಓದೂ ಸಹ ಕಷ್ಟವಾಗದು. ಇದರಿಂದ ಜೀವನದಲ್ಲಿ ಉನ್ನತಿ ಕಾಣಬಹುದು ಎಂದರು. ಕಳೆದ 78 ವರ್ಷದಲ್ಲಿ ವಿಶ್ವಕರ್ಮ ಸಮಾಜ ಒಬ್ಬರೇ ಶಾಸಕರನ್ನು ಕಂಡಿದೆ. ಸಮಾಜಕ್ಕೆ ರಾಜಕೀಯ ಸಮಾನತೆ ಬೇಕಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ರಾಜಕೀಯದ ಆಸೆ ಚಿಗುರಿದರೂ ಒಳ್ಳೆಯದು ಎಂದು ಹೇಳಿದರು.
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ಮಾತನಾಡಿ ವಿದ್ಯಾರ್ಥಿಗಳು ಓದಿನ ಜತೆಗೆ ಸಂಗೀತ, ಸಾಹಿತ್ಯ ಕಲೆ, ಕರಕುಶಲ ಕಲೆಗಳಲ್ಲಿ ತೊಡಗುವ ಅಭ್ಯಾಸ ಬೆಳೆಸಿಕೊಳ್ಳಬೇಕು. ರಾಜಕಾರಣಕ್ಕೆ ಬರುವ ಗುರಿ ಇದ್ದಲ್ಲಿ ವಿದ್ಯಾರ್ಥಿ ಹಂತದಲ್ಲೇ ಪಕ್ಷಗಳ ಯುವ ಸಂಘಟನೆಗಳಲ್ಲಿ ಗುರುತಿಸಿಕೊಳ್ಳಿ ಎಂದೂ ಸಲಹೆ ನೀಡಿದರು.
ವಿಶ್ವಕರ್ಮ ಸಮಾಜದವರು ಎಲ್ಲೆಡೆ ಸಮುದಾಯ ಭವನ, ಕಾಳಮ್ಮನ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ಕೇಳುವುದನ್ನು ಬಿಡಬೇಕು. ವಿದ್ಯಾಸಂಸ್ಥೆ ಕಟ್ಟಲು ಮುಂದಾಗಬೇಕು. ಜಿಲ್ಲೆಗಳಲ್ಲಿ ಪ್ಲೇಸ್‌ಮೆಂಟ್ ಕೇಂದ್ರಗಳನ್ನು ತೆರೆಯಬೇಕು ಎಂದು ಆಶಿಸಿದರು.
ಎಸ್ಸೆಸ್ಸೆಲ್ಸಿ- ಪಿಯುನಲ್ಲಿ ಪ್ರತಿಭಾನ್ವಿತರಾದ ದಾವಣಗೆರೆ, ಚಿತ್ತದುರ್ಗ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳ 80ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಷನ್‌ನ ಅಧ್ಯಕ್ಷ ಎ.ರಾಜೇಶ್, ಹರಪನಹಳ್ಳಿ ತಹಸೀಲ್ದಾರ್ ಬಿ.ವಿ. ಗಿರೀಶ್‌ಬಾಬು, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಎಂ.ಎಲ್. ವಿನಾಯಕ ಆಚಾರ್ಯ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರಾಚಾರ್, ಮರಿಯಾಚಾರ್, ಡಾ. ತಿಲಕ್, ಶ್ರೀಧರ್ ಸುಗಟೂರು, ರಾಜಗುರು, ಉಷಾ ಭಾಸ್ಕರ್ ಇತರರಿದ್ದರು.

ವಿಶ್ವಕರ್ಮ ನಿಗಮಕ್ಕೆ ಸರ್ಕಾರ 50 ಕೋಟಿ ರೂ. ಅನುದಾನ ನೀಡಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ 50 ಲಕ್ಷ ರೂ.ಗಳ ಬಡ್ಡಿರಹಿತ ಶೈಕ್ಷಣಿಕ ಸಾಲ ನೀಡಲು ಅವಕಾಶವಿದೆ. ಆದರೆ ಯಾರೂ ಇದರ ಲಾಭ ಪಡೆಯುತ್ತಿಲ್ಲ. ಅರಿವು ಸಾಲ ಯೋಜನೆಯಡಿ ಉನ್ನತ ಶಿಕ್ಷಣಕ್ಕೆ ಸಾಲ ನೀಡಲಾಗುತ್ತಿದೆ. ಇದನ್ನು ಬಳಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net