ಮೂಲಭೂತ ಹಕ್ಕುಗಳ ಜಾಗೃತಿ ಅಗತ್ಯ

ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ. ಸಿದ್ದಪ್ಪಾಜಿ ಹೇಳಿಕೆ
Awareness
ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ. ಸಿದ್ದಪ್ಪಾಜಿ ಉದ್ಘಾಟಿಸಿದರು. ಎಚ್. ಮೋಹನ್, ಎಲ್. ಜಯಪ್ಪ, ರೂಪ್ಲಿಬಾಯಿ, ಎಂ.ಬಿ. ರಾಜಪ್ಪ, ಬಿ.ಎಸ್. ಕಿರಣ್‌ಕುಮಾರ್ ಇತರರಿದ್ದರು.Awareness
Published on: 

ಚನ್ನಗಿರಿ: ಪ್ರತಿಯೊಂದು ಮಗುವಿಗೂ ಸಿಗಬೇಕಾದ ಮೂಲಭೂತ ಹಕ್ಕುಗಳು ಹಾಗೂ ಶಿಕ್ಷಣದ ಕುರಿತು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಪಿ. ಸಿದ್ದಪ್ಪಾಜಿ ಹೇಳಿದರು.

ನ್ಯಾಯಾಲಯದ ಆವ ರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತರಳಬಾಳು ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಬಾಲ್ಯ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುರಕ್ಷಿತ ಬಾಲ್ಯ ಅಭಿಯಾನವು ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ ಹಾಗೂ ಸರ್ವತೋಮುಖ ಅಭಿವೃದ್ಧಿಯನ್ನು ಖಾತ್ರಿಪಡಿಸಲು ರಾಷ್ಟ್ರೀಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ದೇಶಾದ್ಯಂತ ಹಮ್ಮಿಕೊಂಡ ಆಂದೋಲನವಾಗಿದೆ. ಮಕ್ಕಳ ಮೇಲಾಗುವ ದೈಹಿಕ, ಲೈಂಗಿಕ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳಗಳನ್ನು ತಡೆದು ಅವರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.

ಪಾಲಕರು ತಮ್ಮ ಕುಟುಂಬದ ಆರ್ಥಿಕ ಕಷ್ಟಗಳಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವುದನ್ನು ತಡೆಯಬೇಕು. ಅಂಗಡಿ ಹಾಗೂ ಗ್ಯಾರೇಜ್‌ಗಳಲ್ಲಿ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಕಾನೂನಿನಡಿ ಅಪರಾಧ. ಪಟ್ಟಣ ಹಾಗೂ ನಗರ ಪ್ರದೇಶದ ಅಂಗಡಿಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ ಎಂದು ಹೇಳಿದರು.

ಪ್ರತಿಯೊಂದು ಮಗುವೂ ಶಿಕ್ಷಣದಿಂದ ವಂಚಿತವಾಗದೆ ಸಬಲೀಕರಣಗೊಳ್ಳುವ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಕಿವಿಮಾತು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಎಚ್. ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಪಿಎಸ್‌ಐ ರೂಪ್ಲಿಬಾಯಿ, ತರಳಬಾಳು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಬಿ. ರಾಜಪ್ಪ, ಶಾಲೆಯ ಮುಖ್ಯಶಿಕ್ಷಕ ಬಿ.ಎಸ್. ಕಿರಣ್‌ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಜಿ.ಎಸ್. ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net