ಔಷಧೀಯ ಗಿಡಗಳ ಜಾಗೃತಿ ಯಾನ!

 ದಾವಣಗೆರೆಯ ಸಸ್ಯಪ್ರೇಮಿ ಮಮತಾ ನಾಗರಾಜ್ ಸಾರ್ವಜನಿಕರಿಗೆ ಔಷಧೀಯ ಸಸ್ಯಗಳನ್ನು ವಿತರಿಸುತ್ತಿರುವುದು.
ದಾವಣಗೆರೆಯ ಸಸ್ಯಪ್ರೇಮಿ ಮಮತಾ ನಾಗರಾಜ್ ಸಾರ್ವಜನಿಕರಿಗೆ ಔಷಧೀಯ ಸಸ್ಯಗಳನ್ನು ವಿತರಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆಯ ಮಮತಾ ನಾಗರಾಜ್ ಅವರ ಸಸ್ಯಪ್ರೇಮ
  • ಜನರಿಗೆ ಬಟ್ಟೆ ಬ್ಯಾಗ್ ವಿತರಣೆ, ಪರಿಸರ ಸ್ವಚ್ಛತೆಯ ಕಾಳಜಿ
  • ನಾಟಕಗಳ ಎರಡು ಸಂಕಲನ ಕೃತಿಗಳ ಬಿಡುಗಡೆ
ದಾವಣಗೆರೆ: ಔಷಧೀಯ ಗಿಡಮೂಲಿಕೆಗಳ ಸಸ್ಯೋದ್ಯಾನ ಬೆಳೆಸಿ, ಕೇಳಿದ ಜನರಿಗೆ ಗಿಡಗಳನ್ನು ಉಚಿತವಾಗಿ ನೀಡುವುದಲ್ಲದೆ ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಗೃಹಿಣಿಯೊಬ್ಬರು ಸದ್ದಿಲ್ಲದೇ ವಿಶಿಷ್ಟ ಪರಿಸರದ ಕಾಯಕ ನಿರ್ವಹಿಸುತ್ತಿದ್ದಾರೆ.
ನಗರದ ಆಂಜನೇಯ ಬಡಾವಣೆ 8ನೇ ಕ್ರಾಸ್ ನಿವಾಸಿ ಮಮತಾ ನಾಗರಾಜ್, ಸಸ್ಯಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಜತೆಗೆ ಎಂ.ಎ, ಬಿಇಡಿ ಮುಗಿಸಿದ್ದಾರೆ. ಇವರ ಸಸ್ಯಪ್ರೀತಿಗೆ ಪತಿ, ಬಿಐಇಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಎಂ.ಎಸ್.ನಾಗರಾಜ್ ನೀರೆರೆಯುತ್ತ ಬಂದಿದ್ದಾರೆ.
ನಿವಾಸದ ಪಕ್ಕದ 30-60ರ ಅಳತೆಯ ಖಾಲಿ ನಿವೇಶನದಲ್ಲಿ ಸುಮಾರು 50ಕ್ಕೂ ಹೆಚ್ಚು ಗಿಡಗಳ ಸಸ್ಯೋದ್ಯಾನ ಸೃಷ್ಟಿಸಿಕೊಂಡಿದ್ದಾರೆ. ಅಡಸಾಲ, ಅಮೃತಬಳ್ಳಿ, ಲೋಳೆಸರ, ಲಕ್ಕಿ, ತುಳಸಿ, ನೆಲಬೇವು, ಹಿಪ್ಪಲಿ, ನಾಗದಾಳೆ, ಇನ್ಸುಲಿನ್, ದೊಡ್ಡಪತ್ರೆ, ಬಸಳೆ, ನುಗ್ಗೆ, ಮದರಂಗಿ, ಒಂದೆಲಗ, ಸ್ನೇಕ್ ಪ್ಲಾಂಟ್, ಚಕ್ರಮುನಿ, ಸರ್ಪಗಂಧ, ಮಧುನಾಶಿನಿ, ಬೆಟ್ಟದ ನೆಲ್ಲಿ, ನೆಲಬೇವು, ಕಾಡುಬಸಳೆ ಮೊದಲಾದ ಔಷಧೀಯ ಗಿಡಮೂಲಿಕೆಗಳೇ ಹೆಚ್ಚಿವೆ.
ಇನ್ನುಳಿದಂತೆ ಬಾಳೆ, ಪಪ್ಪಾಯ, ಪೇರಲ, ನೋನಿ, ಕರಿಬೇವು, ಬಳೆವಡಕ, ಹೊನೆಗೊನೆ ಸೊಪ್ಪು, ದಾಸವಾಳ ಹಾಗೂ ಶೋ ಗಿಡಗಳನ್ನೂ ಬೆಳೆಸಿದ್ದಾರೆ. ಜಾನಪದ ಪಾರಂಪರಿಕ ವೈದ್ಯದ ಸರ್ಟಿಫಿಕೇಟ್ ಕೋರ್ಸ್ ಮುಗಿಸಿ ಪಾರಂಪರಿಕ ವೈದ್ಯೆಯಾಗಿ ಅನೇಕರಿಗೆ ಪ್ರಕೃತಿದತ್ತವಾದ ಔಷಧೀಯ ಸಸ್ಯಗಳಿಂದ ಸಿಗುವ ಆರೋಗ್ಯ ಸಲಹೆ ನೀಡುತ್ತ ಬಂದಿದ್ದಾರೆ.
ನೇರ್ಲಿಗೆ ಗುರುಸಿದ್ದಪ್ಪ ಅವರ ಪಾರಂಪರಿಕ ವೈದ್ಯ ಪರಿಷತ್ ಮೂಲಕ 15 ವರ್ಷದ ಹಿಂದೆ ಶುರುವಾದ ’ಮನೆ ಮದ್ದು’ ಜಾಗೃತಿ ಕಾರ್ಯಕ್ರಮವೇ ಇದಕ್ಕೆಲ್ಲ ಪ್ರೇರಣೆ ಎನ್ನುತ್ತಾರೆ ಮಮತಾ. ಇದೇ ರೀತಿ ಶಾಲಾ-ಕಾಲೇಜು, ಕೃಷಿ ವಿಜ್ಞಾನ ಕೇಂದ್ರ ಇತರೆಡೆಗೆ ತೆರಳಿ 2 ವರ್ಷಗಳ ಕಾಲ ಔಷಧೀಯ ಸಸ್ಯಗಳ ಬಗ್ಗೆ ಸ್ವತಃ ಜಾಗೃತಿ ಮೂಡಿಸುತ್ತ ಬಂದಿರುವ ಅವರು ಯಾವುದೇ ಶಿಕ್ಷಣ ಸಂಸ್ಥೆ ಕರೆದರೂ ಈ ಬಗ್ಗೆ ತಿಳಿಸಿಕೊಡುವ ಉಮೇದು ಹೊಂದಿದ್ದಾರೆ.
ಸೀತಮ್ಮ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ, ಬಾಪೂಜಿ ಶಾಲೆ, ಎಂಇಎಸ್ ಕಾನ್ವೆಂಟ್‌ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಮಮತಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಾರಂಪರಿಕ ವೈದ್ಯ ಪರಿಷತ್, ಕಸ್ತೂರಬಾ ಸಮಾಜ, ವಚನಾಮೃತ ಸಂಸ್ಥೆ, ವನಿತಾ ಸಮಾಜ, ಪಂಡಿತ ಪುಟ್ಟರಾಜ ಸೇವಾ ಸಮಿತಿ, ಪರಿವರ್ತನಾ ವೇದಿಕೆಗಳಲ್ಲೂ ಶ್ರಮಿಸಿದ್ದಾರೆ.
ಆಂಜನೇಯ ಬಡಾವಣೆ ಹಿತರಕ್ಷಣಾ ಸಮಿತಿ ಮೂಲಕ ಪ್ರತಿ ಭಾನುವಾರ ನಡೆಯುವ ಉದ್ಯಾನ ಇತರೆ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿರುವ ಇವರು, ಹಸಿ ಹಗೂ ಒಣ ಕಸದ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿದ್ದಾರೆ. ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ರಸ್ತೆ ಪಕ್ಕದಲ್ಲಿ ತಾತ್ಕಾಲಿಕ ಬ್ಯಾಗ್‌ಗಳನ್ನು ಅಳವಡಿಸಿದ್ದಾರೆ.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಭೂತ ಓಡಿಸಲು ಸ್ವತಃ ಬಟ್ಟೆ ಬ್ಯಾಗ್‌ಗಳನ್ನು ತಮ್ಮ ಏರಿಯಾದ ಜನರಿಗೆ ನೀಡುತ್ತ ಅಂಗಡಿಗಳಿಗೆ ಬರುವಾಗ ಇದನ್ನೇ ಮರುಬಳಕೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ರಕ್ತಹೀನತೆ, ಮುಖದ ಮೊಡವೆಗಳು, ಗ್ಯಾಸ್ಟ್ರಿಕ್ ನೀಗಲು ತಾವೇ ತಯಾರಿಸಿದ ಮದ್ದು, ಹಲ್ಲುಪುಡಿ, ಹೇರ್ ಆಯಿಲ್, ವಿವಿಧ ಕಷಾಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಷ್ಟು ಸಾಲದೆಂಬಂತೆ ಬರವಣಿಗೆಯಲ್ಲೂ ಛಾಪು ಮೂಡಿಸಿದ್ದಾರೆ.
ಮೂಢನಂಬಿಕೆ, ಮಾದಕ ವ್ಯಸನ, ಆತ್ಮಹತ್ಯೆ ಮೊದಲಾದವುಗಳ ಬಗ್ಗೆ ಜಾಗೃತಿಗಾಗಿ ‘ಜೀವನ್ಮುಖಿ’ ಹಾಗೂ ‘ಜೀವನಾಡಿ’ ಎಂಬ ಎರಡು ನಾಟಕ ಸಂಕಲನಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಸ್ನೇಹಿತರ ಅಭಿಲಾಷೆಯಂತೆ ಔಷಧೀಯ ಸಸ್ಯಗಳ ಉಪಯುಕ್ತತೆ ಬಗ್ಗೆ ಪುಸ್ತಕ ಹೊರತರುವ ಆಲೋಚನೆ ಅವರದು. ‘ಧನ್ವಂತರಿ ವನ’ ನಿರ್ಮಾಣದ ನೇರ್ಲಿಗೆ ಗುರುಸಿದ್ದಪ್ಪ ಅವರ ಆಶಯಕ್ಕೆ ಕೈ ಜೋಡಿಸುವ ಅಭಿಲಾಷೆ ತೋಡಿಕೊಳ್ಳುತ್ತಾರೆ.

ವಿದ್ಯಾರ್ಥಿ ದೆಸೆಯಿಂದಲೂ ಔಷಧ ಹಾಗೂ ಇತರೆ ಸಸ್ಯಗಳನ್ನು ಬೆಳೆಸುತ್ತ ಬಂದಿದ್ದೇನೆ. ಅನೇಕರಿಗೆ ಅದನ್ನು ನೀಡುತ್ತಿದ್ದೇನೆ. ಶಾಲಾ ಕಾಲೇಜುಗಳು ಕರೆದರೆ ಔಷಧ ಸಸ್ಯಗಳ ಕುರಿತು ಮಾಹಿತಿ ನೀಡುವೆ.

— ಮಮತಾ ನಾಗರಾಜ್, ಸಸ್ಯಪ್ರೇಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net