ದಾವಣಗೆರೆ: ಜಮೀರ್ ಅಹ್ಮದ್ ಅವರನ್ನು ರಾಜಕೀಯವಾಗಿ ಮುಗಿಸಲು ಆಡಿಯೋ ವೈರಲ್ ಮಾಡುವ ಕುತಂತ್ರ ನಡೆದಿದೆ. ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಇಬ್ಬರೂ ಸೇರಿ ಈ ಹುನ್ನಾರ ನಡೆಸಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಗಂಭೀರ ಆರೋಪ ಮಾಡಿದರು.
ಎರಡು ಉಪಚುನಾವಣೆಗಳ ಪೈಕಿ ಬಾಗಲಕೋಟೆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಡಿ.ಕೆ. ಶಿವಕುಮಾರ್ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಿದರು. ಪ್ರತಿ ಬಾರಿ ಸಿದ್ದರಾಮಯ್ಯ ಅವರ ಪರ ಮಾತನಾಡುತ್ತ ಸಿಎಂ ಬದಲಾವಣೆಗೆ ವಿರೋಧ ಮಾಡುತ್ತ ಬಂದಿದ್ದ ಜಮೀರ್ ಅಹ್ಮದ್ ಅವರನ್ನು ಹೊಸ ಸಚಿವ ಸಂಪುಟದಲ್ಲಿ ಇರಿಸಬಾರದು ಎಂಬ ಕಾರಣಕ್ಕೆ ಈ ಹುನ್ನಾರ ನಡೆದಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಮೀರ್ ಅಹ್ಮದ್- ಸಿರಾಜ್ ಅಹ್ಮದ್ ನಡುವಿನ ಮಾತುಕತೆಯ ರೆಕಾರ್ಡ್ ಮಾಡಿಸುವುದು, ಫೋನ್ ಕದ್ದಾಲಿಕೆ ಮಾಡುವುದು ಕಲಂ 21ರ ಪ್ರಕಾರ ಮಹಾಪರಾಧ. ಪ್ರಭಾವಿ ಮಂತ್ರಿ ಬಿಟ್ಟರೆ ಸಾಮಾನ್ಯ ವ್ಯಕ್ತಿಯಿಂದ ರೆಕಾರ್ಡ್ ಮಾಡಿಸುವುದು ಸಾಧ್ಯವಿಲ್ಲ. ಎಸ್ಪಿ ಕಚೇರಿ ಅಥವಾ ಬೆಂಗಳೂರು ವಲಯದಿಂದಲೇ ಈ ಕೆಲಸ ನಡೆಯಲು ಸಾಧ್ಯ. ಇದಕ್ಕೆ ಮಲ್ಲಿಕಾರ್ಜುನ್ ಸೂತ್ರದಾರರು ಎಂದೂ ದೂರಿದರು.
ಆಡಿಯೋ ರೆಕಾರ್ಡ್ ಮಾಡಿಸಿದ್ದು ಯಾರು? ಸುದ್ದಿವಾಹಿನಿಗಳಿಗೆ ಬಿಡುಗಡೆ ಮಾಡಿಸಿದ್ದು ಯಾರು? ಎಂಬುದರ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಈ ಸಂಬಂಧ ಸಿಎಂ, ರಾಜ್ಯಪಾಲರಿಗೆ ಪತ್ರ ಬರೆಯಲಾಗುತ್ತಿದೆ. ನೂತನ ಸಚಿವ ಸಂಪುಟದಲ್ಲಿ ಮಲ್ಲಿಕಾರ್ಜುನ್,ಅವರ ಪುತ್ರ ಸಮರ್ಥ್‌ಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಆಗ್ರಹಿಸಿದರು.
ಯಾರೂ ಸಹ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು ಎಂದು ಮಾಜಿ ಸಚಿವ ಮಲ್ಲಿಕಾರ್ಜುನ್ ಹೇಳಿದ್ದಾರೆ. ಆ ಕೆಲಸ ಕಾಂಗ್ರೆಸ್‌ನದೇ ಹೊರತು ಬಿಜೆಪಿಯದಲ್ಲ. 2019ರಲ್ಲಿ ಸರ್ಜಿಕಲ್ ಸ್ಟ್ರೈಕ್ ಪ್ರಭಾವದಿಂದ ಸೋಲು ನಿಶ್ಚಿತ ಎಂದು ಅರಿತಿದ್ದ ಮಲ್ಲಿಕಾರ್ಜುನ್, ಆಗಿನ ಲೋಕಸಭೆ ಚುನಾವಣೆಗೆ ಎಚ್.ಬಿ. ಮಂಜಪ್ಪ ಅವರನ್ನು ಕಣಕ್ಕಿಳಿಸಿ ಬೆನ್ನಿಗೆ ಚೂರಿ ಹಾಕಲಿಲ್ಲವೆ? ಎಂದು ಪ್ರಶ್ನಿಸಿದರು.
1996ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನಯ್ಯ ಒಡೆಯರ್ ಅವರಿಗೆ ಮತ ಕೇಳದೆ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಎಸ್.ಎಚ್. ಪಟೇಲರಿಗೆ ಮತ ಹಾಕಿ ಎಂದಿದ್ದ ಮಲ್ಲಿಕಾರ್ಜುನ್, ಒಡೆಯರ್ ಅವರ ಬೆನ್ನಿಗೆ ಚೂರಿ ಹಾಕಿರಲಿಲ್ಲವೇ? ಇದು ಸುಳ್ಳು ಎನ್ನುವುದಾದಲ್ಲಿ ದಾವಣಗೆರೆ ದುಗ್ಗಮ್ಮನ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದೂ ಸವಾಲು ಹಾಕಿದರು.
ದಾವಣಗೆರೆಯಲ್ಲಿ ಮಲ್ಲಿಕಾರ್ಜುನ್ ನಿಜಕ್ಕೂ ಅಭಿವೃದ್ಧಿ ಕೆಲಸ ಮಾಡಿದ್ದರೆ ನನ್ನ ಅಥವಾ ಶ್ರೀನಿವಾಸ ದಾಸಕರಿಯಪ್ಪ ಅವರ ಠೇವಣಿ ಕಳೆಯಬೇಕಿತ್ತು. ಆಗ ನಾವು ನಿಜಕ್ಕೂ ಸೋಲು ಒಪ್ಪಿಕೊಳ್ಳುತ್ತಿದ್ದೆವು ಎಂದರು.
ಬಿಜೆಪಿಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ ವೈರಲ್ ಆದ ವಿಡಿಯೋದಲ್ಲಿ ಪ್ರಸ್ತಾಪಿಸಿದಂತೆ ನಾನು ಚುನಾವಣೆಯಲ್ಲಿ ಯಾವುದೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಹಾಗಿದ್ದರೆ ನಾನೇ ಗೆಲ್ಲುತ್ತಿದ್ದೆ. ಜಮೀರ್ ಅಹ್ಮದ್, ಸಿರಾಜ್ ಅಹಮದ್ ಅವರನ್ನು ನಾನು ಸಂಪರ್ಕಿಸಿಯೇ ಇಲ್ಲ. ಯಾರ ಕಾಲಿಗೂ ನಾನು ಬಿದ್ದಿಲ್ಲ. ಇದೆಲ್ಲವೂ ಸುಳ್ಳು ಎಂದರು.
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಹಣ-ಹೆಂಡ, ಸೀರೆ ಹಂಚಿ ಗೆಲುವು ಸಾಧಿಸಿದೆ. ನನ್ನ ತಂದೆ ದಾಸಕರಿಯಪ್ಪ ಅವರು ನನಗೆ ಒಳ್ಳೆಯದನ್ನು ಕಲಿಸಿದ್ದಾರೆ. ಮುಸ್ಲಿಮರಿಗೆ ಟಿಕೆಟ್ ನೀಡದ್ದಕ್ಕೆ ಕಾಂಗ್ರೆಸ್ ವಿರೋಧಿ ಮತಗಳು ಎಸ್‌ಡಿಪಿಐ ಪಾಲಾದವು. ಎಸ್‌ಡಿಪಿಐ ಜತೆ ಸೇರಿ ಷಡ್ಯಂತ್ರ ನಡೆಸಿದ್ದೇವೆ ಎಂಬುದು ಸತ್ಯಕ್ಕೆ ದೂರವಾದುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ. ಹಾಲೇಶ್, ಹರೀಶ್, ಟಿಂಕರ್ ಮಂಜಣ್ಣ, ಶಂಕರಗೌಡ ಬಿರಾದಾರ್, ಕಿಶೋರ್, ಶಿವನಗೌಡ ಪಾಟೀಲ್ ಇದ್ದರು.