ಉದ್ಯಾನ ಜಾಗದಲ್ಲಿ ಮಳಿಗೆಗಳ ನಿರ್ಮಾಣ ಯತ್ನ

ಆವರಗೆರೆ ಉದ್ಯಾನ ಜಾಗದಲ್ಲಿ ಮಳಿಗೆ ನಿರ್ಮಾಣ ಕುರಿತು ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ವಕೀಲ ಎಸ್.ಪರಮೇಶ್ ಆವರಗೆರೆ ಮಾತನಾಡಿದರು. ಎಸ್. ಚಂದ್ರಪ್ಪ, ಆವರಗೆರೆ ವಾಸು, ಗೌಡ್ರು ಶಿವಶರಣಪ್ಪ, ಟಿ.ಎಸ್. ನಾಗರಾಜ್ ಇದ್ದರು.
ಆವರಗೆರೆ ಉದ್ಯಾನ ಜಾಗದಲ್ಲಿ ಮಳಿಗೆ ನಿರ್ಮಾಣ ಕುರಿತು ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ವಕೀಲ ಎಸ್.ಪರಮೇಶ್ ಆವರಗೆರೆ ಮಾತನಾಡಿದರು. ಎಸ್. ಚಂದ್ರಪ್ಪ, ಆವರಗೆರೆ ವಾಸು, ಗೌಡ್ರು ಶಿವಶರಣಪ್ಪ, ಟಿ.ಎಸ್. ನಾಗರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಡೆಯಾಜ್ಞೆ ಉಲ್ಲಂಘಿಸಿ ಮುಂದುವರಿದ ಕಾಮಗಾರಿ
  • ತಹಸೀಲ್ದಾರ್ ಅಮಾನತಿಗೆ ವಕೀಲ ಪರಮೇಶ್ ಆಗ್ರಹ
  • ಶೀಘ್ರವೇ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಚಿಂತನೆ
ದಾವಣಗೆರೆ: ಆವರಗೆರೆ ಗ್ರಾಮದಲ್ಲಿ ಉದ್ಯಾನ ಮೀಸಲು ಜಾಗದಲ್ಲಿ ಪ್ರಾದೇಶಿಕ ಆಯುಕ್ತರ ತಡೆಯಾಜ್ಞೆ ನಡುವೆಯೂ ಅಕ್ರಮವಾಗಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿ ನಡೆದಿದೆ ಎಂದು ವಕೀಲ ಎಸ್.ಪರಮೇಶ್ ಆವರಗೆರೆ ತಿಳಿಸಿದರು.
ಆವರಗೆರೆಯ ಡೋ.ನಂ. 292-321ರಲ್ಲಿ ಸುಮಾರು 47,151 ಚದರ ಅಡಿ ವಿಸ್ತೀರ್ಣದ ಪಾರ್ಕ್ ಜಾಗವು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿದೆ. ಇಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಅಕ್ರಮವಾಗಿ 10 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
2008-09ರಲ್ಲಿ ಅಂದಿನ ಜಿಲ್ಲಾಧಿಕಾರಿ, ಸಿಎಂ ವಿಶೇಷ ಅನುದಾನದಡಿ 20.75 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿದ್ದರು. ಈ ಆಸ್ತಿಯು ಪಾಲಿಕೆಯ ಹೆಸರಿನಲ್ಲಿದ್ದು, ಇ-ಸ್ವತ್ತು ಇದೆ. ಈ ಕಾಂಪೌಂಡ್ ಧ್ವಂಸಗೊಳಿಸಲಾಗಿದೆ. ವಿಎ, ಆರ್‌ಐ ಉದ್ಯಾನಕ್ಕೆ ಮೀಸಲಾದ ಜಾಗ ಎಂಬ ವರದಿ ನೀಡಿದ್ದರೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಇದರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗುವುದು ಎಂದರು.
ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಕೆಲಸ ಮಾತ್ರ ಸ್ಥಗಿತವಾಗಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ತಹಸೀಲ್ದಾರ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯಾನ ಜಾಗ ಕಬಳಿಕೆ ಯತ್ನದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ. ಈ ಬಗ್ಗೆ ಜಿಲ್ಲಾ ಸಚಿವರಿಗೂ ದೂರು ನೀಡಿದ್ದೇನೆ. ಉದ್ಯಾನದ ಜಾಗ ಕಂದಾಯ ಭೂಮಿ ಅಲ್ಲ ಎಂದು ಕಂದಾಯ ಅಧಿಕಾರಿಗಳೇ ವರದಿ ನೀಡಿದ್ದಾರೆ. ಕೂಡಲೇ ಸಂಬಂಧಪಟ್ಟ ಧಿಕಾರಿಗಳು ಜಾಗ ಉಳಿಸಿ ಪಾರ್ಕ್ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಸ್. ಚಂದ್ರಪ್ಪ, ಆವರಗೆರೆ ವಾಸು, ಗೌಡ್ರು ಶಿವಶರಣಪ್ಪ, ಟಿ.ಎಸ್. ನಾಗರಾಜ್, ಸ ನಿಟುವಳ್ಳಿ ಬಸವರಾಜ್, ಮಂಜು, ಕೆ.ಜಿ. ವೆಂಕಟೇಶ್, ಶಿವಾನಂದಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net