ದಾವಣಗೆರೆ :ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಸಾಧನೆ ಮಾಡಿದ್ದ ಹಿರಿಯ ಕ್ರೀಡಾಪಟು, ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಎಸ್. ಸುರೇಶ್ (65) ಅವರು ಶಿವಮೊಗ್ಗ ತಾಲೂಕು ಹಣಗೆರೆ ರಸ್ತೆಯಲ್ಲಿರುವ ಹೊಸೂರು ದರ್ಗಾ ಬಳಿ ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಗರದ ನಿವಾಸಿಯಾಗಿದ್ದ ಸುರೇಶ್ ಅವರು ಚಿಕಿತ್ಸೆಗಾಗಿ ಪುತ್ರ ಅಮೃತ್ ಜತೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ಪಡೆದು ಕಾರಿನಲ್ಲಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಹಣಗೆರೆಕಟ್ಟೆ ಮಾರ್ಗವಾಗಿ ಬರುವಾಗ ಹೊಸೂರು ದರ್ಗಾ ಬಳಿ ಕಾರು ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡ್ರೈವಿಂಗ್ ಮಾಡುತ್ತಿದ್ದ ಪುತ್ರ ಅಮೃತ್‌ಗೆ ಸಣ್ಣ ಪ್ರಮಾಣದ ಪೆಟ್ಟಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುರೇಶ್ ಅವರು ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಗಳಲ್ಲಿ ಆಡಿದ್ದರು. ಅಲ್ಲದೇ ದಸರಾ ಕ್ರೀಡಾಕೂಟ, ಗ್ರಾಮಾಂತರ ಕ್ರೀಡಾಕೂಟಗಳಲ್ಲೂ ಭಾಗವಹಿಸಿದ್ದರು.
ಟಿಪ್ಪರ್ ಲಾರಿ ಡಿಕ್ಕಿ, ಬೈಕ್ ಸವಾರ ಸಾವು
ನಗರದ ಬಂಬೂಬಜಾರ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ, ಬೈಕ್‌ನಲ್ಲಿ ತೆರಳುತ್ತಿದ್ದ ಹಮಾಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಸರಸ್ವತಿನಗರ ನಿವಾಸಿ ಮಂಜುನಾಥ್ (56) ಮೃತ ವ್ಯಕ್ತಿ. ಅವರು ಎಪಿಎಂಸಿ ಕಡೆಯಿಂದ ವೆಂಕಟೇಶ್ವರ ವೃತ್ತದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಮುಂದೆ ಹೋಗುತ್ತಿದ್ದ ಟ್ರಾೃಕ್ಟರ್‌ನ್ನು ಓವರ್‌ಟೇಕ್ ಮಾಡುವ ಪ್ರಯತ್ನದಲ್ಲಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾರೆ. ಲಾರಿಯ ಹಿಂದಿನ ಗಾಲಿ ಮಂಜುನಾಥ್ ಮೇಲೆ ಹಾದು ಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಂಚಾರ (ಉತ್ತರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.