ಜಿಲ್ಲಾಡಳಿತ ಭವನದಲ್ಲಿ ನಡೆದ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು. ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಚಂದ್ರಶೇಖರ ಪೂಜಾರ್, ದ್ಯಾವಪ್ಪ ರೆಡ್ಡಿ, ಎಚ್.ಆರ್. ಲಿಂಗರಾಜ ಶಾಮನೂರು, ಶೀಲವಂತ ಶಿವಕುಮಾರ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಚ್ಚುಕಟ್ಟು ರೈತರಿಗೆ ಡಿಸಿ ಅಭಯ
ಜಿಲ್ಲಾಡಳಿತ ಭವನದಲ್ಲಿ ಸಭೆ
ದಾವಣಗೆರೆ :
ಮುಂಗಾರು ಭತ್ತದ ಬೆಳೆಗೆ ಭದ್ರಾ ಜಲಾಶಯದಿಂದ ಶೀಘ್ರವೇ ನೀರು ಬಿಡುಗಡೆ ಮಾಡಬೇಕು ಎಂಬ ಅಚ್ಚುಕಟ್ಟು ರೈತರ ಬೇಡಿಕೆ ಮತ್ತು ಅವರ ಭಾವನೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭರವಸೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ, ಹರಿಹರ ತಾಲೂಕಿನ ರೈತರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿ, ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಶಿವಮೊಗ್ಗ ಜಿಲ್ಲೆಯ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲೆಯ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಕೆ.ಎಸ್. ಬಸವಂತಪ್ಪ ಅವರಿಗೆ ಮಾಹಿತಿ ನೀಡುವುದಾಗಿ ಹೇಳಿದರು.
ಜಿಲ್ಲಾಡಳಿತ ರೈತರ ಪರವಾಗಿದೆ. ನೀವು ಎಲ್ಲಿಗೆ ಕರೆದರೂ ಬರುತ್ತೇನೆ. ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಪ್ರಕೃತಿಯೂ ನಮಗೆ ಸಾಥ್ ನೀಡಬೇಕಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬುದಷ್ಟೇ ಸರ್ಕಾರದ ಕಾಳಜಿಯಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಇದ್ದರು.
ಬೇಗ ತೀರ್ಮಾನ ತೆಗೆದುಕೊಳ್ಳಿ
ಅಚ್ಚುಕಟ್ಟು ರೈತರ ಬಾಳು ಸಂಕಷ್ಟದಲ್ಲಿದೆ. ಬೇಗ ತೀರ್ಮಾನ ತೆಗೆದುಕೊಂಡು ನಮಗೆ ನೀರು ಕೊಡಿ. ಏನೋ ಕಾರಣ ಹೇಳಿ ನುಣುಚಿಕೊಳ್ಳಬೇಡಿ ಎಂದು ರೈತರೊಬ್ಬರು ಕೈಮುಗಿದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ ಮಾತನಾಡಿ, 156 ಅಡಿ ಇದ್ದಾಗಲೇ ನೀರು ಬಿಟ್ಟಿದ್ದಾರೆ. ಈಗ 170 ಅಡಿ ಇದೆ. ಸುಮ್ಮನೆ ದಿನ ತಳ್ಳುವುದು ಬೇಡ, ರೈತರು ಬೀಜ ಚೆಲ್ಲಿ ಕಾಯುತ್ತಿದ್ದಾರೆ, ನೀರು ಬಿಡಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
2-3 ಎಕರೆ ಇರುವ ಸಣ್ಣ ರೈತರು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ರೈತರ ಹಿತ ದೃಷ್ಟಿಯಿಂದ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ರೈತರಿಂದ ಬಂದಿತು.
ಈಗಾಗಲೇ ತಡವಾಗಿದೆ. ನವೆಂಬರ್, ಡಿಸೆಂಬರ್ ವರೆಗೂ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಮಳೆಗಾಲದಲ್ಲಿ ನೀರು ಕೊಟ್ಟರೆ ಮಾತ್ರ ಕೊನೇ ಭಾಗಕ್ಕೆ ತಲುಪುತ್ತದೆ ಎಂದು ರೈತ ಮುಖಂಡರು ಹೇಳಿದರು.
ಮಾಜಿ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್, ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ ಶಾಮನೂರು ಇದ್ದರು.