ಸನ್ಯಾಸತ್ವ ಹೂವಿನ ಹಾಸಿಗೆಯಲ್ಲ, ಅಗ್ನಿಪಥ

ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ಮಂಗಳವಾರ, ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ ವಚನಾನಂದ ಸ್ವಾಮೀಜಿ ಹೊರಬರುವಾಗ ಅವರೊಂದಿಗೆ ವಕೀಲ ಎಸ್.ವಿ. ಪಾಟೀಲ್, ಸಮಾಜದ ಮುಖಂಡರಿದ್ದರು.
ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ಮಂಗಳವಾರ, ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ ವಚನಾನಂದ ಸ್ವಾಮೀಜಿ ಹೊರಬರುವಾಗ ಅವರೊಂದಿಗೆ ವಕೀಲ ಎಸ್.ವಿ. ಪಾಟೀಲ್, ಸಮಾಜದ ಮುಖಂಡರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರರ ವಿರುದ್ಧ ಅಪವಾದ ಸಹಜ
  • ಪೋಕ್ಸೋ ಕೋರ್ಟ್‌ಗೆ ಹಾಜರಾದ ವಚನಾನಂದ ಶ್ರೀ
  • ಷರತ್ತಿಗೆ ಸಮ್ಮತಿಸಿ ಜಾಮೀನು ಪ್ರಕ್ರಿಯೆಯಲ್ಲಿ ಭಾಗಿ
ದಾವಣಗೆರೆ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಸೋಮವಾರವಷ್ಟೇ ರೆಗ್ಯುಲರ್ ಜಾಮೀನು ಆದೇಶಕ್ಕೊಳಗಾಗಿದ್ದ
ಹರಿಹರದ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ, ಮಂಗಳವಾರ ದಾವಣಗೆರೆಯ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪ್ರಕ್ರಿಯೆಯಲ್ಲಿ ಭಾಗಿಯಾದರು.
ಭದ್ರತೆ ಸಂಬಂಧ 1 ಲಕ್ಷ ರೂ. ಬಾಂಡ್ ಜತೆಗೆ, ಜಾಮೀನಿನ ಹಿನ್ನೆಲೆಯಲ್ಲಿ ಕೋರ್ಟ್ ವಿಧಿಸಿದ ಷರತ್ತುಗಳನ್ನು ಸಮ್ಮತಿಸಿ ಸಹಿ ಹಾಕುವ ಮೂಲಕ ಸ್ವಾಮೀಜಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಪಂಚಮಸಾಲಿ ಸಮಾಜದ ಲೆಕ್ಕ ಕೊಡಿ ಚಳವಳಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಜಾಮೀನಿಗೆ ಶೂರಿಟಿ ನೀಡಿದರು.
ಆ.20ರಂದು ಎರಡನೇ ಆರೋಪಿ ಅಶೋಕ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯಲಿದ್ದಾರೆ. ತದನಂತರದಲ್ಲಿ ವಿಚಾರಣೆ ಪ್ರಕ್ರಿಯೆ ನಡೆಯಲಿವೆ ಎಂದು ಸ್ವಾಮೀಜಿ ಪರ ವಕೀಲ ಎಸ್.ವಿ. ಪಾಟೀಲ್ ತಿಳಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದ ಸ್ವಾಮೀಜಿ, ಸನ್ಯಾಸತ್ವ ಎಂಬುದು ಹೂವಿನ ಹಾಸಿಗೆಯಲ್ಲ, ಇದು ಅಗ್ನಿಪಥ. ಇದನ್ನು ದಾಟಬೇಕು. ಕೊನೆಗೆ ಉಳಿಯುವುದು ಸತ್ಯ, ನ್ಯಾಯ, ಧರ್ಮ. ಅದನ್ನು ನಾವು ಪರಿಪಾಲಿಸುತ್ತೇವೆ. ನಾವು ಕಾನೂನನ್ನು ಗೌರವಿಸುತ್ತೇವೆ. ಇದು ಸತ್ಯಕ್ಕೆ ಸಂದ ಜಯ ಎಂದು ಪ್ರತಿಕ್ರಿಯಿಸಿದರು.
ಅಖಂಡ ಭಾರತದ ಇತಿಹಾಸದಲ್ಲಿ ಹಿಂದೂ ಧರ್ಮದ ಬೆಳವಣಿಗೆಯಲ್ಲಿ ಹೋರಾಟಗಾರರಿಗೆ ಅಪವಾದ, ಟೀಕೆ ಸಹಜ. ಕಂಚಿ ಕಾಮಕೋಟಿ ಶಂಕರಾಚಾರ್ಯರಿಂದ ಹಿಡಿದು ಓಜೋ ರಜನೀಶ್‌ಎಲ್ಲರಿಗೂ ನೋವು-ಕಷ್ಟ ನೀಡಿದ್ದಾರೆ. ನಾವು ಏನು ಹೇಳಬೇಕು ಎಂಬುದನ್ನು ಈ ಹಿಂದಿನ ಗುರುಗಳಾದ ಲಿಂ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಡೈರಿಯಲ್ಲಿ ಬರೆದಿದ್ದು, ಸಮಗ್ರ ಸಮುದಾಯಕ್ಕೆ ಅದರ ಮಾಹಿತಿ ಇದೆ.
ಪತ್ರಿಕೆ, ಆಹ್ವಾನಪತ್ರಿಕೆಗಳ ಕೊನೆಯಲ್ಲಿ ಹರಿಹರ ಎಂದು ಬರೆಯುತ್ತಿದ್ದರು. ಹರಿಹರದ ಭಕ್ತರು ಬಾರದೇ ಇದ್ದರಿಂದ ಕಳೆದ 8 ವರ್ಷದಲ್ಲಿ ತಾವು ಹರಿಹರ ಸ್ವಾಮೀಜಿ ಎನಿಸಿರಲಿಲ್ಲ. ಈ ಘಟನೆ ಬಳಿಕ ನನ್ನ ಜತೆ ಗಟ್ಟಿಯಾಗಿ ನಿಂತ ಹರಿಹರದ ಭಕ್ತರಿಗೆ ಧನ್ಯವಾದ. ಭಕ್ತರು ಹರ ಪೀಠದತ್ತ ಬರುವಂತಾಗಲು ಕಾರಣರಾದವರಿಗೂ ಅನಂತ ಧನ್ಯವಾದ ಎಂದು ವಿರೋಧಿಗಳಿಗೆ ಹೇಳಿದರು.
ತಮ್ಮ ಕೈಯಲ್ಲಿ ಹಿಡಿದಿದ್ದ ‘ಸೈಲೆನ್ಸ್’ ಪುಸ್ತಕದ ಬಗೆಗಿನ ಪ್ರಶ್ನೆಯೊಂದಕ್ಕೆ ‘ಗುರು ವೇದ ಭಾರತಿ ಅವರಿಂದಲೇ ತಾವು ಯೋಗ, ಧ್ಯಾನ ಕಲಿತಿದ್ದೇವೆ. ಇಂದು ಅವರ ಸಂಸ್ಮರಣಾ ದಿನವಾಗಿದೆ. ಅವರು ಬರೆದ ಪುಸ್ತಕವೇ ಸೈಲೆನ್ಸ್. ಅನೇಕ ಭಕ್ತರಿಗೆ ಶಬ್ಧಗಳಲ್ಲಿ ಹೇಳಲಾಗದ್ದನ್ನು ಮೌನವೇ ಉತ್ತರಿಸಲಿದೆ ಎಂದೂ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net