ಹಿರಿಯ ನಾಗರಿಕರ ಸುರಕ್ಷತೆಗೆ ‘ಆಸರೆ’

 ದಾವಣಗೆರೆ ಸಮೀಪದ ಹಳೇಬಾತಿಯ ತಪೋವನ ಆಸ್ಪತ್ರೆಯಲ್ಲಿ ಮಂಗಳವಾರ ‘ಆಸರೆ’ ಯೋಜನೆಯನ್ನು ಹಿರಿಯ ರೇಡಿಯಾಲಜಿಸ್ಟ್ ಡಾ.ಎಸ್.ಆರ್. ಹೆಗಡೆ ಉದ್ಘಾಟಿಸಿದರು. ಎಚ್.ಟಿ. ಶೇಖರ್, ಡಾ. ಶಶಿಕುಮಾರ್, ಹಿರಿಯ ನಾಗರಿಕರು ಇದ್ದರು.
ದಾವಣಗೆರೆ ಸಮೀಪದ ಹಳೇಬಾತಿಯ ತಪೋವನ ಆಸ್ಪತ್ರೆಯಲ್ಲಿ ಮಂಗಳವಾರ ‘ಆಸರೆ’ ಯೋಜನೆಯನ್ನು ಹಿರಿಯ ರೇಡಿಯಾಲಜಿಸ್ಟ್ ಡಾ.ಎಸ್.ಆರ್. ಹೆಗಡೆ ಉದ್ಘಾಟಿಸಿದರು. ಎಚ್.ಟಿ. ಶೇಖರ್, ಡಾ. ಶಶಿಕುಮಾರ್, ಹಿರಿಯ ನಾಗರಿಕರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಪಿ ಎಚ್.ಟಿ. ಶೇಖರ್ ಹೇಳಿಕೆ
  • ಒಂಟಿಯಾಗಿ ವಾಸಿಸುವ 1050 ವೃದ್ಧರ ನೋಂದಣಿ
ದಾವಣಗೆರೆ : ಹಿರಿಯ ನಾಗರಿಕರ ಸುರಕ್ಷತೆ ಮತ್ತು ಅವರಿಗೆ ಘನತೆಯ ಬದುಕು ಕಲ್ಪಿಸುವ ಉದ್ದೇಶದಿಂದ ‘ಆಸರೆ’ ಯೋಜನೆಯನ್ನು ರೂಪಿಸಲಾಗಿದೆ. ಹಿರಿಯ ಜೀವಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಹೇಳಿದರು.
ಜಿಲ್ಲಾ ಪೊಲೀಸ್ ವತಿಯಿಂದ ತಾಲೂಕಿನ ಹಳೇಬಾತಿಯ ತಪೋವನ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಆಸರೆ’ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯ ನಾಗರಿಕರನ್ನು ಗುರಿಯಾಗಿಸಿ ಸುಲಭವಾಗಿ ಅಪರಾಧಗಳಾಗುತ್ತವೆ. ಬಿಹಾರದಲ್ಲಿ ಶೇ. 11.6ರಷ್ಟು ಹಿರಿಯ ಜೀವಿಗಳು ಅಸುರಕ್ಷಿತವಾಗಿದ್ದಾರೆ. ರಾಜ್ಯದಲ್ಲಿ ಆ ಪ್ರಮಾಣ ಶೇ. 10.1ರಷ್ಟಿದೆ. ಇದನ್ನು ಮನಗಂಡು ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಜನಸ್ನೇಹಿ ಪೊಲೀಸ್ ಅಂಗವಾಗಿ ಇದು ಜಾರಿಗೆ ಬಂದಿದೆ. ಪೊಲೀಸ್ ಠಾಣೆಗಳ ಮಟ್ಟದಲ್ಲಿ ಹಳ್ಳಿಗಳಲ್ಲಿ ಬೀಟ್ ವ್ಯವಸ್ಥೆ ಇದ್ದು ಪೊಲೀಸ್ ಸಿಬ್ಬಂದಿ ಅಲ್ಲಿನ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಾರೆ. ಜಿಲ್ಲೆಯಲ್ಲಿ ಈಗಾಗಲೆ 60 ವರ್ಷ ದಾಟಿದ, ಒಂಟಿಯಾಗಿ ಜೀವನ ಸಾಗಿಸುತ್ತಿರುವ 1050 ಜನರನ್ನು ಗುರುತಿಸಿ ನೋಂದಣಿ ಮಾಡಲಾಗಿದೆ ಎಂದರು.
ಪೊಲೀಸರು ಅವರೊಂದಿಗೆ ಸಹಾನುಭೂತಿಯಿಂದ ಮಾತನಾಡಿ ಕುಶಲೋಪರಿ ವಿಚಾರಿಸುತ್ತಾರೆ. ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. ಸರ್ಕಾರದಿಂದ ಬರುವ ಸೌಲಭ್ಯ ಕೊಡಿಸಲು ನೆರವಾಗುತ್ತಾರೆ. ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿದ್ದನ್ನು ದಾಖಲಿಸಲು ಇ-ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಇನ್‌ಸ್ಪೆಕ್ಟರ್‌ಗಳು ಆಗಾಗ ಭೇಟಿ ನೀಡಿ, ದೂರವಾಣಿ ಕರೆ ಮಾಡಿ ಯೋಜನೆಯ ಮೇಲ್ವಿಚಾರಣೆ ನಡೆಸಬೇಕು. ಡಿವೈಎಸ್ಪಿಗಳು 2 ತಿಂಗಳಿಗೊಮ್ಮೆ ಯೋಜನೆಯ ಪರಾಮರ್ಶೆ ಮಾಡಬೇಕು. ಎಸ್ಪಿ ಹಂತದಲ್ಲಿ 4 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆಯಾಗಬೇಕು. ಎಡಿಜಿಪಿಯೊಬ್ಬರು ನೋಡಲ್ ಅಧಿಕಾರಿಯಾಗಿರುತ್ತಾರೆ ಎಂದು ವಿವರಿಸಿದರು.
ಹಿಂದೆಲ್ಲ ಅವಿಭಕ್ತ ಕುಟುಂಬಗಳಿದ್ದವು. ನಗರೀಕರಣದಿಂದ ವಲಸೆ ಶುರುವಾಯಿತು. ಕ್ರಮೇಣ ವಿಭಕ್ತ ಕುಟುಂಬಗಳಾದವು. ತಂದೆ, ತಾಯಿಯ ತ್ಯಾಗ, ಪರಿಶ್ರಮದಿಂದ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದನ್ನು ನಾವು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಡಾ. ಚೈತ್ರಾ ಮಾತನಾಡಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮೆದು ಆಹಾರ ಸೇವಿಸಬೇಕು, ನಿದ್ದೆ ಚೆನ್ನಾಗಿ ಮಾಡಬೇಕು. ವ್ಯಾಯಾಮ, ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಎಂದು ತಿಳಿಸಿದರು.
ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಪ್ರಾಸ್ತಾವಿಕ ಮಾತನಾಡಿ, ಆಸರೆ ಯೋಜನೆಯು ಮಾನವೀಯ ಮೌಲ್ಯಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಹೇಳಿದರು. ನಗರ ಡಿವೈಎಸ್ಪಿ ಶರಣಬಸವೇಶ್ವರ ವಂದಿಸಿದರು.

ಒಳ್ಳೆಯ ಚಿಂತನೆ ಇರಲಿ

ಹಿರಿಯ ನಾಗರಿಕರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಒಳ್ಳೆಯ ಚಿಂತನೆಗಳೊಂದಿಗೆ ಖುಷಿಯಾಗಿ ಜೀವನ ಸಾಗಿಸಬೇಕು ಎಂದು ಹಿರಿಯ ರೇಡಿಯಾಲಜಿಸ್ಟ್ ಡಾ.ಎಸ್.ಆರ್. ಹೆಗಡೆ ಸಲಹೆ ನೀಡಿದರು.
ತಮ್ಮ ಮಾತಿನುದ್ದಕ್ಕೂ ಅವರು ಆರೋಗ್ಯ ಕಾಪಾಡಲು ಕೆಲವು ಗುಟ್ಟುಗಳನ್ನು ಹೇಳಿದರು. ವ್ಯಾಯಾಮ, ನಡಿಗೆ ಮುಂತಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸ್ವಾಸ್ಥೃ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಜಾಸ್ತಿ ನೀರು ಕುಡಿಯಿರಿ. ಅದರಿಂದ ವಿಷಕಾರಿ ವಸ್ತುಗಳು ದೇಹದಿಂದ ಹೊರ ಹೋಗುತ್ತವೆ. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಉತ್ತಮ ಆಹಾರ ಸೇವಿಸಬೇಕು. ಇರುವಷ್ಟು ದಿನ ಸಂತೋಷವಾಗಿರಬೇಕು. ಇನ್ನೊಬ್ಬರನ್ನು ಅವಲಂಬಿಸದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಮರೆವು ಸೇರಿ ಹಲವು ಬಗೆಯ ಆರೋಗ್ಯ ಸಮಸ್ಯೆಗಳನ್ನು ಹಿರಿಯ ನಾಗರಿಕರು ಎದುರಿಸುತ್ತಾರೆ. ಸರ್ಕಾರ ಜಾರಿಗೆ ತಂದಿರುವ ಆಸರೆ ಯೋಜನೆಯು ಅವರಿಗೆ ಸಹಾಯಕವಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
"

ಹಿರಿಯ ನಾಗರಿಕರು ಚುರುಕಾಗಿ, ಖುಷಿಯಾಗಿರಬೇಕು. ಗುಂಪು ಚಟುವಟಿಕೆಗಳಲ್ಲಿ ತೊಡಗಬೇಕು. ಯಾವುದೆ ವಿಚಾರಕ್ಕೆ ಅನವಶ್ಯಕವಾಗಿ ಹೆದರಬಾರದು. ದೇವರು ನಮ್ಮೊಂದಿಗೆ ಇದ್ದಾನೆ.

— ಡಾ. ಶಶಿಕುಮಾರ್, ತಪೋವನ ಆಸ್ಪತ್ರೆ, ವಿದ್ಯಾಸಂಸ್ಥೆಗಳ ಚೇರ್ಮನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net