ರಾಷ್ಟ್ರದ ಉನ್ನತಿಗೆ ಕೃತಕ ಬುದ್ಧಿಮತ್ತೆ ಸಾಧನ

ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಎಂ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಎಂಸಿಎ ವಿಭಾಗದ ಸ್ವಾತಿಮುತ್ತು ಎಸ್.ಆರ್. ಅವರಿಗೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಚಿನ್ನದ ಪದಕ ಪ್ರದಾನ ಮಾಡಿದರು. ಡಾ. ಮೈಲ್‌ಸ್ವಾಮಿ ಅಣ್ಣಾದೊರೈ, ಜಿ.ಎಂ. ಲಿಂಗರಾಜು, ಡಾ. ಎಸ್.ಆರ್. ಶಂಕಪಾಲ್, ಡಾ. ಎಚ್.ಡಿ. ಮಹೇಶಪ್ಪ, ಡಾ. ಸುನೀಲ್ ಕುಮಾರ್ ಬಿ.ಎಸ್, ಕೆ. ದಿವ್ಯಾನಂದ್ ಇದ್ದರು.
ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಎಂ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಎಂಸಿಎ ವಿಭಾಗದ ಸ್ವಾತಿಮುತ್ತು ಎಸ್.ಆರ್. ಅವರಿಗೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಚಿನ್ನದ ಪದಕ ಪ್ರದಾನ ಮಾಡಿದರು. ಡಾ. ಮೈಲ್‌ಸ್ವಾಮಿ ಅಣ್ಣಾದೊರೈ, ಜಿ.ಎಂ. ಲಿಂಗರಾಜು, ಡಾ. ಎಸ್.ಆರ್. ಶಂಕಪಾಲ್, ಡಾ. ಎಚ್.ಡಿ. ಮಹೇಶಪ್ಪ, ಡಾ. ಸುನೀಲ್ ಕುಮಾರ್ ಬಿ.ಎಸ್, ಕೆ. ದಿವ್ಯಾನಂದ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಹ್ಯಾಕಾಶ ವಿಜ್ಞಾನಿ ಮೈಲ್‌ಸ್ವಾಮಿ ಅಣ್ಣಾದೊರೈ ಹೇಳಿಕೆ
  • ಜಿಎಂಯು ಪ್ರಥಮ ಘಟಿಕೋತ್ಸವ
  • ಎಐ ತಂತ್ರಜ್ಞಾನ
ದಾವಣಗೆರೆ : ಕೃತಕ ಬುದ್ಧಿಮತ್ತೆಯು (ಎಐ) ರಾಷ್ಟ್ರದ ಮತ್ತು ಸಮುದಾಯಗಳ ಉನ್ನತಿಗೆ ಸಾಧನವಾಗಿ ಬಳಕೆಯಾಗಬೇಕು. ಭವಿಷ್ಯದ ನಾಯಕರಾದ ಯುವ ಪದವೀಧರರು ಈ ಬದಲಾವಣೆಯನ್ನು ಜವಾಬ್ದಾರಿಯಿಂದ ಮುನ್ನಡೆಸಬೇಕಿದೆ ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಡಾ. ಮೈಲ್‌ಸ್ವಾಮಿ ಅಣ್ಣಾದೊರೈ ಹೇಳಿದರು.
ನಗರದ ಜಿಎಂ ವಿಶ್ವವಿದ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ಎಐ ತಂತ್ರಜ್ಞಾನವು ಕಂಪ್ಯೂಟರ್ ಸೈನ್ಸ್‌ಗೆ ಸೀಮಿತವಾಗದೇ ಆಡಳಿತ, ಕಾನೂನು, ಔಷಧ, ಕಲೆ, ಸಮಾಜ ವಿಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರುತ್ತಿದೆ. ಮನುಷ್ಯನ ಸಾಮರ್ಥ್ಯವನ್ನು ವೃದ್ಧಿಸುತ್ತಿದೆ. ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಮರು ವ್ಯಾಖ್ಯಾನ ಮಾಡಿದೆ ಎಂದು ತಿಳಿಸಿದರು.
ರೋಗ ಪತ್ತೆ ಮಾಡುವುದರಿಂದ ಹಿಡಿದು ಶಸ್ತ್ರಚಿಕಿತ್ಸೆ ವರೆಗೆ ಕೃತಕ ಬುದ್ಧಿಮತ್ತೆಯು ಜೀವಗಳನ್ನು ಉಳಿಸುತ್ತಿದೆ. ಹವಾಮಾನ ವೈಪರೀತ್ಯದ ಸವಾಲು ಎದುರಿಸುವುದು, ಶಕ್ತಿಯ ಬಳಕೆಯನ್ನು ಹೆಚ್ಚಿಸುವುದು, ಹಸಿರು ತಂತ್ರಜ್ಞಾನವನ್ನು ಉತ್ತೇಜಿಸಲು ಸಾಧನವಾಗಿ ಬಳಕೆಯಾಗುತ್ತಿದೆ ಎಂದು ವಿಶ್ಲೇಷಿಸಿದರು.

318 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಇದೇ ವೇಳೆ ಎಂಬಿಎ ವಿಭಾಗದ 263, ಎಂಸಿಎ ವಿಭಾಗದ 44, ಹಾಗೂ ಎಂಕಾಂ ವಿಭಾಗದ 11 ಸೇರಿ ಒಟ್ಟು 318 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು ವಹಿಸಿದ್ದರು. ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಸ್ವಾಗತಿಸಿದರು. ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್. ವಂದಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಗಣೇಶ್ ಜಿ. ಟಿಲ್ವೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಬೆಂಗಳೂರು ಡಿಆರ್‌ಡಿಒ ಆಡಳಿತ ಮಂಡಳಿ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ. ದಿವ್ಯಾನಂದ್, ಗಾಯತ್ರಿ ಸಿದ್ದೇಶ್ವರ, ಜಿಎಂ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರಾದ ಡಾ. ಡಿ. ರವಿನಾಥ್, ಡಾ. ಬಿ.ಎಸ್. ರೆಡ್ಡಿ, ಡಾ. ಶ್ವೇತಾ ಮರಿಗೌಡರ್, ಡಾ. ಸಂತೋಷ್ ಬಿ.ಎಂ, ಎಸ್‌ಸಿಎಸ್‌ಟಿ ನಿರ್ದೇಶಕ ಡಾ. ಸಂಜಯ್ ಪಾಂಡೆ ಎಂ.ಬಿ, ಎಫ್‌ಇಟಿ ನಿರ್ದೇಶಕ ಡಾ. ಪ್ರವೀಣ್ ಜೆ, ಸ್ಕೂಲ್ ಆಫ್ ಕಾಮರ್ಸ್ ನಿರ್ದೇಶಕಿ ಡಾ. ಶ್ವೇತಾ ಎಚ್.ಎಸ್, ಉಪ ಕುಲಸಚಿವ (ಮೌಲ್ಯಮಾಪನ) ಡಾ. ವೀರಭದ್ರಸ್ವಾಮಿ ಬಿ.ಎನ್, ಡಾ. ನಸ್ರೀನ್ ತಾಜ್ ಎಂ.ಬಿ. ಇದ್ದರು.

ಪಾಲಕರ ಬಗ್ಗೆ ಇರಲಿ ಕಾಳಜಿ

ಆರ್ಥಿಕ ಇತಿಮಿತಿಯ ನಡುವೆಯೂ ಕಷ್ಟಪಟ್ಟು ನಿಮಗೆ ಶಿಕ್ಷಣ ಕೊಡಿಸುವ ತಂದೆ-ತಾಯಿಯನ್ನು ಯುವಜನರು ಪ್ರೀತಿ, ವಿಶ್ವಾಸ, ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿ ಮಾತನಾಡಿ, ಶಿಕ್ಷಣ ಪಡೆದು ವಿದೇಶಗಳಿಗೆ ಹೋಗಿ ಕೆಲಸ ಮಾಡುವ ಯುವಜನರು ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ನಿಮ್ಮ ಭವಿಷ್ಯವನ್ನು ರೂಪಿಸಿದ ಅವರನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದರು.
ಜಿಎಂ ವಿಶ್ವವಿದ್ಯಾಲಯ ಆರಂಭವಾಗಿ 3 ವರ್ಷಗಳಾಗಿವೆ. ಸುತ್ತಲಿನ ಐದಾರು ಜಿಲ್ಲೆಗಳಲ್ಲಿ ಹೆಸರು ಮಾಡಿದೆ. ಗ್ರಾಮೀಣ ಹಿನ್ನೆಲೆಯ, ಬಡ ಮಕ್ಕಳಿಗೆ ಆಶಾಕಿರಣವಾಗಿದೆ. ಈ ಘಟಿಕೋತ್ಸವದಲ್ಲಿ 318 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಎಲ್ಲ ಪದವೀಧರರಿಗೂ ಉದ್ಯೋಗ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net