ದಾವಣಗೆರೆ :ಪ್ರಪಂಚದ ಮೊಟ್ಟಮೊದಲ ಸಂಸತ್ತು ಎಂದು ಕರೆಯಲ್ಪಡುವ ‘ಅನುಭವ ಮಂಟಪ’ದ ಮೂಲಕ ಬಸವಣ್ಣ ಅವರು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡಿಪಾಯ ಹಾಕಿಕೊಟ್ಟರು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ, ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ಮತ್ತು ವರ್ಗರಹಿತ ಸಮಾಜದ ಪರಿಕಲ್ಪನೆ ಆಧುನಿಕ ಯುಗಕ್ಕೂ ಪ್ರಸ್ತುತವಾಗಿದೆ. ಸಾಮಾನ್ಯ ಜನರಿಗೂ ಅರ್ಥವಾಗುವ ಸರಳ ಕನ್ನಡ ಭಾಷೆಯಲ್ಲಿ ವಚನಗಳ ಮೂಲಕ ಬಸವಣ್ಣ ಸಾಮಾಜಿಕ ಪರಿವರ್ತನೆ ತಂದರು ಎಂದು ಅಭಿಪ್ರಾಯಪಟ್ಟರು.
ಕಾಯಕವೇ ಕೈಲಾಸ ಎಂಬ ಮಂತ್ರದ ಮೂಲಕ ಶ್ರಮ ಸಂಸ್ಕೃತಿಯನ್ನು ಗೌರವಿಸಿದ ಮಹಾನ್ ಮಾನವತಾವಾದಿ ಬಸವಣ್ಣ. ಮನುಷ್ಯ ಕೇವಲ ಸ್ವಾರ್ಥಕ್ಕಾಗಿ ಬದುಕದೆ, ಸಮಾಜದ ಹಿತಕ್ಕಾಗಿ ಶ್ರಮಿಸಬೇಕು. ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವುದು, ಪ್ರಕೃತಿಯನ್ನು ಪ್ರೀತಿಸುವುದು ಕೂಡ ಕಾಯಕದ ಒಂದು ಭಾಗವೇ ಆಗಿದೆ ಎಂದು ಬಣ್ಣಿಸಿದರು. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಮೃದು ವಚನಗಳೆ ಸನ್ಮಾರ್ಗಕ್ಕೆ ದಾರಿ. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಬೆಳೆಯಬೇಕು ಎಂದು ತಿಳಿಸಿದರು.
ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬಸವ ಸಮಿತಿಯ ಕಲಾವಿದರು ಬಸವಣ್ಣನ ಆಯ್ದ ವಚನಗಳನ್ನು ಗಾಯನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ಡಿಡಿಪಿಐ ಕೊಟ್ರೇಶ್, ಡಿಡಿಪಿಯು ಪಳನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಶ್ಮಿ ಇದ್ದರು.