ಅಭಿವೃದ್ಧಿಯಾಗಬೇಕಿದೆ ಆನಗೋಡು ಮೃಗಾಲಯ Zoo

ದಾವಣಗೆರೆ ತಾಲೂಕಿನ ಆನಗೋಡು ಸಮೀಪವಿರುವ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯದ ಮುಖ್ಯದ್ವಾರ.Zoo
ದಾವಣಗೆರೆ ತಾಲೂಕಿನ ಆನಗೋಡು ಸಮೀಪವಿರುವ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯದ ಮುಖ್ಯದ್ವಾರ.Zoo
Published on

ಪ್ರಮುಖ ಮುಖ್ಯಾಂಶಗಳು

  • ಪ್ರಚಾರ, ನಿರ್ವಹಣೆ ಕೊರತೆ
  • ಸೊರಗಿದ ಕಿರು ಪ್ರಾಣಿ ಸಂಗ್ರಹಾಲಯ
  • ಸಫಾರಿ, ಗ್ಲಾಸ್ ಎನ್‌ಕ್ಲೋಸರ್ ಚಿಂತನೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ದಾವಣಗೆರೆ ಜಿಲ್ಲಾ ಕೇಂದ್ರದಿಂದ ಕೇವಲ 18 ಕಿಮೀ ದೂರದಲ್ಲಿ, ಆನಗೋಡು ಸಮೀಪ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲೇ ಇರುವ ಇಂದಿರಾ ಪ್ರಿಯದರ್ಶಿನಿ ಕಿರು ಪ್ರಾಣಿ ಸಂಗ್ರಹಾಲಯ ಸೂಕ್ತ ನಿರ್ವಹಣೆ ಮತ್ತು ಅಭಿವೃದ್ಧಿಯಿಲ್ಲದೆ ದಿನದಿಂದ ದಿನಕ್ಕೆ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಪ್ರಕಟಿತ ಪ್ರವಾಸೋದ್ಯಮ ನಕ್ಷೆಯಲ್ಲಿ ಹೆಸರಿಗಷ್ಟೇ ಜಾಗ ಪಡೆದಿರುವ ಈ ಮೃಗಾಲಯ, ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. Zoo
ಈ ಮೃಗಾಲಯದಲ್ಲಿ ಆಹಾರ ಮತ್ತು ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ ಎಂಬುದು ಸ್ಥಳೀಯರು ಹಾಗೂ ಪ್ರವಾಸಿಗರ ಪ್ರಮುಖ ದೂರು. ಜಿಂಕೆ ಮತ್ತು ಕೃಷ್ಣಮೃಗಗಳು ಇರುವ ಸ್ಥಳದಲ್ಲಿ ಈ ಮೊದಲು ಇದ್ದ ಹಸಿರಿನ ಹೊದಿಕೆ ಈಗ ಕಾಣುತ್ತಿಲ್ಲ. ಪ್ರಾಣಿಗಳು ಸೊರಗಿದಂತೆ ಕಾಣುತ್ತಿವೆ. ಹಕ್ಕಿ ಪಕ್ಷಿಗಳ ಕಲರವವೂ ಅಷ್ಟೇನೂ ಕಾಣುತ್ತಿಲ್ಲ. 180ಕ್ಕೂ ಹೆಚ್ಚು ಜಿಂಕೆ ಹಾಗೂ ಕೃಷ್ಣಮೃಗಗಳಿಗೆ ದಿನಕ್ಕೆ ಕೇವಲ 3 ಪೆಂಡಿ ರಾಗಿ ಹುಲ್ಲು ನೀಡಲಾಗುತ್ತಿದ್ದು, ಅದೂ ಕೂಡ ಕಳಪೆ ಮಟ್ಟದ್ದಾಗಿದೆ. ಕರಡಿಗೆ ದಿನಕ್ಕೆ ಕೇವಲ 3-4 ಬ್ರೆಡ್ ತುಂಡುಗಳನ್ನು ನೀಡಲಾಗುತ್ತಿದೆ.
ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಗುಣಮಟ್ಟದ ಕ್ಯಾಂಟೀನ್, ಉಪಾಹಾರ ಗೃಹ ಹಾಗೂ ಶೌಚಗೃಹಗಳಲ್ಲಿ ನೈರ್ಮಲ್ಯದ ಕೊರತೆಯಿದೆ. ಹೆದ್ದಾರಿ ವಿಸ್ತರಣೆಯಾಗಿ ಫ್ಲೈಓವರ್ ನಿರ್ಮಾಣವಾದ ಬಳಿಕ, ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಇಲ್ಲಿ ಮೃಗಾಲಯ ವಿರುವುದೇ ತಿಳಿಯದಂತಾಗಿದ್ದು ಪ್ರಚಾರದ ಅವಶ್ಯಕತೆ ಇದೆ.
ಪ್ರಸ್ತುತ ಇಲ್ಲಿ ಇಬ್ಬರು ಕೇರ್ ಟೇಕರ್, ಒಬ್ಬರು ಸ್ವಚ್ಛತಾಗಾರರು, ಒಬ್ಬರು ಟಿಕೆಟ್ ನೀಡುವವರು ಹಾಗೂ ಇಬ್ಬರು ವಾಚರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಕನಿಷ್ಠ 4 ಹೆಚ್ಚುವರಿ ಸಿಬ್ಬಂದಿಯ ತುರ್ತು ಅಗತ್ಯವಿದೆ.
ಕೆಲವು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಒಂದೆರಡು ಕೃಷ್ಣಮೃಗಗಳು ಮೃತಪಟ್ಟಾಗ ಪೊಲೀಸ್ ದೂರು ದಾಖಲಾಗಿತ್ತು. ಅದರ ತನಿಖೆ ಏನಾಯಿತು ಎಂಬ ಮಾಹಿತಿಯಿಲ್ಲ. ಕೇಂದ್ರ ಹಾಗೂ ರಾಜ್ಯ ಮೃಗಾಲಯ ಪ್ರಾಧಿಕಾರದಿಂದ ವಾರ್ಷಿಕವಾಗಿ ಬಿಡುಗಡೆಯಾಗುವ ನಿರ್ವಹಣಾ ಅನು ದಾನದ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸುತ್ತಿಲ್ಲ ಎಂದು ಆನಗೋಡು ಗ್ರಾಪಂ ಮಾಜಿ ಅಧ್ಯಕ್ಷ ಕೆ. ರವಿ, ಸದಸ್ಯ ಎಚ್.ಎಸ್. ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ.ಎಸ್. ವಸಂತ್ ಕುಮಾರ್ ದೂರಿದ್ದಾರೆ.

ಜಿಂಕೆಗಳು ಇಲ್ಲಿನ ಆಕರ್ಷಣೆ

1983ರಲ್ಲಿ ಆರಂಭಗೊಂಡ ಈ ಕಿರು ಮೃಗಾಲಯವು ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, 15ರಿಂದ 16 ಎಕರೆ ವಿಶಾಲವಾದ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಸದ್ಯ ಇಲ್ಲಿ 180ಕ್ಕೂ ಹೆಚ್ಚು ಜಿಂಕೆಗಳು, 32 ಕೃಷ್ಣಮೃಗಗಳು, 2 ಸ್ಲಾಥ್ ಕರಡಿಗಳು, 6 ನವಿಲುಗಳು ಸೇರಿ ಸಿಲ್ವರ್ ಫಿಸೆಂಟ್, ಲವ್ ಬರ್ಡ್ಸ್, ಗಿಳಿ, ಕಾಡುಕೋಳಿಗಳು ಹಾಗೂ ಇತರ ಪಕ್ಷಿಗಳಿವೆ. ಇಲ್ಲಿ ತಂಪಾದ ವಾತಾವರಣ ಇರುವುದರಿಂದ ಮಕ್ಕಳು ಆಟಿಕೆಗಳಲ್ಲಿ ಆಟ ಆಡುತ್ತಾರೆ. ವಾರಾಂತ್ಯದಲ್ಲಿ 100 ರಿಂದ 150ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಟಿಕೆಟ್ ದರ 20 ರೂ, ಮಕ್ಕಳಿಗೆ 10 ರೂ, ಬೈಕ್ ನಿಲುಗಡೆಗೆ 20, ಕಾರುಗಳಿಗೆ 50, ಮತ್ತು ಮಿನಿ ಬಸ್‌ಗಳಿಗೆ 75 ರೂ. ನಿಗದಿ ಮಾಡಿದ್ದಾರೆ.

ಅಭಿವೃದ್ಧಿಗೆ ಮಾಸ್ಟರ್ ಪ್ಲಾೃನ್

ಅರಣ್ಯ ಇಲಾಖೆಯು ಈ ಮೃಗಾಲಯವನ್ನು ಮೈಸೂರು ಮೃಗಾಲಯದ ಮಾದರಿಯಲ್ಲಿ ಆಧುನೀಕರಣಗೊಳಿಸಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ, 2024ರಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿದೆ. ಅನುಮೋದನೆ ಸಿಕ್ಕಲ್ಲಿ ಹುಲಿ, ಸಿಂಹ, ಚಿರತೆಗಳನ್ನು ತಂದು ಸಫಾರಿ ಆರಂಭಿಸುವ ಯೋಜನೆ ಇದೆ. ಪ್ರಾಣಿಗಳನ್ನು ಕಂಬಿಗಳ ಹಿಂದೆ ಬಂಧಿಸುವ ಬದಲು ಆಧುನಿಕ ಪಾರದರ್ಶಕ ಗಾಜಿನ ಗೋಡೆಗಳ ಆವರಣ ನಿರ್ಮಿಸಲು ನಿರ್ಧರಿಸಲಾಗಿದೆ.
"

ಮೃಗಾಲಯದ ಅಭಿವೃದ್ಧಿ ಮತ್ತು ಸಮರ್ಪಕ ನಿರ್ವಹಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು. ಪ್ರಾಣಿ-ಪಕ್ಷಿಗಳಿಗೆ ಸಮರ್ಪಕ ಆಹಾರ, ನೀರು ಹಾಗೂ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.

— ಕೆ.ಎಸ್. ಬಸವಂತಪ್ಪ ಶಾಸಕ.

ಇತ್ತೀಚೆಗೆ ಈ ಮೃಗಾಲಯಕ್ಕೆ ಭೇಟಿ ನೀಡಿದ್ದೆ. ವಿಶಾಲವಾದ ಭೂಪ್ರದೇಶವಿದ್ದರೂ ಪ್ರಾಣಿ-ಪಕ್ಷಿಗಳ ಸಂಖ್ಯೆ ಕಡಿಮೆಯಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರವು ಗ್ರಾಮೀಣ ಭಾಗದ ಇಂತಹ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತದೆ.

— ಡಾ. ರಾಧಾಕೃಷ್ಣ ಪಲ್ಲಕ್ಕಿ, ಚಲನಚಿತ್ರ ನಟ ಹಾಗೂ ಹಿರಿಯ ನಿರ್ದೇಶಕ, ಬೆಂಗಳೂರು.

ಇಲ್ಲಿ ವಿಶಾಲವಾದ ಜಾಗವಿದೆ. ಕುಟುಂಬದೊಂದಿಗೆ ಬರಲು ಸೂಕ್ತ ಸ್ಥಳ. ಆದರೆ ಪ್ರಾಣಿಗಳ ಸಂಖ್ಯೆ ಹೆಚ್ಚಿಸಬೇಕು, ನೈರ್ಮಲ್ಯದ ಜತೆಗೆ ಒಳ್ಳೆಯ ಕ್ಯಾಂಟೀನ್ ಮತ್ತು ಅಂಗಡಿಗಳ ವ್ಯವಸ್ಥೆಯಾಗಬೇಕು.

— ಚೈತ್ರ ವಿವೇಕ್ ಕೋರಿ ಪ್ರವಾಸಿಗರು, ಬೆಂಗಳೂರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net