ಜಗಳೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಿಇಒ ಹಾಲಮೂರ್ತಿ ಪ್ರಶಸ್ತಿ ವಿತರಣೆ ಮಾಡಿದರು. ಬಿಆರ್‌ಪಿ ಕೆ.ಎಸ್. ರವಿಕುಮಾರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹೊನ್ನೂರ್ ಸಾಬ್, ಗ್ರಾಪಂ ಸದಸ್ಯೆ ಇಂದಿರಮ್ಮ, ಸಿಆರ್‌ಪಿ ಆರ್. ಲೋಕೇಶ್, ಇಸಿಒ ಬಸವರಾಜ್ ಇದ್ದರು.
ಜಗಳೂರು: ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸುವ ಮಹತ್ವದ ವೇದಿಕೆಯಾಗಿದೆ ಎಂದು ಬಿಇಒ ಹಾಲಮೂರ್ತಿ ಹೇಳಿದರು.
ತಾಲೂಕಿನ ಜಗಳೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹನುಮಂತಾಪುರ ಕ್ಲಸ್ಟರ್ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾ ಕಾರಂಜಿಯು ವಿದ್ಯಾರ್ಥಿಗಳಿಗೆ ಮನರಂಜನೆಯೊಂದಿಗೆ ಶಿಕ್ಷಣವನ್ನು ಸಂಯೋಜಿಸುವ ಮೂಲಕ ಕಲಿಯಲು ಮತ್ತು ಹೊಸ ಕೌಶಲಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು. ಮಕ್ಕಳು ಪಾಲಕರಿಗಿಂತ ಶಿಕ್ಷಕರ ಜತೆ ಕಳೆಯುವ ಸಮಯವೇ ಹೆಚ್ಚು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಬಿಆರ್‌ಪಿ ಕೆ.ಎಸ್. ರವಿಕುಮಾರ್ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳ ಪ್ರತಿಭೆಗಳು ಕೇವಲ ತಾಲೂಕು, ಜಿಲ್ಲೆಗೆ ಸೀಮಿತವಾಗದೇ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿ ಉನ್ನತ ಸ್ಥಾನವನ್ನು ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹೊನ್ನೂರ್ ಸಾಬ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆಗಳು ಅಡಕವಾಗಿವೆ. ಆದರೆ ಸೂಕ್ತ ವೇದಿಕೆ ಸಿಗದ ಕಾರಣ ಅವರ ಕನಸುಗಳು ನನಸಾಗಿಯೇ ಉಳಿದಿವೆ. ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಗ್ರಾಪಂ ಸದಸ್ಯೆ ಇಂದಿರಮ್ಮ, ಸಿಆರ್‌ಪಿ ಆರ್. ಲೋಕೇಶ್, ಇಸಿಒ ಬಸವರಾಜ್, ಮುಖ್ಯಶಿಕ್ಷಕ ಡಿ.ಎಚ್. ಉಮೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಗೋಡೆ ಬಸವರಾಜ್, ಶಿಕ್ಷಕರಾದ ರುದ್ರಮುನಿ, ಓಂಕಾರಮ್ಮ, ಚಂದ್ರಮ್ಮ, ಸುನಿತಾ, ರೂಪಾ, ಮಮತಾ ಸೇರಿ ಪಾಲಕರಿದ್ದರು.