ಯುಬಿಡಿಟಿ ಕಾಲೇಜಿಗೆ ‘ಅಮೃತ’ ಸಂಭ್ರಮ

ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಮಾತನಾಡಿದರು. ಡಾ.ಪ್ರಸಾದ್ ಬಿ. ರಾಂಪುರೆ, ಡಾ.ಡಿ.ಪಿ. ನಾಗರಾಜಪ್ಪ, ಡಾ.ಎಂ.ಎಚ್. ದಿವಾಕರ್ ಇದ್ದರು.
ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಮಾತನಾಡಿದರು. ಡಾ.ಪ್ರಸಾದ್ ಬಿ. ರಾಂಪುರೆ, ಡಾ.ಡಿ.ಪಿ. ನಾಗರಾಜಪ್ಪ, ಡಾ.ಎಂ.ಎಚ್. ದಿವಾಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶುಕ್ರವಾರ ಉಪರಾಷ್ಟ್ರಪತಿ, ರಾಜ್ಯಪಾಲರ ಭೇಟಿ
  • ವಿಟಿಯು ಕುಲಪತಿ ವಿದ್ಯಾಶಂಕರ್ ಮಾಹಿತಿ
ದಾವಣಗೆರೆ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜಾಗಿರುವ ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಶುಕ್ರವಾರ ಮತ್ತು ಶನಿವಾರ ನಡೆಯಲಿದ್ದು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಹೇಳಿದರು.
ಯುಬಿಡಿಟಿ ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಾಜ್ಯಪಾಲ ಥಾವರ ಚಂದ್ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ. ಟಿ.ಜಿ. ಸಿತಾರಾಮ್ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಚಿತ್ರದುರ್ಗದ ಮಾಜಿ ಸಂಸದ ಜನಾರ್ದನ ಸ್ವಾಮಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದ ನಂತರ ಉದ್ಯಮಶೀಲತೆ ಹಾಗೂ ತಂತ್ರಜ್ಞಾನ ನವೀನತಾ ಪ್ರದರ್ಶನ (ಹೊಸ ಸಭಾಂಗಣ) ಹಾಗೂ ಕಾಲೇಜಿನ ದಾನಿಗಳ ಪ್ರತಿಮೆಗಳ ಅನಾವರಣ ಕಾರ್ಯಕ್ರಮ, ಹಿಂದಿನ ಕುಲಪತಿಗಳು, ಕಾಲೇಜಿನ ನಿವೃತ್ತಿ ಹೊಂದಿದ ಪ್ರಾಚಾರ್ಯರು ಹಾಗೂ ಅಧ್ಯಾಪಕರ ಸ್ಮರಣೆ, ಗೌರವ ಹಾಗೂ ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ವಿಟಿಯು ಕುಲಸಚಿವ ಡಾ.ಪ್ರಸಾದ್ ಬಿ. ರಾಂಪುರೆ, ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ. ನಾಗರಾಜಪ್ಪ, ಅಮೃತ ಮಹೋತ್ಸವದ ಸಂಚಾಲಕ ಡಾ.ಎಂ.ಎಚ್. ದಿವಾಕರ್ ಇದ್ದರು.

ಹಳೆಯ ವಿದ್ಯಾರ್ಥಿಗಳ ಸಭೆ

ಶನಿವಾರ ಬೆಳಗ್ಗೆ ಹಳೆಯ ವಿದ್ಯಾರ್ಥಿಗಳ ಸಾಮಾನ್ಯ ಸಭೆ ನಡೆಯಲಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ವಿಭಾಗಗಳ ಅಧ್ಯಾಪಕರ ಹಾಗೂ ಇಂದಿನ ವಿದ್ಯಾರ್ಥಿಗಳ ಜತೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವರು ಎಂದು ಡಾ. ಎಸ್. ವಿದ್ಯಾಶಂಕರ್ ತಿಳಿಸಿದರು.
ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಿಂದ ಅತಿಥಿ ಗೃಹ ನಿರ್ಮಾಣದ ಭೂಮಿ ಪೂಜೆ ನೆರವೇರಲಿದೆ. ಕಾಲೇಜು ಸುದೀರ್ಘ 75 ವರ್ಷದ ಹಾದಿಯಲ್ಲಿ ನಡೆದು ಬಂದ ದಾರಿ ಅಧ್ಯಯನ, ಪರಂಪರೆ, ನಾಯಕತ್ವ ಹಾಗೂ ದೀರ್ಘ ದೃಷ್ಟಿ (ಭೂತ, ವರ್ತಮಾನ ಮತ್ತು ಭವಿಷ್ಯ) ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಶನಿವಾರ ಸಂಜೆ 5 ಗಂಟೆಗೆ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಚಳ್ಳಕೆರೆ ಶಾಸಕ ಟಿ. ರಘುಮುರ್ತಿ, ಚಿತ್ರದುರ್ಗದ ಮಾಜಿ ಸಂಸದ ಜನಾರ್ದನ ಸ್ವಾಮಿ ಸೇರಿ ಒಟ್ಟು 1500 ಹಳೆಯ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.

ಸವಿ ನೆನಪಿಗೆ ಹೊಸ ಹಾಸ್ಟೆಲ್

ಅಮೃತ ಮಹೋತ್ಸವದ ಸವಿ ನೆಪಿಗಾಗಿ ಕಾಲೇಜಿನ ಹಳೆಯ ಹಾಸ್ಟೆಲ್ ಕಟ್ಟಡ ತೆರವುಗೊಳಿಸಿ, 10-15 ಕೋಟಿ ರೂ. ವೆಚ್ಚದಲ್ಲಿ ಪುರುಷರ ಹಾಗೂ ಮಹಿಳೆಯರ ಹೊಸ ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ಕುಲಪತಿ ತಿಳಿಸಿದರು.
ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಟೆಂಡರ್ ಕರೆದು ಪ್ರಕ್ರಿಯೆ ಆರಂಭಿಸಲಾಗುವುದು. ಅಲ್ಲಿರುವ ವಿದ್ಯಾರ್ಥಿಗಳನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿ ಒಂದು ವರ್ಷದಲ್ಲಿ ಹೊಸ ಕಟ್ಟಡ ನಿರ್ಮಿಸುವ ಯೋಜನೆ ಸಿದ್ಧವಾಗಿದೆ ಎಂದರು.
ಈ ಕಾಲೇಜಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕೌಶಲಾಭಿವೃದ್ಧಿ ಪ್ರಯೋಗಾಲಯ ಸ್ಥಾಪಿಸಲಾಗುವುದು. ಈ ಉದ್ದೇಶಕ್ಕಾಗಿ ಬಜೆಟ್‌ನಲ್ಲಿ ಹಣ ನಿಗದಿಪಡಿಸಲಾಗಿದೆ. ಈ ವರ್ಷ ಸಿವಿಲ್ ಮತ್ತು ಟೌನ್ ಪ್ಲಾೃನಿಂಗ್ ವಿಭಾಗವನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ನಗರದ ನೂತನ್ ಕಾಲೇಜು ರಸ್ತೆಯಲ್ಲಿರುವ 8 ಎಕರೆ ಜಾಗದಲ್ಲಿ ಐಟಿ ಟೆಕ್ ಪಾರ್ಕ್ ಮತ್ತು ಅತಿಥಿಗೃಹ ಅಭಿವೃದ್ಧಿಪಡಿಸುವ ಚಿಂತನೆಯಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮುಂಬರುವ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net