ಸಾಮೂಹಿಕ ವಿವಾಹಕ್ಕೆ ಸಕಲ ಸಿದ್ಧತೆ

ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಜಿ.ಡಿ ಗುರುಸ್ವಾಮಿ, ಮುಖಂಡರಾದ ಅರವಿಂದ್, ಜಿ.ಸಿ. ನಿಂಗಪ್ಪ, ಎಸ್. ಮಲ್ಲಿಕಾರ್ಜುನ್, ಮಾಗಾನಹಳ್ಳಿ ಪರಶುರಾಂ ಇದ್ದರು.
ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಜಿ.ಡಿ ಗುರುಸ್ವಾಮಿ, ಮುಖಂಡರಾದ ಅರವಿಂದ್, ಜಿ.ಸಿ. ನಿಂಗಪ್ಪ, ಎಸ್. ಮಲ್ಲಿಕಾರ್ಜುನ್, ಮಾಗಾನಹಳ್ಳಿ ಪರಶುರಾಂ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಿ. ಎಸ್ಸೆಸ್ 96ನೇ ಜನ್ಮದಿನ ನಿಮಿತ್ತ ಆಯೋಜನೆ
  • ನೋಂದಣಿಯಾದ 50 ಜೋಡಿಗಳು
  • ಎಸ್ಸೆಸ್ಸೆಂ ಅಭಿಮಾನಿ ಬಳಗದ ಮುದೇಗೌಡ್ರ ಗಿರೀಶ್ ಮಾಹಿತಿ
ದಾವಣಗೆರೆ: ಮಾಜಿ ಶಾಸಕ ದಿ.ಡಾ.ಶಾಮನೂರು ಶಿವಶಂಕರಪ್ಪ ಅವರ 96ನೇ ಜನ್ಮದಿನದ ಅಂಗವಾಗಿ ಜೂ.17ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಮುದೇಗೌಡ್ರ ಗಿರೀಶ್ ತಿಳಿಸಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಪಕ್ಕದಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಬೃಹತ್ ಶಾಮಿಯಾನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಬರುವ ಜನರು ಕೂರಲು 6ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ ಸಮುದಾಯ ಭವನದ ಹಿಂಬದಿಯಲ್ಲಿ 1500 ಜನರಿಗೆ ತಿಂಡಿ, ಮಧ್ಯಾಹ್ನ 5ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮಂಗಳವಾರದಂದು ಯಾವುದೇ ವಿವಾಹ ಮುಹೂರ್ತ ಇಲ್ಲದಿರುವ ಹಿನ್ನೆಲೆಯಲ್ಲಿ ಬುಧವಾರ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ದಾವಣಗೆರೆ ಅಲ್ಲದೆ ಚಿತ್ರದುರ್ಗ, ಭದ್ರಾವತಿ, ಹಿರಿಯೂರು, ಹಾವೇರಿ, ಬಳ್ಳಾರಿ, ಗದಗ್ ಜಿಲ್ಲೆಗಳಿಂದ ವಧು-ವರರು ನೋಂದಣಿಯಾಗಿದ್ದಾರೆ. ಇದುವರೆಗೆ 50 ಜೋಡಿಗಳ ನೋಂದಣಿಯಾಗಿದ್ದು ಇದರಲ್ಲಿ 7 ಅಂತರ್ಜಾತಿ ಮದುವೆಯಾಗಲಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸಿ ಆಖೈರುಗೊಳಿಸಿದ್ದಾರೆ. ವಿವಾಹ ವಯಸ್ಸು ಮಾನದಂಡದಡಿ ಕೆಲವು ಜೋಡಿಗಳ ಮದುವೆ ತಿರಸ್ಕರಿಸಲಾಗಿದೆ. ನೋಂದಣಿಗೆ ಜೂ. 16ರವರೆೆಗೂ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು.
ವಿವಾಹವಾಗುವ ಜೋಡಿಗೆ ಬಟ್ಟೆ, ತಾಳಿ, ಕಾಲುಂಗುರ ಹಾಗೂ 3-6.5 ಅಡಿ ಸುತ್ತಳತೆಯ 85 ಕಿಲೋ ತೂಕದ ಅಲ್ಮೆರಾಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಸಾಮೂಹಿಕ ವಿವಾಹದ ಸಂಪೂರ್ಣ ವೆಚ್ಚವನ್ನು ಎಸ್ಸೆಸ್ಸೆಂ ಅಭಿಮಾನಿಗಳ ಬಳಗವೇ ನಿರ್ವಹಿಸುತ್ತಿದೆ ಎಂದರು.
ಜೂ. 17ರಂದು ಬೆಳಗ್ಗೆ 11-30ರವರೆಗೆ ವಿವಾಹ ನಡೆಯಲಿದೆ. ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ್ ಶಾಮನೂರು ಹಾಗೂ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ/ ಮಂಡಳಿಗಳು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸುವರು. ಜೂ. 18ರಂದು ವಿಧಾನ ಪರಿಷತ್ ಚುನಾವಣೆ ಇರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಮುಖಂಡರು ಬರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಖಜಾಂಚಿ ಜಿ.ಡಿ ಗುರುಸ್ವಾಮಿ, ಮುಖಂಡರಾದ ಅರವಿಂದ್, ಜಿ.ಸಿ. ನಿಂಗಪ್ಪ, ಕೆ.ಎನ್. ಮಂಜುನಾಥ್, ಎಸ್. ಮಲ್ಲಿಕಾರ್ಜುನ್, ರಾಘವೇಂದ್ರನಾಯ್ಕ, ದಿನೇಶ್ ಕೆ. ಶೆಟ್ಟಿ, ಮಾಗಾನಹಳ್ಳಿ ಪರಶುರಾಂ, ಪೂರ್ಣಿಮಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net