ರಮೇಶ ಜಹಗೀರದಾರ್ ದಾವಣಗೆರೆ :ಜಿಲ್ಲೆಗೆ ಮುಂಗಾರು ಜೂ. 8ರ ನಂತರ ಪ್ರವೇಶಿಸುವ ಸಾಧ್ಯತೆ ಇದೆ. ಈ ಬಾರಿ ಮಳೆಯ ಕೊರತೆ ಆಗಬಹುದು ಎಂಬ ಆತಂಕ ಇರುವುದರಿಂದ ಮೆಕ್ಕೆಜೋಳದ ಬದಲು ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಕೃಷಿ ಇಲಾಖೆ ಅರಿವು ಮೂಡಿಸುತ್ತಿದೆ.
ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶದಲ್ಲಿ 1.27 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಈ ಬೆಳೆಗೆ ನೀರು ಮತ್ತು ಪೋಷಕಾಂಶಗಳನ್ನು ಹೆಚ್ಚಾಗಿ ಬಳಸುವುದರಿಂದ ಭೂಮಿಯು ಬರಡಾಗುವ ಅಪಾಯವಿರುತ್ತದೆ. ಜತೆಗೆ ಮುಳ್ಳು ಸಜ್ಜೆಯ ಹಾವಳಿಯೂ ಬರುವುದರಿಂದ ಮೆಕ್ಕೆಜೋಳ ಬೆಳೆಯವುದನ್ನು ಕಡಿಮೆ ಮಾಡಬೇಕು ಎಂಬುದು ಇಲಾಖೆಯ ಸಲಹೆಯಾಗಿದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಹಂಗಾಮಿನಲ್ಲಿ 30 ಸಾವಿರ ಹೆಕ್ಟೇರ್‌ನಷ್ಟು ಬೇಳೆ ಕಾಳುಗಳನ್ನು (ದ್ವಿದಳ ಧಾನ್ಯಗಳು) ಬೆಳೆಯುವಂತೆ ರೈತರನ್ನು ಪ್ರೇರೇಪಿಸಲು ಕೃಷಿ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಿದೆ. ತೊಗರಿ, ಅವರೆ, ಉದ್ದು, ಹೆಸರು, ಅಲಸಂದೆ ಕೃಷಿಯ ಕಡೆಗೆ ರೈತರ ಚಿತ್ತವನ್ನು ಸೆಳೆಯುತ್ತಿದೆ. ಇವುಗಳನ್ನು ಬೆಳೆಯುವುದು ಭೂಮಿಯ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ಅಧಿಕಾರಿಗಳು.
ಇದರ ಜತೆಗೆ ರಾಗಿಯನ್ನು ಹೆಚ್ಚಾಗಿ ಬೆಳೆಯುವಂತೆಯೂ ಉತ್ತೇಜನ ನೀಡಲಾಗುತ್ತಿದೆ. ರಾಗಿ ಬಹಳ ಒಳ್ಳೆಯ ಬೆಳೆ. ರೈತರಿಗೂ ಆದಾಯ ತರುತ್ತದೆ. ಎಕರೆಗೆ ಸರಾಸರಿ 20 ಕ್ವಿಂಟಾಲ್ ಇಳುವರಿ ಬರುತ್ತದೆ. ರಾಗಿಗೆ 5206 ರೂ. ಕನಿಷ್ಠ ಬೆಂಬಲ ಬೆಲೆ ಇದೆ. ಜತೆಗೆ ಮೇವೂ ಸಿಗುತ್ತದೆ ಎಂದು ರಾಗಿ ಬೆಳೆಯುವುದರ ಲಾಭವನ್ನು ತಿಳಿಸುತ್ತಾರೆ.
ಎಣ್ಣೆಕಾಳು ಸೋಯಾಬಿನ್ ಬೆಳೆಗೂ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಈ ವರ್ಷ 500 ಹೆಕ್ಟೇರ್‌ನಷ್ಟು ಸೋಯಾಬಿನ್ ಬೆಳೆಯುವ ಗುರಿ ಹೊಂದಲಾಗಿದೆ. ದೇಶಕ್ಕೆ ಅಡುಗೆ ಎಣ್ಣೆಯ ಆಮದು ಕಡಿಮೆ ಮಾಡಿ, ಸ್ವಾವಲಂಬನೆ ಸಾಧಿಸಬೇಕಿದೆ. ಈ ಉದ್ದೇಶಕ್ಕೆ ರೈತರೂ ಕೈಜೋಡಿಸಬೇಕು. ಶೇಂಗಾ, ಸೋಯಾಬಿನ್, ಸೂರ್ಯಕಾಂತಿ ಮುಂತಾದ ತಳಿಗಳನ್ನು ಬೆಳೆಯುವುದು ಸೂಕ್ತ ಎನ್ನುತ್ತವೆ ಮೂಲಗಳು.
ಖೇತಿ ಬಚಾವೋ ಆಂದೋಲನ
ಕೇಂದ್ರ ಸರ್ಕಾರದ ‘ಖೇತಿ ಬಚಾವೋ ಆಂದೋಲನ’ ಜೂ. 1ರಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು ಜೂ. 30ರ ವರೆಗೆ ನಡೆಯಲಿದೆ.
ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಈ ಅಭಿಯಾನ ನಡೆಯುತ್ತಿದೆ. ಎರಡು ತಂಡಗಳನ್ನು ರಚಿಸಲಾಗಿದ್ದು 84 ಹಳ್ಳಿಗಳಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ರಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ರೈತರು ಸಾವಯವ ಕೃಷಿಯನ್ನು ಅನುಸರಿಸಬೇಕು. ಯೂರಿಯಾ ಮುಂತಾದ ರಸಗೊಬ್ಬರಗಳ ಉಪಯೋಗ ತಪ್ಪಬೇಕು ಎಂಬುದು ಅಭಿಯಾನದ ಉದ್ದೇಶವಾಗಿದೆ.
ಬಿತ್ತನೆ ಗುರಿ
ಪ್ರಸ್ತುತ (2026-27) ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2.14 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ಅದರಲ್ಲಿ 1.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವ ಉದ್ದೇಶವಿದೆ. ಭತ್ತ 63,800 ಹೆಕ್ಟೇರ್, ರಾಗಿ 13,659 ಹೆಕ್ಟೇರ್, ತೊಗರಿ 2500 ಹೆಕ್ಟೇರ್, ಶೇಂಗಾ 3315 ಹೆಕ್ಟೇರ್, ಹತ್ತಿ 1,120 ಹೆಕ್ಟೇರ್, ಇತರೆ ಬೆಳೆಗಳು 3,299 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಯಲು ಯೋಜಿಸಲಾಗಿದೆ.
ಪೂರ್ವ ಮುಂಗಾರಿನಲ್ಲಿ 102.2 ಮಿ.ಮೀ. ವಾಡಿಕೆಗೆ 131.6 ಮಿ.ಮೀ. ಮಳೆಯಾಗಿದ್ದು ಶೇ. 29ರಷ್ಟು ಅಧಿಕವಾಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.
"
ಮುಂಗಾರು ಪ್ರವೇಶವಾದ ನಂತರ ಕನಿಷ್ಠ 100 ಮಿ.ಮೀ. ಮಳೆಯಾಗುವ ವರೆಗೆ ರೈತರು ಬಿತ್ತನೆ ಮಾಡಬಾರದು. ಭೂಮಿ ಚೆನ್ನಾಗಿ ಹಸಿಯಾಗಬೇಕು. ಈ ಬಾರಿ 500 ಹೆಕ್ಟೇರ್ ವಿಸ್ತೀರ್ಣದಲ್ಲಿ ಸೋಯಾಬಿನ್ ಬೆಳೆಯುವ ಉದ್ದೇಶವಿದೆ. ಆ ಬೆಳೆಗಾರರೂ ಕೂಡಾ 100 ಮಿ.ಮೀ. ಮಳೆಯಾದ ನಂತರವೇ ಬಿತ್ತನೆ ಮಾಡಬೇಕು. ರೈತರು ಮೆಕ್ಕೆಜೋಳ ಬೆಳೆಯುವುದು ಕಡಿಮೆ ಮಾಡಿ ಬೇಳೆ ಕಾಳುಗಳನ್ನು ಬೆಳೆಯಬೇಕು.