ದಾವಣಗೆರೆಯಲ್ಲಿ ಶನಿವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಫೋಟೋಗೆ ಹೈಕೋರ್ಟ್ ನ್ಯಾಯಾಧೀಶ ರವಿ ವಿ.ಹೊಸಮನಿ ಪುಷ್ಪಾರ್ಚನೆ ಮಾಡಿ ನಮಿಸಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ.ವೇಲಾ, ಡಾ.ಸಿ.ಎಸ್.ಪಾಟೀಲ್ ಟಿ.ಆರ್.ಗುರುಬಸವರಾಜ್, ಕೆ.ಜಿ.ಕೆ. ಸ್ವಾಮಿ ಇತರರಿದ್ದರು. ---
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೈಕೋರ್ಟ್ ನ್ಯಾಯಾಧೀಶ ರವಿ ವಿ.ಹೊಸಮನಿ ಕಿವಿಮಾತು
ದಾವಣಗೆರೆಯಲ್ಲಿ ವಕೀಲರ ದಿನಾಚರಣೆ
ನ್ಯಾಯವಾದಿಗಳು, ನ್ಯಾಯಾಧೀಶರಿಗೆ ರಕ್ಷಣೆ ಅನಗತ್ಯ
ದಾವಣಗೆರೆ:ವಕೀಲರು ಕಕ್ಷಿದಾರರ ಹಿತಾಸಕ್ತಿ ಕೇಂದ್ರೀಕರಿಸಿ ವಕಾಲತ್ತು ನಡೆಸಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ, ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಆದ ರವಿ ವಿ.ಹೊಸಮನಿ ಹೇಳಿದರು.
ನಗರದ ವಕೀಲರ ಸಾಂಸ್ಕೃತಿಕ ಸಭಾ ಭವನದಲ್ಲಿ ಶನಿವಾರ, ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯಸ್ಥಾನದಲ್ಲಿ ತೀರ್ಪು ನೀಡುವವರು ಮೊದಲು ವಕೀಲ ಸ್ಥಾನ ನಿರ್ವಹಿಸಿಯೇ ಬಂದಿರುತ್ತಾರೆ. ವಕೀಲರ ಸಾಮರ್ಥ್ಯದಂತೆ ನ್ಯಾಯಪೀಠಗಳ ಶಕ್ತಿ ಇರಲಿದೆ. ಹಾಗಾಗಿ ಕಕ್ಷಿದಾರರ ಹಿತಾಸಕ್ತಿಯಲ್ಲೇ ನಮ್ಮ ಸುಖ ಕಾಣಬೇಕಿದೆ ಎಂದು ಹೇಳಿದರು.
ವಕೀಲಿಗಾರಿಕೆಯ ಪ್ರಾವೀಣ್ಯತೆಗೆ ಅನೇಕರು ನೆನಪಾಗುತ್ತಾರೆ. ಈ ವೃತ್ತಿಗೆ ಕೊನೆ ಎಂಬುದಿಲ್ಲ. ಸಮಾಜದಲ್ಲಿನ ಘಟನೆಗಳು ಕಾನೂನಾತ್ಮಕವೇ ಇಲ್ಲವೆ ಎಂಬುದು ನ್ಯಾಯವಾದಿಗಳಿಗೆ ಅರಿವಾಗಲಿದೆ. ಕಾನೂನಿನ ರಕ್ಷಣೆಯಲ್ಲಿ ನಮ್ಮ ಕೊಡುಗೆ ಕುರಿತ ಅರಿವಿನ ಮೇಲೆ ಜವಾಬ್ದಾರಿಯೂ ಅಡಗಿದೆ ಎಂದು ತಿಳಿಸಿದರು.
ವಕೀಲರಿಗಾಗಲೀ, ನ್ಯಾಯಾಧೀಶರಿಗಾಗಲಿ ರಕ್ಷಣೆಯ ಅಗತ್ಯವಿಲ್ಲ. ವಕೀಲರು ರಕ್ಷಣೆ ಕೇಳಿದ್ದರೆ ಭಾರತಕ್ಕೆ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ. ವಕೀಲರಲ್ಲಿ ಛಲ, ಧೈರ್ಯ ಇದ್ದಾಗ ರಕ್ಷಣೆ ಅನಗತ್ಯ ಎಂದು ಪ್ರತಿಪಾದಿಸಿದರು.
ದೇಶದ ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಜೀವನ ಚರಿತ್ರೆ ಓದಿದಾಗ ಅವರ ಅಸಾಧಾರಣ ಬೌದ್ಧಿಕ ಶಕ್ತಿ ಹಾಗೂ ಸಂವಿಧಾನ ರಚನಾ ಸಭೆಯಲ್ಲಿ ಅವರ ಗೌರವಯುತ ನಡವಳಿಕೆ ಬಗ್ಗೆ ತಿಳಿಯಲಿದೆ. ಅವರು ಸಂಕೀರ್ಣ ಕಲಾಪಗಳನ್ನು ಅಸಾಧಾರಣ ಶಿಸ್ತಿನಿಂದ ನಿರ್ವಹಿಸಿದ್ದರು. ಅವರ ನಿಷ್ಪಕ್ಷಪಾತ, ವಿನಯ, ಸರಳತೆ ಸಾರ್ವತ್ರಿಕವಾಗಿ ಪ್ರಶಂಸೆಗೆ ಒಳಗಾಗಿತ್ತು ಎಂದು ಹೇಳಿದರು.
ಜನಾಂಗೀಯ ಕಾರಣಕ್ಕೆ ದಕ್ಷಿಣ ಆಫ್ರಿಕಾದ ರೈಲಿನಿಂದ ಹೊರದಬ್ಬಲ್ಪಟ್ಟ ಮಹಾತ್ಮ ಗಾಂಧೀಜಿ, ತಮಗಾದ ಅವಮಾನವನ್ನು ಮಾನವೀಯತೆ, ಘನತೆಗಾದ ಅಪಮಾನ ಎಂದು ಭಾವಿಸಿದರು. ದ್ವೇಷದ ಬದಲಾಗಿ ಸತ್ಯ- ಅಹಿಂಸೆಯ ಮೂಲಕ ಈ ಅನ್ಯಾಯ ನಿವಾರಿಸಲು ಜೀವನವಿಡೀ ಪ್ರಯತ್ನಿಸಿದರು. ಸತ್ಯ, ಪ್ರಾಮಾಣಿಕತೆ, ಅಹಿಂಸೆ ಮೊದಲಾದ ಅವರ ಸರಳ ತತ್ವಗಳೇ ಸ್ವಾತಂತ್ರೃ ಹೋರಾಟಕ್ಕೆ ಅಸಾಧಾರಣ ಬಲ ತುಂಬಿತು ಎಂದರು.
ಕಾನೂನು ಎಂದಿಗೂ ವಿಭಜನೆ ಇಲ್ಲವೇ ಪಕ್ಷಪಾತಕ್ಕೆ ಬಳಕೆಯಾಗಬಾರದು, ಕಾನೂನು ಐಕ್ಯತೆಯ ಸಾಧನವಾಗಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಅಸ್ಪೃಶ್ಯತೆ ನಿವಾರಣೆಗೆ ಇದೇ ಬಲವಾದ ಆಧಾರವಾಯಿತು. ಕಾನೂನನ್ನು ಸರಿಪಡಿಸದೆ ಯಾವುದೇ ಸರ್ಕಾರದಿಂದ ಸಮಸ್ಯೆ ಬಗೆಹರಿಸಲಾಗದು. ಹೀಗಾಗಿ ಅವರು ಅಸ್ಪೃಶ್ಯತೆಯ ವಿರುದ್ಧದ ಕಾನೂನು ಬಿಗಿಗೊಳಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ.ವೇಲಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಗುರುಬಸವರಾಜ್, ಹಿರಿಯ ವಕೀಲ ಕಿಲ್ಲೇದಾರ್, ಆಂಜನೇಯ ಗೂರೂಜಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಪಾಟೀಲ್ ‘ವಕೀಲಿಕೆ ಒಂದು ಸ್ವಾಯತ್ತ ಮತ್ತು ಸ್ವತಂತ್ರ ವೃತ್ತಿ’ ವಿಷಯವಾಗಿ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಕೆ.ಜಿ.ಕೆ. ಸ್ವಾಮಿ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ವನಜಾಕ್ಷಿ ಇತರರಿದ್ದರು.
ಸಾರ್ವಜನಿಕ ಸೇವೆಯು ವೈಯಕ್ತಿಕ ಶ್ರೀಮಂತಿಕೆಗೆ ದಾರಿಯಾಗಬಾರದು ಎಂಬುದು ರಾಜೇಂದ್ರ ಪ್ರಸಾದರ ಬಯಕೆಯಾಗಿತ್ತು. ಗುರಿಯಷ್ಟೇ ದಾರಿಯೂ ಶುದ್ಧವಾಗಿರಬೇಕು ಎಂದು ಅವರು ದೃಢವಾಗಿ ನಂಬಿದ್ದರು. ನಮ್ಮ ಗುರಿಯಂತೆಯೇ ಸಾಗುವ ದಾರಿಯೂ ಒಳ್ಳೆಯದಾಗಿರಬೇಕು.