ಚನ್ನಗಿರಿ ತಾಲೂಕಲ್ಲಿ ಜೀವಜಲಕ್ಕೆ ಹಾಹಾಕಾರ!

ಪಟ್ಟಣ ಸೇರಿದಂತೆ ತಾಲೂಕಿನ 89 ಹಳ್ಳಿಗಳಿಗೆ ನೀರಿಲ್ಲ
water problem
ಚನ್ನಗಿರಿ ಪಟ್ಟಣದ 9ನೇ ವಾರ್ಡ್‌ನಲ್ಲಿ ಪುರಸಭೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪ್ರತಿ ಮನೆಗೆ ನೀಡುತ್ತಿರುವುದು.water problem
Published on: 

ಟಿ.ಎನ್. ಜಗದೀಶ್ ಚನ್ನಗಿರಿ

ದಾವಣಗೆರೆ ಜಿಲ್ಲೆಯ ಎರಡನೇ ದೊಡ್ಡ ತಾಲೂಕು ಕೇಂದ್ರ ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನ 89 ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ನೀರಿನ ಮೂಲಕ್ಕೆ ಸಮಸ್ಯೆ ಇಲ್ಲ. ಆದರೆ ನಿರ್ವಹಣೆಯಲ್ಲಿನ ಲೋಪದಿಂದಾಗಿ ಜನ ಜೀವಜಲಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ಸೂಳೆಕೆರೆಯಲ್ಲಿ 21 ಅಡಿ ನೀರು ಸಂಗ್ರಹವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಪಟ್ಟಣ ಹಾಗೂ ತಾಲೂಕಿನ ಹಲವು ಹಳ್ಳಿಗಳಲ್ಲಿ ಜನ ಜೀವಜಲಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೂಳೆಕೆರೆ ಚಾಕ್‌ವೆಲ್‌ನಿಂದ ನೀರು ಎತ್ತಲು ಅಳವಡಿಸಲಾಗಿದ್ದ 120 ಎಚ್‌ಪಿ ಸಾಮರ್ಥ್ಯದ 5 ಮೋಟಾರ್‌ಗಳು ಸುಟ್ಟು ಹೋಗಿವೆ. ಹೀಗಾಗಿ ಚನ್ನಗಿರಿ ಹಾಗೂ ಹಲವು ಹಳ್ಳಿಗಳಿಗೆ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಪಟ್ಟಣದ 23 ವಾರ್ಡ್‌ಗಳಲ್ಲಿ ಪುರಸಭೆಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ ಅದು ಸಾಲದೆ ಸಾರ್ವಜನಿಕರು ಖಾಸಗಿ ಟ್ಯಾಂಕರ್‌ಗಳಿಗೆ 800 ರೂ. ನೀಡಿ ನೀರು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಪಟ್ಟಣಕ್ಕೆ ಸೂಳೆಕೆರೆ ಮತ್ತು ಹಿರೇಮಳಲಿ ಗ್ರಾಮದಿಂದ ಕುಡಿಯುವ ನೀರನ್ನು ಪೈಪ್ ಮೂಲಕ ತರಲಾಗುತ್ತದೆ. ಹಿರೇಮಳಲಿ ಗ್ರಾಮದಿಂದ ಚನ್ನಗಿರಿಗೆ ತಲುಪುವ ಪೈಪ್‌ಲೈನ್ 20 ವರ್ಷಗಳ ಹಳೆಯ ಯೋಜನೆಯಾಗಿದ್ದು, ಅಳವಡಿಸಿರುವ ಪೈಪ್‌ಗಳ ಅಳತೆ ಕಡಿಮೆ ಆಗಿದೆ ಮತ್ತು ಕೆಲವು ಕಡೆಗಳಲ್ಲಿ ಡ್ಯಾಮೇಜ್ ಆಗಿವೆ. ಈ ಪೈಪ್‌ಲೈನ್‌ಗಳನ್ನೂ ಕೂಡ ಬದಲಾವಣೆ ಮಾಡುವ ಅಗತ್ಯವಿದೆ.

ತೋಟಗಳಿಗೆ ಅಲೆಯುತ್ತಿರುವ ಗ್ರಾಮಸ್ಥರು

ಗ್ರಾಮೀಣ ಭಾಗದ ಗಂಗಗೊಂಡನಹಳ್ಳಿ, ಗಂಗಗೊಂಡನಹಳ್ಳಿ ತಾಂಡ, ಚಿಕ್ಕಮಳಲಿ, ಮಸಣಿಕೆರೆ, ಬೊಮ್ಮೇನಹಳ್ಳಿ, ತಣಿಗೆರೆ, ನೀತಿಗೆರೆ, ಕೊರಟಿಕೆರೆ ಸೇರಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಥಿತಿ ಶೋಚನೀಯವಾಗಿದೆ. ಬೆಳಗಾದರೆ ಸಾಕು, ಮನೆಯ ಗಂಡು-ಹೆಣ್ಣು ಮಕ್ಕಳು ಬಿಂದಿಗೆ ಹಿಡಿದು ಹಾಗೂ ಬೈಕ್ ಮೂಲಕ ಸುತ್ತಮುತ್ತಲಿನ ತೋಟಗಳಿಗೆ ನೀರಿಗಾಗಿ ಅಲೆಯುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ 5-6 ಬೋರ್‌ವೆಲ್‌ಗಳಿದ್ದರೂ ಒಂದೆರಡರಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಬರುತ್ತಿದೆ. ದನಕರುಗಳಿಗೆ ನೀರು ಕುಡಿಸಲು ನಿರ್ಮಿಸಿದ್ದ ತೊಟ್ಟಿಗಳು ಸಂಪೂರ್ಣ ಖಾಲಿಯಾಗಿವೆ.

ಶುದ್ಧ ನೀರಿನ ಘಟಕಗಳೂ ಬಂದ್!

ಚನ್ನಗಿರಿ ಪಟ್ಟಣದಲ್ಲಿರುವ 23 ಶುದ್ಧ ನೀರಿನ ಘಟಕಗಳಲ್ಲಿ 19 ಘಟಕಗಳು ನಿರ್ವಹಣೆ ಇಲ್ಲದೆ ವರ್ಷದಿಂದ ಬೀಗ ಹಾಕಲಾಗಿದೆ. ಕೇವಲ 4 ಘಟಕಗಳು ಮಾತ್ರ ಕಾರ್ಯನಿರ್ವ ಹಿಸುತ್ತಿವೆ. ತಾಲೂಕಿನಲ್ಲಿರುವ 241 ಘಟಕಗಳ ಪೈಕಿ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿಲ್ಲದೆ ಘಟಕಗಳು ನಿಂತಿವೆ. ಹೀಗಾಗಿ ಸಾರ್ವಜನಿಕರು 20 ಲೀಟರ್ ಖಾಸಗಿ ಕ್ಯಾನ್ ನೀರಿಗೆ 15 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ.

ಖಾಸಗಿ ಬೋರ್‌ವೆಲ್ಗಳಿಗೆ ಮೊರೆ

ತೀವ್ರ ನೀರಿನ ಅಭಾವವಿರುವ ಕಂಚಿಗನಾಳು, ದಂಡಿಗೇನಹಳ್ಳಿ, ಹೊದಿಗೆರೆ ಸೇರಿ ಮುಂತಾದ ಗ್ರಾಮಗಳಲ್ಲಿ ಜಿಯೋಲಾಜಿಸ್ಟ್‌ಗಳನ್ನು ಕರೆಸಿ ಹೊಸ ಕೊಳವೆಬಾವಿಗಳಿಗೆ ಪಾಯಿಂಟ್ ಮಾಡಿಸಲಾಗಿದೆ. ಇನ್ನು ತಾಲೂಕಿನ ಮಹದೇವಪುರ, ಹೆಬ್ಬಳಗೆರೆ, ಬೆಂಕಿಕೆರೆ, ವಿ.ರಾಮೇನಹಳ್ಳಿ, ಯರಗಟ್ಟಿಹಳ್ಳಿ, ಬೆಟ್ಟಕಡೂರು ಸೇರಿ ಹಲವು ಗ್ರಾಮಗಳಲ್ಲಿ ಬೋರ್‌ವೆಲ್‌ಗಳನ್ನು ರಿ-ಬೋರ್ ಮಾಡಿಸಲಾಗುತ್ತಿದ್ದು, ಖಾಸಗಿ ತೋಟದ ಮಾಲೀಕರ ಬೋರ್‌ವೆಲ್‌ಗಳಿಂದ ಬಾಡಿಗೆ ಆಧಾರದ ಮೇಲೆ ನೀರು ಪಡೆಯಲಾಗುತ್ತಿದೆ.

ಖಾಲಿಯಾಗುವ ಭೀತಿಯಲ್ಲಿ ಸೂಳೆಕೆರೆ

ಸೂಳೆಕೆರೆಯಿಂದ ಚನ್ನಗಿರಿ ಮಾತ್ರವಲ್ಲದೆ ಚಿತ್ರದುರ್ಗ, ಹೊಳಲ್ಕೆರೆ, ಭೀಮಸಮುದ್ರ, ಸಿರಿಗೆರೆ ಸೇರಿ ಮೂರು ಜಿಲ್ಲೆಗಳಿಗೆ ನೀರು ಹರಿಯುತ್ತಿದೆ. ಜತೆಗೆ ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿರುವುದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ನಿರಂತರ ನೀರು ಹರಿದುಹೋದರೆ ಕೆರೆ ಸಂಪೂರ್ಣ ಖಾಲಿಯಾಗುವ ಭೀತಿಯೂ ಎದುರಾಗಿದೆ.

ತಾಲೂಕಿನ 20 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಆದ್ಯತೆ ಮೇರೆಗೆ ಹೊಸ ಕೊಳವೆಬಾವಿ ಕೊರೆಸಲಾಗುವುದು. ಜಿಯೋ ಲಾಜಿಸ್ಟ್‌ಗಳಿಂದ ಪಾಯಿಂಟ್ ಗುರುತಿಸಲಾಗಿದ್ದು, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ.
ಬಿ.ಎಂ. ಲೋಹಿತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚನ್ನಗಿರಿ.

ಸೂಳೆಕೆರೆ ಚಾಕ್‌ವೆಲ್ ಮೋಟಾರ್‌ಗಳು ಎರಡು ಬಾರಿ ರಿಪೇರಿ ಮಾಡಿಸಿದರೂ ಮತ್ತೆ ಕೆಟ್ಟುಹೋಗಿದೆ. ತಂತ್ರಜ್ಞರನ್ನು ಕರೆಸಿ ರಿಪೇರಿ ಕೆಲಸ ಭರದಿಂದ ಸಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ನೀರು ಪೂರೈಕೆ ಆರಂಭಿಸಲಾಗುವುದು.

ಮಂಜುನಾಥ್ ಪುರಸಭೆ ಮುಖ್ಯಾಧಿಕಾರಿ, ಚನ್ನಗಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net