ಹೊನ್ನಾಳಿ ಬೆಸ್ಕಾಂ ಆವರಣದಲ್ಲಿ ಸೋಮವಾರ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್, ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಚನ್ನಬಸಪ್ಪ, ಬೆಸ್ಕಾಂ ಎಇಇಗಳಾದ ಜಯಪ್ಪ, ಶ್ರೀನಿವಾಸ್, ಮೆಹಬೂಬ್, ಚಂದ್ರಬಾಬು, ರಮೇಶ್, ಕೆ. ಚಂದ್ರಬಾಬು, ಲಕ್ಷ್ಮಣನಾಯ್ಕ, ಮುನಾವರ್, ಮುರುಳಿಧರ್ ಇತರರಿದ್ದರು.BESCOM
ಹೊನ್ನಾಳಿ: ವಿದ್ಯುತ್ ಪರಿವರ್ತಕಗಳನ್ನು ವಿತರಿಸುವಾಗ ರೈತ ರನ್ನು ಹೊನ್ನಾಳಿಯಿಂದ-ಹರಿಹರಕ್ಕೆ ಅಲೆದಾಡಿಸಿ ದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಡಿ.ಜಿ. ಶಾಂತನಗೌಡ ಹರಿಹರದ ಬೆಸ್ಕಾಂ ಇಂಜನಿಯರ್‌ಗೆ ಎಚ್ಚರಿಕೆ ನೀಡಿದರು.
ಹೊನ್ನಾಳಿ ಬೆಸ್ಕಾಂ ಆವರಣದಲ್ಲಿ ಸೋಮವಾರ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರಿಗೆ ಟಿಸಿ ತರಲು ಲಾರಿಗಳನ್ನು ಕಳುಹಿಸಿ ಕೊಡುತ್ತೇನೆ. ಆದರೆ, ಬೆಸ್ಕಾಂನಿಂದ ಹೊನ್ನಾಳಿಯಲ್ಲಿ ಟಿಸಿ ವಿತರಿಸುವ ಕೆಲಸವಾಗಬೇಕು. ಈ ಕುರಿತು ಮೇಲಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದರು.
ರೈತರು ಸಮಸ್ಯೆಯಿಂದ ನಿಮ್ಮ ಬಳಿ ಬಂದರೆ ಮೇಲಧಿಕಾರಿಗಳ ಆದೇಶ ಎಂದು ಹೇಳುವುದು ಸರಿಯಲ್ಲ. ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸೇವೆ ನೀಡಿ. ಕೃಷಿಕರು ನಿಮ್ಮನ್ನು ನೆನೆಯುತ್ತಾರೆ ಎಂದು ಹೇಳಿದರು.
ನಿವೃತ್ತಿ ಹೊಂದಲಿರುವ ಎಇಇ ಜಯಪ್ಪ ಉತ್ತಮ ಕೆಲಸ ಮಾಡಿದ್ದಾರೆ ಎಂದು ಇದೇ ವೇಳೆ ಶ್ಲಾಘಿಸಿದರು. ಗಾಳಿ ಮಳೆ, ಬಿಸಿಲಿಗೆ ಎದೆಗುಂದದೆ ಲೈನ್‌ಮೆನ್‌ಗಳು ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ಸೂಚಿಸಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿ ಕಾರಿಗಳು ನಿವೇಶನ ಕೇಳಿದ್ದು ಸಂಘದ 3 ವರ್ಷದ ಆಡಿಟ್ ವರದಿ ಹಾಗೂ ನಿವೇಶನ ಕೋರಿದ ಅರ್ಜಿಯನ್ನು ಪುರಸಭೆಗೆ ಸಲ್ಲಿಸಿದರೆ ನಿವೇಶನ ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್ ಮಾತನಾಡಿ, ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ನಿರ್ವಹಿಸುವ ಹೊನ್ನಾಳಿ ಸಂಘವು ಇತರ ತಾಲೂಕುಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಹೊನ್ನಾಳಿಯಲ್ಲಿ ನಿವೇಶನ ಖರೀದಿಸುವು ದಾದರೆ, ಕೇಂದ್ರ ಸಂಘದಿಂದ ಹಣಕಾಸಿನ ವ್ಯವಸ್ಥೆ ಮಾಡುತ್ತೇವೆ. ನಿವೇಶನ ಖರೀದಿಯ ದಾಖಲೆಗಳನ್ನು ಕೇಂದ್ರ ಸಮಿತಿಗೆ ಕಳುಹಿಸುವಂತೆ ತಿಳಿಸಿದರು.
2012ರ ಹಿಂದೆ ಕ್ಲಾಸ್-2 ಗುತ್ತಿಗೆದಾರರನ್ನು ಕ್ಲಾಸ್-1 ಗುತ್ತಿಗೆದಾರರನ್ನಾಗಿ ಮಾಡುವುದಕ್ಕೆ ಚರ್ಚಿಸಿದ್ದೇವೆ. ಶೀಘ್ರವೇ 900ಜನ ಕ್ಲಾಸ್-2 ಗುತ್ತಿಗೆದಾರರಿಗೆ ಲೈಸೆನ್ಸ್ ಸಿಗಲಿದೆ ಎಂದರು.
ಗುತ್ತಿಗೆದಾರರ ಕ್ಷೇಮಾಭಿವೃದ್ಧಿಗೆ ಅನುದಾನ ಕೇಳಿದ್ದೇವೆ. 5 ಲಕ್ಷ ರೂ.ಒಳಗಿನ ಗುತ್ತಿಗೆಗಳನ್ನು ಸ್ಥಳೀಯರಿಗೆ ನೀಡಬೇಕೆಂಬ ಸರ್ಕಾರದ ಆದೇಶವಿದೆ. ಅಧಿಕಾರಿಗಳನ್ನು ಕೇಳಬೇಕು ಎಂದು ಇಲ್ಲ ಸಲ್ಲದ ಸಬೂಬು ನೀಡಿದರೆ ಗಮನಕ್ಕೆ ತನ್ನಿ ರಾಜ್ಯ ಸಂಘ ನಿಮ್ಮ ಬೆನ್ನಿಗೆ ಇರುತ್ತದೆ ಎಂದು ಹೇಳಿದರು.
ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಚನ್ನಬಸಪ್ಪ ಮಾತನಾಡಿ ಸಂಘಕ್ಕೆ ನಿವೇಶನ ಕೋರಿ ಶಾಸಕರಿಗೆ ಮನವಿ ಮಾಡಿದರು. ಬೆಸ್ಕಾಂ ಎಇಇ ಗಳಾದ ಶ್ರೀನಿವಾಸ್, ಮೆಹಬೂಬ್, ಚಂದ್ರಬಾಬು, ರಮೇಶ್, ಕೆ. ಚಂದ್ರಬಾಬು, ಲಕ್ಷ್ಮಣನಾಯ್ಕ, ಮುನಾವರ್, ಮುರುಳಿಧರ್ ಇತರರಿದ್ದರು.
"
ಶಾಸಕರ ಸೂಚನೆಯಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಹೊನ್ನಾಳಿಯಲ್ಲೇ ಟಿಸಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು, ರೈತರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡುವಂತೆ ನಮ್ಮ ಅಧೀನದ ಎಲ್ಲಾ ಎಇಇಗಳಿಗೆ ತಿಳಿಸಿದ್ದಾಗಿದೆ.