ಹೊನ್ನಾಳಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ಜಂಟಿ ಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್‌ಗಳಾದ ರಾಜೇಶ್ ಕುಮಾರ್, ಕವಿರಾಜ್, ಡಿಎಫ್‌ಒ ಹರ್ಷವರ್ಧನ್, ಆರ್‌ಎಫ್‌ಒ ಕಿಶೋರ್ ನಾಯ್ಕ,ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಇತರರು ಇದ್ದರು.
ಹೊನ್ನಾಳಿ:ಕಂದಾಯ ಸಚಿವ ಕೃಷ್ಣ ಬೈರೇಗೌಡ ತಮ್ಮ ಇಲಾಖೆಯಲ್ಲಿ ಕ್ರಾಂತಿಯನ್ನೇ ಮಾಡಿ ರೈತರಿಗೆ ಆಗುತ್ತಿದ್ದ ಹಲವಾರು ತೊಂದರೆಗಳನ್ನು ನಿವಾರಿಸಿದ್ದಾರೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಇಲಾಖೆಯ ಕೆಲಸಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ಜಂಟಿ ಸಭೆಯಲ್ಲಿ ಮಾತನಾಡಿ, ನೀವು ಸಹ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಸಾರ್ವಜನಿಕರು ಹಾಗೂ ರೈತರನ್ನು ಅಲೆದಾಡಿಸುವ ವಿಷಯ ಗೊತ್ತಾದರೆ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆಯಲ್ಲಿ ದರಖಾಸ್ತು ಪೋಡಿ, ಪೌತಿಖಾತೆ, ಕಂದಾಯ ಗ್ರಾಮ, 94ಸಿ, ಫಾರಂ ನಂ. 50 ಹಾಗೂ 53 ಅಡಿಯಲ್ಲಿ ಬರುವ ಬಗರ್‌ಹುಕುಂ ಅರ್ಜಿಗಳ ವಿಲೇವಾರಿ ಮಾಡಿ ಅರ್ಹ ಫಲಾನುಭವಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗುವಂತೆ ನಮ್ಮ ಸರ್ಕಾರ ನೋಡಿಕೊಂಡಿದೆ. ಅದೇ ರೀತಿಯಲ್ಲಿ ನೀವು ಸಹ ರೈತರು ಕಚೇರಿಗೆ ಅಲೆಯದಂತೆ ನೋಡಿಕೊಳ್ಳಬೇಕು ಎಂದರು. ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ಮಾಡಿ ಶೀಘ್ರವೇ ಕಂದಾಯ ಇಲಾಖೆಗೆ ಸೇರಬೇಕಾದ ಭೂಮಿಯನ್ನು ಅರಣ್ಯ ಇಲಾಖೆ ಬಿಟ್ಟುಕೊಡಬೇಕು. ಈ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಖುದ್ದು ಹಾಜರಿದ್ದು ಸರ್ವೇಗೆ ಮುಂದಾಗಬೇಕು. ಇಲ್ಲದಿದ್ದರೆ ರೈತರಿಗೆ ತುಂಬ ಅನನುಕೂಲ ಆಗುತ್ತದೆ. ತಡ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಎಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೆರೆ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ ಕೆರೆ ಸಂರಕ್ಷಣೆ ಮಾಡಿದ ಮೊದಲ ಸರ್ಕಾರ ನಮ್ಮದು. ಯಾರ ಮುಲಾಜಿಗೂ ಒಳಗಾಗದೆ ಕೆರೆ ಒತ್ತುವರಿಯನ್ನು ತೆರವು ಮಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನಮ್ಮ ಸರ್ಕಾರ ಪಾಲಿಸಿದೆ ಎಂದರು.