ದಾವಣಗೆರೆ :ವಿಬಿ-ಜಿ ರಾಮ್‌ಜಿ ಯೋಜನೆಯಡಿ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈಗಾಗಲೇ ಅನುಷ್ಠಾನ ಮಾಡಲಾಗುತ್ತಿದೆ ಎಂದು ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಹೇಳಿದರು.
ಜಿ.ಪಂ. ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೃಷಿ ಇಲಾಖೆಯ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕೃಷಿ ಜಮೀನುಗಳಿಗೆ ಬದು ನಿರ್ಮಾಣ ಮಾಡುವುದರಿಂದ ಮಳೆನೀರು ಕೊಯ್ಲು ಮಾಡಬಹುದು. ಕೊಳವೆಬಾವಿಗಳ ಸುತ್ತ ಇಂಗು ಗುಂಡಿ ನಿರ್ಮಿಸಿದರೆ ಮಳೆನೀರು ಅದರಲ್ಲಿ ಇಂಗುವ ಮೂಲಕ ಅಂತರ್ಜಲಮಟ್ಟ ಹೆಚ್ಚಳವಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ನೀರು ಹಿಡಿದಿಡುವ ಗುಂಡಿಗಳನ್ನು ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ಯೋಜನೆಯಡಿ ಒಟ್ಟು 318 ಕಾಮಗಾರಿಗಳಿದ್ದು ಅವುಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಕಾಮಗಾರಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ಸಮುದಾಯ ಕೃಷಿ ಹೊಂಡಗಳ ನಿರ್ಮಾಣ, ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು ಎಂದರು.
ಜಂಟಿ ಕೃಷಿ ನಿರ್ದೇಶಕ ಕೆ. ಜಿಯಾವುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಶೇ. 48ರಷ್ಟು ಮಳೆಯ ಕೊರತೆಯಿದೆ. ಇದುವರೆಗೆ ಶೇ. 21.55ರಷ್ಟು ಮಾತ್ರ ಬಿತ್ತನೆಯಾಗಿದೆ. ಬೀಜ, ಗೊಬ್ಬರದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.
ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ 2025-26ನೇ ಸಾಲಿನಲ್ಲಿ 23 ಲಕ್ಷ ರೂ. ವೆಚ್ಚ ಮಾಡಲಾಗಿದ್ದು 39 ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.
ಮೆಕ್ಕೆಜೋಳ ಬೆಳೆಯಲು ಕಾಲಾವಕಾಶ ಮುಗಿದಿರುವುದರಿಂದ ರಾಗಿ, ಹುರುಳಿ ಮುಂತಾದ ಬೆಳೆ ಬೆಳೆಯುವಂತೆ ರೈರಿಗೆ ಅರಿವು ಮೂಡಿಸಿ. ಭೂಮಿಯನ್ನು ಖಾಲಿ ಬಿಡುವುದು ಬೇಡ. ಬೀಗ, ಗೊಬ್ಬರ ಮಾರಾಟಗಾರರು ಎಂಆರ್‌ಪಿ ದರಕ್ಕಿಂತ ಹೆಚ್ಚು ಹಣವನ್ನು ರೈತರಿಂದ ವಸೂಲಿ ಮಾಡದಂತೆ ನೋಡಿಕೊಳ್ಳಬೇಕು ಎಂದು ಸಿಇಒ ಸೂಚನೆ ನೀಡಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ದೇವರಾಜ್, ಪ್ರಗತಿಪರ ರೈತ ಹೆದ್ನೆ ಮುರುಗೇಶಪ್ಪ ಮಾತನಾಡಿದರು. ಮೀನುಗಾರಿಕೆ, ಪಶುಪಾಲನೆ ಮುಂತಾದ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ನೈಸರ್ಗಿಕ ಕೃಷಿಗೆ ಒತ್ತು
ಭೂಮಿಯ ಫಲವತ್ತತೆ ಕಾಪಾಡಿ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ರೈತರು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು ಎಂದು ಸಿಇಒ ತಿಳಿಸಿದರು.
ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಕೆಲವೆಡೆ ಬರ ಇದ್ದರೆ ಮತ್ತೆ ಕೆಲವೆಡೆ ಅತಿವೃಷ್ಟಿ ನೋಡುತ್ತೇವೆ. ಅರಣ್ಯ ನಾಶ ಸೇರಿ ಪರಿಸರ ವಿರೋಧಿ ಕೃತ್ಯಗಳು ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಕೃಷಿಗೆ ಮರಳುವುದು ಅನಿವಾರ್ಯವಾಗಿದೆ. ಈ ಕುರಿತು ರೈತರಿಗೆ ತಿಳಿವಳಿಕೆ ನೀಡುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇತ್ತೀಚೆಗೆ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಮಣ್ಣಿನ ಆರೋಗ್ಯ ಕ್ಷೀಣಿಸಿದೆ. ಈ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಬೇಕು. ನಮ್ಮ ಮಟ್ಟದಲ್ಲಿ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವುದರಿಂದ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
ನಮ್ಮ ಹಿರಿಯರ ಕಾಲದಲ್ಲಿ ರಾಸಾಯನಿಕಗಳನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ಯಂತ್ರೋಪಕರಣ, ಟ್ರಾೃಕ್ಟರ್ ಉಪಯೋಗವೂ ಇರಲಿಲ್ಲ. ಆದಾಯ ಸ್ವಲ್ಪ ಕಡಿಮೆಯಾದರೂ ರೈತರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಈಗ ಆ ಸ್ಥಿತಿ ಇಲ್ಲ. ಹಳ್ಳಿಗಳಿಗೆ ಹೋದರೆ ಹಸು, ಎತ್ತುಗಳು ಕಾಣಿಸುವುದೇ ಅಪರೂಪವಾಗಿದೆ.
ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿದೆ. ಖರ್ಚುಗಳು ಹೆಚ್ಚಾಗಿ ರೈತರು ಬ್ಯಾಂಕ್ ಸಾಲದ ಮೊರೆ ಹೋಗುತ್ತಿದ್ದಾರೆ. ಅದನ್ನು ತೀರಿಸಲು ಆಗದಿದ್ದಾಗ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
"
ಮೆಕ್ಕೆಜೋಳ ಬೆಳೆಯುವುದನ್ನು ಕಡಿಮೆ ಮಾಡಿ ದ್ವಿದಳ ಧಾನ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ವರ್ಷದಿಂದ ವರ್ಷಕ್ಕೆ ಬೆಳೆ ಬದಲಾವಣೆ ಮಾಡಬೇಕು. ಮಿಶ್ರ ಬೆಳೆ ಬೆಳೆಯುವುದನ್ನು ರೂಢಿಸಿಕೊಂಡರೆ ಒಂದಿಲ್ಲ ಒಂದು ಬೆಳೆ ಕೈ ಹಿಡಿಯುತ್ತದೆ.