ಕರ್ನಾಟಕ ಪ್ರತಿಭಾ ಅಕಾಡೆಮಿ ದಾವಣಗೆರೆ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು. ಶಾಸಕ ಕೆೆ. ಎಸ್.ಬಸವಂತಪ್ಪ, ಕೆ.ಪಿ.ಪಾಲಯ್ಯ, ನಂದಿಗಾವಿ ಶ್ರೀನಿವಾಸ್, ಎನ್.ಟಿ. ಎರ‌್ರಿಸ್ವಾಮಿ ಇತರರಿದ್ದರು.
ದಾವಣಗೆರೆ: ವಿಕಲಾಂಗರೂ ಸೇರಿ ಕಷ್ಟದಲ್ಲಿದ್ದವರು ಕೂಡ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದಾರೆ. ಸಾಧನೆಗೆ ಬಡತನ ಎಂಬ ಸೋಗು ಹಾಕಬೇಡಿ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಕರ್ನಾಟಕ ಪ್ರತಿಭಾ ಅಕಾಡೆಮಿ ದಾವಣಗೆರೆ ಘಟಕದಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಣ್ಣಾ ಹಜಾರೆ ಪುಸ್ತಕ ಓದಿ ಪ್ರಭಾವಿತರಾಗಿ ಭ್ರಷ್ಟಾಚಾರಮುಕ್ತ ಭಾರತಕ್ಕಾಗಿ ಹೋರಾಟ ಸವೆಸಿದರು. ಕಷ್ಟದಲ್ಲೇ ಬೆಳೆದ ಕಿರಣ್‌ಬೇಡಿ ಐಎಎಸ್ ಅಧಿಕಾರಿಯಾದರು. ಕೇಜ್ರಿವಾಲ್ ಸಿಎಂ ಆಗಿ ಕೆಲಸ ಮಾಡಿದರು. ಶಿಕ್ಷಣ ಎಂಬುದು ಹುಲಿಯ ಹಾಲು. ಅದನ್ನು ಕುಡಿದವರು ಸಿಂಹದಂತೆಯೇ ಗರ್ಜಿಸಬಹುದು ಎಂದು ಸೂಚ್ಯವಾಗಿ ಹೇಳಿದರು.
ಮೊಬೈಲ್, ಟಿವಿ ಪ್ರವೇಶದಿಂದಾಗಿ ಪಾಲಕರು ಬಾರ್- ಧಾರಾವಾಹಿಗಳಲ್ಲಿ ಮುಳುಗಿದ್ದರೆ ಮಕ್ಕಳು ಆನ್‌ಲೈನ್ ಹೆಸರಲ್ಲಿ ಮೊಬೈಲ್ ಯಥೇಚ್ಚವಾಗಿ ಬಳಸುತ್ತಿದ್ದಾರೆ. ಮನೆಗಳ ಮುಂದೆ ರಂಗೋಲಿ ಹಾಕುವ, ಕನಿಷ್ಠ ತುಳಸಿ ಪೂಜೆ ಮಾಡುವ ಸಂಸ್ಕೃತಿ ಕಡಿಮೆಯಾಗಿದೆ. ಪಾಲಕರು ಕೂಡ ಮಕ್ಕಳ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದು ವಿಷಾದಿಸಿದರು.
ಶಿಕ್ಷಣ ಇರುವುದು ಉದ್ಯೋಗ, ದುಡಿಮೆಗಾಗಿ ಅಲ್ಲ, ಜ್ಞಾನಕ್ಕಾಗಿ. ಹಾಲಿಗೆ ಸಂಸ್ಕಾರ ನೀಡಿದಾಗ ಉಪಉತ್ಪನ್ನಗಳನ್ನು ಕಾಣಬಹುದು. ಹೀಗಾಗಿ ಶಿಕ್ಷಣದ ಜತೆಗೆ ಸಂಸ್ಕಾರ ಬೆರೆತರೆ ಸಮಾಜದಲ್ಲಿ ಸ್ಥಾನಮಾನ, ಜೀವನದಲ್ಲಿ ಸುಖ-ಶಾಂತಿ ಸಿಗಲಿದೆ. ಸಂಸ್ಕಾರವಿಲ್ಲದ ಶಿಕ್ಷಣ ಬಲ್ಬ್ ಇಲ್ಲದ ವಿದ್ಯುತ್ ಕಂಬದಂತೆ ಎಂದು ಹೇಳಿದರು.
ಬಡತನದಲ್ಲಿ ಅರಳುವ ಪ್ರತಿಭೆ ಅರಮನೆಯಲ್ಲಿ ಅಂತ್ಯಗೊಳ್ಳುತ್ತದೆ. ಮೂರು ನಾಟಕಗಳನ್ನು ನೋಡಿ ಪ್ರಭಾವಿತರಾದ ಕರಮಚಂದ ಗಾಂಧಿ ರಾಷ್ಟ್ರಪಿತ ಎನಿಸಿಕೊಂಡರು ಎಂದ ಅವರು, ಕೂಲಿ ಕೆಲಸದಲ್ಲಿದ್ದ ನಾನು ಮತ್ತು ಪೌರಕಾರ್ಮಿಕರಾಗಿದ್ದ ಬಸವಂತಪ್ಪ ಇಬ್ಬರೂ ಶಾಸಕರಾಗುತ್ತೇವೆ ಎಂದೂ ಕನಸಲ್ಲೂ ಅಂದುಕೊಂಡಿರಲಿಲ್ಲ. ಅಧಿಕಾರದತ್ತ ಇಂದೂ ಸಹ ವಿಧಾನಸೌಧ ಸುತ್ತ ಆತ್ಮಗಳು ಸುತ್ತಾಡುತ್ತಿವೆ ಎಂದು ತಿಳಿಸಿದರು.
ಶಾಸಕ ಕೆೆ. ಎಸ್.ಬಸವಂತಪ್ಪ ಮಾತನಾಡಿ ವಿದ್ಯಾರ್ಥಿಗಳು ಅಂಕ ಗಳಿಕೆಯಲ್ಲದೆ ಮಾನವೀಯತೆಯನ್ನೂ ರೂಢಿಸಿಕೊಳ್ಳಬೇಕು. ನೂರಕ್ಕೆ ನೂರು ಅಂಕ ಪಡೆದ ಮಾತ್ರಕ್ಕೆ ಪ್ರತಿಭಾವಂತರಾಗುವುದಿಲ್ಲ. ನೆರೆಹೊರೆಯವರು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣವಂತರಾಗಬೇಕು ಎಂದು ಆಶಿಸಿದರು.
ಅಕ್ಷರಜ್ಞಾನವಿಲ್ಲದವರು ಪಾಲಕರನ್ನು ಗೌರವದಿಂದ ಕಾಣುತ್ತಿದ್ದರೆ ವಿದ್ಯಾವಂತರು ವೃದ್ಧಾಶ್ರಮಕ್ಕೆ ಕಳಿಸುತ್ತಿದ್ದಾರೆ ಎಂದ ಅವರು, ವಿದ್ಯಾರ್ಥಿಗಳು ಜೀವನದ ಗುರಿ ತಲುಪಲು ಮೊಬೈಲ್ ಹಾಗೂ ದುಶ್ಚಟಗಳ ಸಂಗ ಬಿಡಬೇಕು. ಸಾಧನೆ ಕಡೆಗೆ ಮಾತ್ರ ಗಮನ ಹರಿಸಬೇಕು ಎಂದರು.
ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ಸತೀಶ್ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಅಡಿಯಲ್ಲಿ ಜಿಲ್ಲಾವಾರು ಕರ್ನಾಟಕ ಪ್ರತಿಭಾ ಅಕಾಡೆಮಿ ತೆರೆದು ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ಧಾರೆ. ಹರಿಹರ ಸೇರಿ ರಾಜ್ಯವ್ಯಾಪಿ ನಾಲ್ಕು ಕಡೆಗಳಲ್ಲಿ ವಿವಿಧ ತರಬೇತಿ ಕೇಂದ್ರ ತೆರೆದಿದ್ದು ಆಸಕ್ತರು ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹರಿಹರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಮುಖಂಡ ಹೊದಿಗೆರೆ ರಮೇಶ್. ಕೆನರಾಬ್ಯಾಂಕ್ ನಿವೃತ್ತ ಪ್ರಬಂಧಕ ಎನ್.ಟಿ. ಎರ‌್ರಿಸ್ವಾಮಿ, ವಿಜಯಕುಮಾರ್, ಮಾರಣ್ಣ, ಅಂಜಿನಪ್ಪ, ಟಿ.ಬಸವರಾಜ್ ಇತರರಿದ್ದರು.