

ಟಿ. ಶ್ರೀನಿವಾಸ್ ಹೊನ್ನಾಳಿ
ಆಧಾರ್ ಕಾರ್ಡ್ ಹೆಸರು ಕೇಳಿದರೆ ಸಾಕು ತಾಲೂಕಿನ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಬೆಚ್ಚಿಬೀಳುವ ವಾತಾವರಣ ನಿರ್ಮಾಣವಾಗಿದೆ. ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಅಪ್‌ಡೇಟ್‌ಗಾಗಿ ಸಾರ್ವಜನಿಕರು ರಾತ್ರಿ 12 ಗಂಟೆಯಿಂದಲೇ ಸೇವಾ ಕೇಂದ್ರಗಳ ಹೊರಗಡೆ ಮಲಗಬೇಕಾದ ದುಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳ ಬಯೋಮೆಟ್ರಿಕ್ ಅಪ್‌ಡೇಟ್, ಶಿಶುಗಳ ಆಧಾರ್ ಆಧಾರಿತ ಜನನ ನೋಂದಣಿ ಹಾಗೂ ಪಡಿತರ ಕಾರ್ಡ್‌ಗೆ ಇ-ಕೆವೈಸಿ ಮಾಡಿಸಲು ಅ.20 ಕೊನೆಯ ದಿನಾಂಕವಾಗಿದೆ. ಅಷ್ಟರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ರೇಷನ್ ನೀಡುವುದಿಲ್ಲ ಎಂದು ನ್ಯಾಯಬೆಲೆ ಅಂಗಡಿಯವರು ಎಚ್ಚರಿಕೆ ನೀಡಿರುವುದರಿಂದ ಗ್ರಾಮೀಣ ಭಾಗದ ರೈತರು ಹಾಗೂ ತಾಯಂದಿರು ಹಗಲು-ರಾತ್ರಿ ಎನ್ನದೆ ಸರದಿಯಲ್ಲಿ ನಿಲ್ಲುವಂತಾಗಿದೆ.
ಹೊನ್ನಾಳಿ ಪಟ್ಟಣದಲ್ಲಿ ಅಂಚೆ ಕಚೇರಿ, ಕರ್ನಾಟಕ ಬ್ಯಾಂಕ್ ಹಾಗೂ ಖಾಸಗಿ ಸೇವಾ ಕೇಂದ್ರಗಳಲ್ಲಿ ಆಧಾರ್ ಸೇವೆಗೆ ಅವಕಾಶ ನೀಡಲಾಗಿದೆ. ಆದರೆ, ಅಂಚೆ ಕಚೇರಿಯಲ್ಲಿ ಆಧಾರ್ ಕಿಟ್ ದುರಸ್ತಿಯಲ್ಲಿದೆ ಎಂದು ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. ಬ್ಯಾಂಕ್ ಹಾಗೂ ಸೇವಾ ಕೇಂದ್ರಗಳಲ್ಲಿ ದಿನಕ್ಕೆ ಕೇವಲ 20 ಜನರಿಗೆ ಟೋಕನ್ ನೀಡಲಾಗುತ್ತಿದೆ. ಟೋಕನ್ ಪಡೆದ 20 ಜನರಲ್ಲಿಯೂ ತಾಂತ್ರಿಕ ದೋಷಗಳಿದ್ದರೆ ಸೂಕ್ತ ಕಾರಣ ನೀಡದೆ ವಾಪಸ್ ಕಳುಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸದೆ, ರಾತ್ರಿಯಿಡೀ ಆಧಾರ್ ಕೇಂದ್ರಗಳ ಮುಂದೆ ಮಲಗಿಸಿಕೊಂಡು ಟೋಕನ್‌ಗೆ ಕಾಯುವ ದುಸ್ಥಿತಿ ನಮ್ಮ ಶತ್ರುಗಳಿಗೂ ಬೇಡ ಎನ್ನುತ್ತಾರೆ ಸಾರ್ವಜನಿಕರು.
ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿ ಬೆಂಗಳೂರಿನಿಂದ ಆಗಮಿಸಿದ್ದ ಆಧಾರ್ ಅನುಷ್ಠಾನ ಸಮಿತಿಯ ಎದುರು ಜಿಲ್ಲಾಧಿಕಾರಿಗಳು ಈ ತೊಂದರೆಯ ಬಗ್ಗೆ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ತಾಲೂಕಿನ ಹೋಬಳಿ ಮಟ್ಟದ ಕೇಂದ್ರಗಳಲ್ಲಿರುವ ಆಧಾರ್ ಕಿಟ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕುರಿತು ತಹಸೀಲ್ದಾರ್ ಎಂ.ಪಿ. ಕವಿರಾಜ್ ಮಾತನಾಡಿ, ಸಾರ್ವಜನಿಕರ ದಟ್ಟಣೆ ತಗ್ಗಿಸಲು ಹಾಗೂ ಸುಲಭ ಸೇವೆ ಒದಗಿಸಲು ಜಿಲ್ಲೆಯ 6 ತಾಲೂಕುಗಳಿಗೆ ತಲಾ ಒಂದರಂತೆ 6 ಹೆಚ್ಚುವರಿ ಸಿಇಜಿ ಕಿಟ್‌ಗಳನ್ನು ಒದಗಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಿಇಒ ಅವರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಆದರೆ ಇಲಾಖೆಯಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ ಎಂದು ವಿವರಿಸಿದರು.