ಮಾಜಿ ಸೈನಿಕರಿಗೆ ನೆರವಿನ ‘ಸ್ಪರ್ಶ’

ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಸ್ಪರ್ಶ’ ಶಿಬಿರದಲ್ಲಿ ಮಾಜಿ ಸೈನಿಕರು ತಮ್ಮ ಸೇವಾ ದಾಖಲಾತಿಗಳಲ್ಲಿನ ನ್ಯೂನತೆಗಳ ಬಗ್ಗೆ ಅಧಿಕಾರಿಗಳ ಮುಂದೆ ಹೇಳಿಕೊಂಡರು.
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಸ್ಪರ್ಶ’ ಶಿಬಿರದಲ್ಲಿ ಮಾಜಿ ಸೈನಿಕರು ತಮ್ಮ ಸೇವಾ ದಾಖಲಾತಿಗಳಲ್ಲಿನ ನ್ಯೂನತೆಗಳ ಬಗ್ಗೆ ಅಧಿಕಾರಿಗಳ ಮುಂದೆ ಹೇಳಿಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಸೇವಾ ದಾಖಲಾತಿಗಳ ತಿದ್ದುಪಡಿ ಶಿಬಿರ
  • ಮೊದಲ ದಿನ 100ಕ್ಕೂ ಹೆಚ್ಚು ಮಂದಿ ಭಾಗಿ
ದಾವಣಗೆರೆ : ಭಾರತೀಯ ವಾಯು ಸೇನೆ ಸಂಘದ ಕರ್ನಾಟಕ ಶಾಖೆ ಹಾಗೂ ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಮಾಜಿ ಸೈನಿಕರಿಗೆ ನೆರವಾಗಲು ‘ಸ್ಪರ್ಶ’ ಶಿಬಿರ ನಗರದ ಬಿಐಇಟಿ ಕಾಲೇಜಿನಲ್ಲಿ ಶುಕ್ರವಾರ ಉದ್ಘಾಟನೆಯಾಯಿತು.
ದಾವಣಗೆರೆ ಅಲ್ಲದೇ ಹಾವೇರಿ, ರಾಣೇಬೆನ್ನೂರು, ಚಿತ್ರದುರ್ಗ, ಹರಪನಹಳ್ಳಿ ಮುಂತಾದ ಕಡೆಗಳಿಂದ 100ಕ್ಕೂ ಹೆಚ್ಚು ಮಾಜಿ ಸೈನಿಕರು ಪಾಲ್ಗೊಂಡು, ಸೇವಾ ದಾಖಲಾತಿಗಳಲ್ಲಿನ ನ್ಯೂನತೆಗಳ ಬಗ್ಗೆ ಹೇಳಿಕೊಂಡರು. ಪ್ರಯಾಗರಾಜ್ ಮತ್ತು ದೆಹಲಿಯಿಂದ ಬಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರ ದಾಖಲೆಗಳನ್ನು ಪರಿಶೀಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಮಾಡಿದರು.
ಶಿಬಿರ ಶನಿವಾರವೂ ಮುಂದುವರಿಯಲಿದ್ದು ಇನ್ನಷ್ಟು ಮಾಜಿ ಸೈನಿಕರು ಆಗಮಿಸಿ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದರು.
ಶಿಬಿರ ಉದ್ಘಾಟಿಸಿದ ಭಾರತೀಯ ವಾಯು ಸೇನೆ ಸಂಘದ ಅಧ್ಯಕ್ಷ ಏರ್ ಮಾರ್ಷಲ್ ಎಚ್.ಬಿ. ರಾಜಾರಾಮ್ ಮಾತನಾಡಿ, ಈ ಶಿಬಿರ ವಾಯುಸೇನೆಗೆ ಮಾತ್ರ ಸೀಮಿತವಾಗಿಲ್ಲ. ಭೂಸೇನೆ, ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಯೋಧರ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸಲಿದೆ ಎಂದು ತಿಳಿಸಿದರು.
ಮಾಜಿ ಸೈನಿಕರ ಸೇವಾ ದಾಖಲಾತಿಗಳಲ್ಲಿ ನ್ಯೂನತೆ ಇದ್ದರೆ ಸರಿಪಡಿಸಲಾಗುವುದು. ಪಿಂಚಣಿ ಇನ್ನಿತರ ದಾಖಲಾತಿಗಳಲ್ಲಿ ತಿದ್ದುಪಡಿಯ ಅಗತ್ಯವಿದ್ದರೆ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಸೌಲಭ್ಯಗಳ ಅರಿವಿನ ಕೊರತೆ

ಜಿಲ್ಲೆಯಲ್ಲಿ 570 ಮಾಜಿ ಸೈನಿಕರು ನೋಂದಣಿಯಾಗಿದ್ದಾರೆ. ನೋಂದಣಿ ಆಗದಿರುವ ಅನೇಕರಿದ್ದಾರೆ. ಅವರೆಲ್ಲರಿಗೂ ಈ ಶಿಬಿರದಿಂದ ಅನುಕೂಲವಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಎಸ್. ಮಹೇಂದ್ರಕರ್ ತಿಳಿಸಿದರು.
ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿ ದಾಖಲಾತಿಗಳ ನ್ಯೂನತೆ ಸರಿಪಡಿಸಿಕೊಳ್ಳಬೇಕೆಂದರೆ 6-7 ತಿಂಗಳು ಸಮಯ ಹಿಡಿಯುತ್ತದೆ. ಇಲ್ಲೇ ಶಿಬಿರ ಆಯೋಜಿಸಿರುವುದರಿಂದ ಸ್ಥಳೀಯ ಮಾಜಿ ಸೈನಿಕರಿಗೆ ಪ್ರಯೋಜನವಾಗುತ್ತದೆ. ಬಹುತೇಕ ಕೆಲಸಗಳನ್ನು ಇಲ್ಲಿಯೇ ಮಾಡಿಕೊಡುತ್ತಾರೆ. ಇದೊಂದು ಉಪಯುಕ್ತ ಕಾರ್ಯಕ್ರಮವಾಗಿದೆ ಎಂದರು.
ಮಾಜಿ ಸೈನಿಕರಿಗೆ ಸರ್ಕಾರದಿಂದ ಸೌಲಭ್ಯಗಳು ಸಾಕಷ್ಟಿವೆ. ಆರೋಗ್ಯ ಯೋಜನೆಯಡಿ ಚಿಕಿತ್ಸಾ ಸೌಲಭ್ಯ, ಔಷಧಗಳು ಉಚಿತವಾಗಿ ದೊರೆಯುತ್ತವೆ. ಇಂಥ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ. ಸೌಲಭ್ಯ ಹೇಗೆ ಪಡೆಯಬೇಕೆಂಬ ವಿಧಾನ ಗೊತ್ತಿರುವುದಿಲ್ಲ ಎಂದರು."

ಪ್ರಸ್ತುತ ಎಲ್ಲವೂ ಆನ್‌ಲೈನ್ ವ್ಯವಸ್ಥೆಯಾಗಿರುವುದರಿಂದ 1970 ಹಾಗೂ 1980ರ ದಶಕದಲ್ಲಿ ಸೇವೆಯಲ್ಲಿದ್ದ ಹಿರಿಯರಿಗೆ ಕೆಲ ಸಮಸ್ಯೆಗಳು ಎದುರಾಗುತ್ತಿವೆ. ಒಂದು ವೇಳೆ ಯಾರಾದರೂ ಶಿಬಿರಕ್ಕೆ ಬರಲು ಸಾಧ್ಯವಾಗದಿದ್ದರೆ, ಬೆಂಗಳೂರಿನಲ್ಲಿರುವ ಕಚೇರಿಗೆ ಯಾವುದೇ ಸಮಯದಲ್ಲಿ ಭೇಟಿ ನೀಡಿ ನೆರವು ಪಡೆಯಬಹುದು. ಸೇನೆಗೆ ಸೇರಿದಾಗ 19-20 ವರ್ಷದ ಯುವಕರಿದ್ದು, ಹೆಸರು ದಾಖಲಿಸುವಾಗ ಉಂಟಾದ ವ್ಯತ್ಯಾಸದಿಂದಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಪಿಪಿಒ ಪ್ರತಿಗಳಲ್ಲಿ ಹೆಸರುಗಳು ಭಿನ್ನವಾಗಿವೆ. ಇದರಿಂದಾಗಿ ಬ್ಯಾಂಕ್ ವ್ಯವಹಾರ ಹಾಗೂ ಕುಟುಂಬಸ್ಥರ ಹೆಸರು ಸೇರ್ಪಡೆಯಲ್ಲಿ ತೊಂದರೆಯಾಗುತ್ತಿತ್ತು. ಈ ಶಿಬಿರದಲ್ಲಿ ಇಂತಹ ಸಮಸ್ಯೆಗಳನ್ನು ಸ್ಥಳದಲ್ಲಿಯೇ ನಿವಾರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net