ರೈತನ ಕೈ ಹಿಡಿದ ಸಿಹಿಕುಂಬಳ Sihikumbala

ಮಾಯಕೊಂಡ ಹೋಬಳಿಯ ಎಚ್. ಬಸವಾಪುರ ಗ್ರಾಮದ ಪ್ರಗತಿಪರ ಕೃಷಿಕ ಬಿ.ಕೆ. ಕರಿಬಸಪ್ಪ ಮೂರುವರೆ ಎಕರೆ ಜಮೀನಿನಲ್ಲಿ ಹಾಕಿರುವ ಸಿಹಿ ಕುಂಬಳ.Sihikumbala
ಮಾಯಕೊಂಡ ಹೋಬಳಿಯ ಎಚ್. ಬಸವಾಪುರ ಗ್ರಾಮದ ಪ್ರಗತಿಪರ ಕೃಷಿಕ ಬಿ.ಕೆ. ಕರಿಬಸಪ್ಪ ಮೂರುವರೆ ಎಕರೆ ಜಮೀನಿನಲ್ಲಿ ಹಾಕಿರುವ ಸಿಹಿ ಕುಂಬಳ.Sihikumbala
Published on

ಪ್ರಮುಖ ಮುಖ್ಯಾಂಶಗಳು

  • ಬಂಪರ್ ಆದಾಯದ ನಿರೀಕ್ಷೆ
  • ಮೂರೂವರೆ ಎಕರೆಯಲ್ಲಿ ಸಮೃದ್ಧ ಬೆಳೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಸಾಂಪ್ರದಾಯಿಕ ಮೆಕ್ಕೆಜೋಳ ಬೆಳೆಗೆ ಪರ್ಯಾಯವಾಗಿ ಸಿಹಿ ಕುಂಬಳ ಬೆಳೆಯುವ ಮೂಲಕ ಮಾಯಕೊಂಡ ಹೋಬಳಿಯ ಎಚ್. ಬಸವಾಪುರ ಗ್ರಾಮದ ಪ್ರಗತಿಪರ ಕೃಷಿಕ ಬಿ.ಕೆ. ಕರಿಬಸಪ್ಪ ಅವರು ಈ ಬಾರಿ ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹೋಬಳಿಯ ಹಲವು ರೈತರು ಸಿಹಿ ಕುಂಬಳ, ಸೋಯಾಬೀನ್ ಹಾಗೂ ತರಕಾರಿ ಬೆಳೆಗಳತ್ತ ಒಳವು ತೋರಿದ್ದು, ಕೃಷಿ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.
ಕರಿಬಸಪ್ಪ ಅವರು ಮೂರು ವರ್ಷಗಳಿಂದ ಮಳೆಗಾಲದ ಬೆಳೆಯಾಗಿ ಸತತವಾಗಿ ಸಿಹಿ ಕುಂಬಳ ಬೆಳೆಯುತ್ತಿದ್ದು, ಕೈತುಂಬ ಆದಾಯ ಗಳಿಸುತ್ತಿದ್ದಾರೆ. ಈ ಹಿಂದೆ ಇವರು ಟೊಮ್ಯಾಟೊ, ಕಲ್ಲಂಗಡಿ, ಎಲೆಕೋಸು, ಸಾಂಬಾರ ಸೌತೆ ಹಾಗೂ ಮೆಣಸಿನಕಾಯಿ ಸೇರಿ ಹಲವು ಬಗೆಯ ತರಕಾರಿ ಬೆಳೆದಿದ್ದರು.
ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಮೇ ತಿಂಗಳ 2ನೇ ವಾರದಲ್ಲಿ ಸಿಹಿ ಕುಂಬಳ ಬಿತ್ತನೆ ಮಾಡಿದ್ದರು. ಬಳ್ಳಿಗಳು ಹುಲಸಾಗಿ ಬೆಳೆದಿವೆ. ಇನ್ನು ಎರಡು ತಿಂಗಳಲ್ಲಿ ಕಟಾವಿಗೆ ಬರಲಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಒಳ್ಳೆಯ ಲಾಭವಾಗಲಿದೆ.
ಸುಮಾರು 14 ಸಾವಿರ ರೂ. ವೆಚ್ಚದಲ್ಲಿ ಬೀಜ ಖರೀದಿಸಿ, ಸಾಲಿಂದ ಸಾಲಿಗೆ 6 ಅಡಿ ಹಾಗೂ ಬೀಜದಿಂದ ಬೀಜಕ್ಕೆ 2.5 ಅಡಿ ಅಂತರದಲ್ಲಿ ಬಿತ್ತನೆ ಮಾಡಲಾಗಿದೆ. ಕೀಟನಾಶಕ, ರಸಗೊಬ್ಬರ ಮತ್ತು ಕಳೆ ನಿಯಂತ್ರಣ ಸೇರಿ ಒಟ್ಟು 1 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಬರುತ್ತದೆ. ಸರಾಸರಿ 20 ಟನ್‌ಗೂ ಹೆಚ್ಚು ಇಳುವರಿ ಬರುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 10 ರಿಂದ 15 ರೂ. ಧಾರಣೆ ಸಿಕ್ಕರೆ 2 ರಿಂದ 3 ಲಕ್ಷ ರೂ. ಆದಾಯ ಕೈಸೇರಲಿದೆ.

ಮಹಾನಗರಗಳ ಮಾರುಕಟ್ಟೆಗೆ ರವಾನೆ

ಬೆಂಗಳೂರು, ಮಂಗಳೂರು, ಮುಂಬೈ ಮತ್ತು ಕೋಲ್ಕತ್ತಾ ನಗರಗಳ ಮಾರುಕಟ್ಟೆಗಳಲ್ಲಿ ಸಿಹಿ ಕುಂಬಳ ಹಾಗೂ ಬೂದುಗುಂಬಳಕ್ಕೆ ಭಾರಿ ಬೇಡಿಕೆಯಿದೆ. ಅಲ್ಲಿನ ವರ್ತಕರು ನೇರವಾಗಿ ಜಮೀನಿಗೆ ಬಂದು, ಕಟಾವಿನ ಬಳಿಕ ಲಾರಿಗಳ ಮೂಲಕ ಲೋಡ್ ಮಾಡಿಕೊಂಡು ಹೋಗುತ್ತಾರೆ. ಹೀಗಾಗಿ ಮಾರುಕಟ್ಟೆ ಅನ್ವೇಷಣೆಯ ತೊಂದರೆ ಇರುವುದಿಲ್ಲ.
"

ಮಳೆ ಆಧಾರಿತ ಕೃಷಿ ಮಾಡುವ ರೈತರು ಒಂದೇ ಬೆಳೆಯ ಮೇಲೆ ಅವಲಂಬಿತ ರಾಗದೆ, ಆದಾಯ ತರುವ ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಕುಂಬಳ, ಹಣ್ಣು ಹಾಗೂ ತರಕಾರಿಗಳನ್ನು ಬೆಳೆಯುವುದರಿಂದ ಉತ್ತಮ ಆದಾಯ ಬರುವುದಷ್ಟೇ ಅಲ್ಲದೆ, ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ.

— ಡಿ.ಎಂ. ಶ್ರೀಧರಮೂರ್ತಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ.

ಹಣ್ಣು ಮತ್ತು ತರಕಾರಿ ಬೆಳೆಗಳು ರೈತ ಕುಟುಂಬಗಳ ಆರ್ಥಿಕತೆಯನ್ನು ಕಾಯುವ ಸಣ್ಣ ಝರಿಗಳಿದ್ದಂತೆ. ರೈತರು ಕೇವಲ ಮೆಕ್ಕೆಜೋಳ ಒಂದೇ ಬೆಳೆಗೆ ಅಂಟಿಕೊಳ್ಳದೆ ಕುಂಬಳ, ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ಹೀರೇಕಾಯಿ, ಬೆಂಡೆಕಾಯಿಯಂತಹ ಉಪಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಸಬಲರಾಗಬಹುದು.

— ಬಿ.ಕೆ. ಕರಿಬಸಪ್ಪ, ಪ್ರಗತಿಪರ ಕೃಷಿಕ, ಎಚ್. ಬಸವಾಪುರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net