ಪ್ರಮಾಣಪತ್ರ ದಕ್ಕಲು ಬೇಕು ಪ್ರಬಲ ಪ್ರಯತ್ನ

ದಾವಣಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರೈಸ್ತರ ಏಕತಾ ಕೂಟ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಸ್ಟ್ಯಾನಿ ಪಿಂಟೋ, ವಿಕ್ರಮ್ ಆಂಟೋನಿ, ಬಿಷಪ್ ಉತ್ತಮ್‌ಕುಮಾರ್, ಪ್ರೊ. ಪ್ರಭು, ಅಲೆಗ್ಸಾಂಡರ್ ಇತರರಿದ್ದರು.
ದಾವಣಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರೈಸ್ತರ ಏಕತಾ ಕೂಟ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಸ್ಟ್ಯಾನಿ ಪಿಂಟೋ, ವಿಕ್ರಮ್ ಆಂಟೋನಿ, ಬಿಷಪ್ ಉತ್ತಮ್‌ಕುಮಾರ್, ಪ್ರೊ. ಪ್ರಭು, ಅಲೆಗ್ಸಾಂಡರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮುದಾಯದಲ್ಲಿ ಸಂಘಟನಾ ಶಕ್ತಿ ವೃದ್ಧಿಸಲಿ
  • ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಆಶಯ
  • ದಾವಣಗೆರೆಯಲ್ಲಿ ಕ್ರೈಸ್ತರ ಏಕತಾ ಕೂಟ ಕಾರ್ಯಕ್ರಮ
ದಾವಣಗೆರೆ: ಕ್ರೈಸ್ತ ಪ್ರಮಾಣಪತ್ರ ಇಲ್ಲದ್ದರಿಂದಾಗಿ ಅನೇಕರು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಉನ್ನತ ಹಂತದ ಚರ್ಚೆ, ಪ್ರಯತ್ನಗಳು ನಡೆಯಬೇಕಿದೆ ಎಂದು ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಕ್ರೈಸ್ತ ಸಂಘಟನೆಯ ಜಿಲ್ಲಾ ಘಟಕ ಹಾಗೂ ಜಿಲ್ಲಾ ಕ್ರಿಶ್ಚಿಯನ್ ಪರಿಷತ್ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ, ಕ್ರೈಸ್ತರ ಏಕತಾ ಕೂಟದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ಪ್ರಥಮ ಬಾರಿಗೆ ಜಾರಿಗೊಳಿಸಿದ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದಲ್ಲಿ ಅನೇಕ ಸೌಲಭ್ಯಗಳಿವೆ. ಸಮುದಾಯದವರು ಇದರ ಪ್ರಯೋಜನ ಪಡೆಯಲು ಮುಂದಾಗುತ್ತಿಲ್ಲ. ಅರ್ಹ ಫಲಾನುಭವಿಗಳು ಇನ್ನಾದರೂ ಲಾಭ ಪಡೆಯಬೇಕು ಎಂದು ಹೇಳಿದರು.
ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ವೈದ್ಯಕೀಯ, ಬಿ.ಎಸ್ಸಿ ನರ್ಸಿಂಗ್, ಡಿಪ್ಲೋಮ ನರ್ಸಿಂಗ್ ಸೇರಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 50 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಸೌಲಭ್ಯವಿದೆ. ಶ್ರಮಶಕ್ತಿ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಸಣ್ಣ ಉದ್ಯೋಗ, ಬ್ಯೂಟಿಪಾರ್ಲರ್ ಮೊದಲಾದ ಉದ್ಯೋಗ ನಡೆಸಿದಲ್ಲಿ ಸಾಲ, ಸಬ್ಸಿಡಿ ಸವಲತ್ತು ಇವೆ. ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಮಡಿಕೇರಿ ಸೇರಿ ವಿವಿಧೆಡೆ ಚರ್ಚ್, ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಗಳು ಮತ್ತು ಎಫ್‌ಐಆರ್ ದಾಖಲಿಸುವಲ್ಲಿ ಕೆಲ ಕಾನೂನು ತೊಡಕು ಎದುರಾಗುತ್ತಿವೆ. ಹೀಗಾಗಿ ಸಮುದಾಯದಲ್ಲಿ ಸಂಘಟನಾ ಶಕ್ತಿ ಹಾಗೂ ಪರಸ್ಪರ ಬೆಂಬಲದ ಅಗತ್ಯವಿದೆ ಎಂದು ಹೇಳಿದರು.
ಕ್ರೈಸ್ತ ಸಮುದಾಯದ ಒಳಪಂಗಡಗಳಲ್ಲಿ ಭಿನ್ನತೆ, ಅಂತರವಿದ್ದರೂ ಅದನ್ನೆಲ್ಲ ಮರೆತು ಎಲ್ಲರೂ ಒಂದಾಗಿ ಪ್ರೀತಿ ಮತ್ತು ಸಹೋದರತ್ವದಿಂದ ಜೀವಿಸಬೇಕಿದೆ. ಸಮಾಜ ಅಥವಾ ಸರ್ಕಾರದಲ್ಲಿ ನಾವಿಂದು ಯಾವ ಅಧಿಕಾರ, ಸ್ಥಾನದಲ್ಲಿದ್ದೇವೆ ಎಂಬುದಕ್ಕಿಂತಲೂ ಸಮಾಜಕ್ಕೆ ಯಾವ ಕೊಡುಗೆಗಳನ್ನು ನೀಡಿದ್ದೇವೆ ಎಂಬುದನ್ನು ಗ್ರಹಿಸಬೇಕು ಎಂದು ಕಿವಿಮಾತು ಹೇಳಿದರು.
ಬಾಯಿಮಾತಿನಲ್ಲಿ ಹೇಳುವ ಪ್ರೀತಿ ನಿಜವಾದುದಲ್ಲ. ದೇವರು ಸದಾ ಮನುಷ್ಯನ ಹೊರ ನೋಟ ನೋಡದೆ, ಆತನ ಹೃದಯವನ್ನು ನೋಡುತ್ತಾನೆ. ಚರ್ಚ್‌ಗಳ ಒಳಗಡೆ ಭೇದ ಮರೆತು ಪ್ರೀತಿ, ಕ್ಷಮೆ ಮತ್ತು ತ್ಯಾಗದ ಮೂಲಕ ಕ್ರಿಸ್ತನ ನೈಜ ಸಾಕ್ಷಿಗಳಾಗಿ ನಾವು ಬದುಕಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೋ, ವಿಕ್ರಮ್ ಆಂಟೋನಿ, ಬಿಷಪ್ ಉತ್ತಮ್‌ಕುಮಾರ್, ಪ್ರೊ. ಪ್ರಭು, ಅಲೆಗ್ಸಾಂಡರ್, ಸಾಲೋಮಿ ಶಿರಿನ್ ಹಾಜರಿದ್ದರು. ವಿವಿಧ ಜಿಲ್ಲೆಗಳಿಂದ ಕ್ರೈಸ್ತ ಮುಖಂಡರು ಭಾಗವಹಿಸಿದ್ದರು.

ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಧರ್ಮಗಳ ಜನರು ಪರಸ್ಪರ ವಿಶ್ವಾಸ, ಗೌರವ ಮತ್ತು ಸಹಕಾರದ ಮನೋಭಾವದಡಿ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಿದೆ. ಶಾಂತಿ, ಸಹಬಾಳ್ವೆ, ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಏಕತಾ ಕಾರ್ಯಕ್ರಮಗಳು ಮುಖ್ಯ ಪಾತ್ರ ನಿಭಾಯಿಸಲಿವೆ.

— ಸಮರ್ಥ್ ಶಾಮನೂರು, ದಾವಣಗೆರೆ ದಕ್ಷಿಣ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net