ದಾವಣಗೆರೆಯ ಶಿವಯೋಗಿ ಮಂದಿರ ಆವರಣದಲ್ಲಿ ಸೋಮವಾರ ಶ್ರೀ ಜಗದ್ಗುರು ಜಯದೇವ ಸಾಂಸ್ಕೃತಿಕ ಭವನವನ್ನು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಲೋಕಾರ್ಪಣೆಗೊಳಿಸಿದರು. ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಅಂದನೂರು ಮುಪ್ಪಣ್ಣ, ಎಂ. ಜಯಕುಮಾರ್, ಎಸ್. ಓಂಕಾರಪ್ಪ ಇದ್ದರು.
ದಾವಣಗೆರೆ :ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರು ಸಾಮಾಜಿಕ ಪರಿವರ್ತನೆಯ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದರು ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಶಿವಯೋಗಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಎಸ್.ಜೆ.ಎಂ. ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಶ್ರೀ ಜಗದ್ಗುರು ಜಯದೇವ ಸಾಂಸ್ಕೃತಿಕ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಆಗಿನ ಕಾಲದಲ್ಲಿ ಅನೇಕ ಶಿವಶರಣರು ಅಲ್ಲಲ್ಲಿ ಏಕವ್ಯಕ್ತಿ ಸಾಧನೆಯಲ್ಲಿ ತೊಡಗಿದ್ದರು. ಅಂಥವರನ್ನು ಬಸವಣ್ಣ ಒಂದು ವೇದಿಕೆಗೆ ತಂದಿದ್ದರಿಂದ ಬಹುವ್ಯಕ್ತಿ ಸಾಧನೆಯಾಯಿತು ಎಂದು ವಿಶ್ಲೇಷಿಸಿದರು.
ಬಸವಣ್ಣ ಅವರು ಮಹಾಮನೆ, ಅನುಭವ ಮಂಟಪದ ಕಲ್ಪನೆಯ ಮೂಲಕ ಕಲ್ಯಾಣ ರಾಜ್ಯವನ್ನು ಕಟ್ಟಿದರು. ಪ್ರತಿ ವ್ಯಕ್ತಿಯ ಹಾಗೂ ಸಾಮಾಜಿಕ ಬದುಕಿನಲ್ಲಿ ಪರಿವರ್ತನೆಗೆ ಕಾರಣರಾದರು ಎಂದು ತಿಳಿಸಿದರು.
ಸಂಪ್ರದಾಯ ಬದ್ಧವಾದ ಸಮಾಜದಲ್ಲಿ ಬದಲಾವಣೆ ತರುವುದು ಸುಲಭವಲ್ಲ. ಅದು ಸಂಘರ್ಷಕ್ಕೆ ಕಾರಣವಾಗಿ ಕೊನೆಗೆ ಸಾಮಾಜಿಕ ಉತ್ಕರ್ಷ, ಉತ್ಥಾನವಾಗುತ್ತದೆ. ಬಸವಣ್ಣ ಅವರ ಕಾಲದಲ್ಲಿ ಧಾರ್ಮಿಕ, ವೈಚಾರಿಕ ಸಂಘರ್ಷ ನಡೆಯಿತು. ಆದರ್ಶದ ಮದುವೆಗಳು ನಡೆದವು. ಈ ಬೆಳವಣಿಗೆ ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗಲಿಲ್ಲ ಎಂದರು.
ಜಯದೇವ ಸಾಂಸ್ಕೃತಿಕ ಭವನವನ್ನು 4 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರು ಶುಭ ಸಮಾರಂಭಗಳಿಗೆ ಇದನ್ನು ಬಳಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೈಗೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.
ಶಿವಯೋಗಾಶ್ರಮ ಟ್ರಸ್ಟ್ನ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ಸಹ ಕಾರ್ಯದರ್ಶಿ ಎಸ್. ಓಂಕಾರಪ್ಪ, ಎಂ. ಜಯಕುಮಾರ್, ಕಣಕುಪ್ಪಿ ಮುರಿಗೇಶಪ್ಪ, ಬೆಳ್ಳೂಡಿ ಮಂಜುನಾಥ್ ಇದ್ದರು. ಶಿವಕುಮಾರ್ ನಿರೂಪಿಸಿದರು.
ಜಗತ್ತಿನ ಕತ್ತಲೆ ಕಳೆದರು
ಜಗಜ್ಯೋತಿ ಬಸವೇಶ್ವರರು ವೈಚಾರಿಕ ಕ್ರಾಂತಿಯ ಮೂಲಕ ಜಗತ್ತಿನ ಕತ್ತಲೆಯನ್ನು ದೂರ ಮಾಡಿದರು ಎಂದು ವಿರಕ್ತ ಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಮ್ಮೊಳಗಿರುವ ಜಾತೀಯತೆ, ಅಸಮಾನತೆ, ಮೇಲು-ಕೀಳೆಂಬ ಭಾವನೆಯನ್ನು ಬದಲಿಸಲು ಪ್ರಯತ್ನಿಸಿದರು. ಆದರೆ ಇಂದಿನ ಜೆನ್-ಜಿ ಕಾಲದಲ್ಲೂ ಲಿಂಗ ತಾರತಮ್ಯ ಸಂಪೂರ್ಣ ದೂರವಾಗಿಲ್ಲ. ಮರ್ಯಾದಾ ಹತ್ಯೆಗಳು, ಕಲಹಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣ ಅವರ ವಿಚಾರಗಳು ವಿದೇಶೀಯರಿಗೆ ಅರ್ಥವಾಗುತ್ತಿವೆ, ಆದರೆ ನಮ್ಮ ದೇಶದವರಿಗೇ ಬಸವಣ್ಣ ಸರಿಯಾಗಿ ಅರ್ಥವಾಗಿಲ್ಲ. ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ. ಬಸವ ಜಯಂತಿ ಆಚರಣೆಯನ್ನು ಮೊಟ್ಟ ಮೊದಲು ಆರಂಭ ಮಾಡಿದ್ದು ದಾವಣಗೆರೆಯ ವಿರಕ್ತ ಮಠದಿಂದ ಎಂದು ತಿಳಿಸಿದರು.
ಶ್ರೀ ಜಯದೇವ ಜಗದ್ಗುರುಗಳು ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿ, ಬಸವಣ್ಣ ಅವರ ದಾಸೋಹ ತತ್ವವನ್ನು ಅನುಷ್ಠಾನಕ್ಕೆ ತಂದರು ಎಂದು ಸ್ಮರಿಸಿದರು.