ದಾವಣಗೆರೆ :ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಆದ್ಯತೆ ನೀಡುವುದಾಗಿ ದಾವಣಗೆರೆ ವಿವಿಯ ನೂತನ ಕುಲಪತಿ ಡಾ. ಬಿ.ಇ. ರಂಗಸ್ವಾಮಿ ಹೇಳಿದರು.
ಗುರುವಾರ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ, ವಿಶ್ವವಿದ್ಯಾಲಯವನ್ನು ವಿದ್ಯಾರ್ಥಿ ಕೇಂದ್ರಿತವಾಗಿ ಬೆಳೆಸುವ ಉದ್ದೇಶವಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸ್ಥಳೀಯತೆಯಿಂದ ಜಾಗತಿಕ ಮಟ್ಟಕ್ಕೆ ವಿಶ್ವವಿದ್ಯಾಲಯವನ್ನು ಕಟ್ಟುವ ಪ್ರಯತ್ನ ಮಾಡಲಾಗುವುದು. ಆಡಿ ಮಾಡುವುದಕ್ಕಿಂತ ಮಾಡಿ ತೋರಿಸುವುದು ಮುಖ್ಯವಾಗಿದೆ ಎಂದರು.
ದಾವಣಗೆರೆ ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ಸದೃಢವಾಗಿದೆ. ಅದಕ್ಕೆ ಮೌಲಿಕ ಕಾಯಕಲ್ಪ ನೀಡಬೇಕಾಗಿದೆ. ಅದಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಜತೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಜತೆಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉನ್ನತ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವುದಾಗಿ ಹೇಳಿದರು.
ವಿಶ್ವವಿದ್ಯಾಲಯದ ಅಧ್ಯಾಪಕರು, ಸ್ಥಳೀಯ ಮುಖಂಡರು, ಉದ್ಯಮಿಗಳು, ತಜ್ಞರು, ತಂತ್ರಜ್ಞಾನಿಗಳ ಸಹಕಾರದೊಂದಿಗೆ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಕಾರ್ಯಗಳ ಜತೆಗೆ ಸಂಶೋಧನಾ ಯೋಜನೆಗಳ ಅನುಷ್ಠಾನಕ್ಕೆ ಗಮನ ಹರಿಸಲಾಗುವುದು. ಇತರ ವಿಶ್ವವಿದ್ಯಾಲಯಗಳ ಜತೆಗೆ ಒಡಂಬಡಿಕೆ ಮಾಡಿಕೊಂಡು ಸಂಶೋಧನಾ ಕಾರ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಅದಕ್ಕೆ ಪೂರಕವಾದ ಸಂಪನ್ಮೂಲವನ್ನು ಕ್ರೋಡೀಕರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಭಾರ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ. ಕೆ. ವೆಂಕಟೇಶ್, ಡಾ.ರಂಗಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಎಸ್.ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಕೆ. ರಮೇಶ, ಹಣಕಾಸು ಅಧಿಕಾರಿ ಪ್ರೊ.ಆರ್. ಶಶಿಧರ ಇದ್ದರು.
ಮಾದರಿ ವಿವಿ ಕನಸು
ವಿಶ್ವವಿದ್ಯಾಲಯವನ್ನು ಮಾದರಿಯಾಗಿಸುವ ಕನಸು ಹೊಂದಿದ್ದು ಅದಕ್ಕಾಗಿ ಸಹದ್ಯೋಗಿಗಳ ಜತೆಗೆ ಹಗಲು-ರಾತ್ರಿ ಕೆಲಸ ಮಾಡಲು ಸಿದ್ಧ ಎಂದು ಡಾ. ರಂಗಸ್ವಾಮಿ ತಿಳಿಸಿದರು.
ವಿವಿ ಬೆಳವಣಿಗೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆ ರೂಪಿಸಬೇಕಿದೆ. ವಿದ್ಯಾರ್ಥಿಗಳಿಗೆ ನೈಜ ಶಿಕ್ಷಣ ಸಿಗಬೇಕು. ಎಲ್ಲ ಸ್ತರದವರಿಗೂ ವಿದ್ಯೆ ತಲುಪಬೇಕು. ಈ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.
ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವುದಕ್ಕೆ ಹೋಲಿಸಿದರೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಇಲ್ಲಿ ಬಡತನದ ಹಿನ್ನೆಲೆಯಿಂದ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅಂಥವರಿಗೆ ಶಿಕ್ಷಣ ಒದಗಿಸುವುದು ಸಾರ್ಥಕ ಕೆಲಸ ಎಂದರು.