ಆನಗೋಡು ಹೋಬಳಿ ಹುಣಿಸೆಕಟ್ಟೆ ಗ್ರಾಮದಲ್ಲಿ ಬುಧವಾರ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ದೀಪ ನಮನ ಕಾರ್ಯಕ್ರಮದಲ್ಲಿ ಸಿ. ಅನಿಲ್ ಕುಮಾರ್ ನಾಯ್ಕ, ಎಂ. ಬಸವರಾಜ್ ನಾಯ್ಕ, ಬಿ.ಜಿ. ಸಚಿನ್, ರಾಕೇಶ್ ಇತರರಿದ್ದರು.Deepanamana
ಮಾಯಕೊಂಡ: ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಸರಳ ಸಜ್ಜನಿಕೆಯ ರಾಜಕಾರಣಿ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಅನಿಲ್ ಕುಮಾರ್ ನಾಯ್ಕ ಹೇಳಿದರು.
ಆನಗೋಡು ಹೋಬಳಿಯ ಹುಣಿಸೆಕಟ್ಟೆ ಗ್ರಾಮದಲ್ಲಿ ಬಿಜೆಪಿ ಮುಖಂಡರು ಹಾಗೂ ಜಿಲ್ಲಾ ಬಿಜೆಪಿ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಗ್ರಾಮದ ಆಯೋಜಿಸಿದ್ದ ದೀಪ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಚಿಂತನ ಶೈಲಿ ಬದಲಾಯಿಸಿದ ವಾಜಪೇಯಿ ಅವರು 10 ಬಾರಿ ಲೋಕಸಭೆ, 2 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೇ 4 ರಾಜ್ಯಗಳ 6 ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಆಯ್ಕೆಯಾದ ಭಾರತದ ಏಕೈಕ ಸಂಸದ ಎಂದರು.
ಇವರು ದೇಶದ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ರೈತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಲೋಕೋಪಯೋಗಿ ನೀರಾವರಿ ಸೇರಿ ಪ್ರತಿ ಕ್ಷೇತ್ರಗಳಿಗೂ ತಮ್ಮದೇ ಕೊಡುಗೆ ನೀಡಿದ್ದರು ಎಂದು ಶ್ಲಾಘಿಸಿದರು.
ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ ಮಾತನಾಡಿ, ವಾಜಪೇಯಿ ಅವರು ತಾಳ್ಮೆಯ ಗುಣ, ವಿನಯ ಮತ್ತು ಸರಳ ಸಜ್ಜನಿಕೆಗೆ ಹೆಸರಾಗಿದ್ದರು. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಡೆ-ನುಡಿ ನಮ್ಮೆಲ್ಲರ ಬದುಕಿಗೆ ದಾರಿದೀಪ ಎಂದರು.
ಮಾಯಕೊಂಡ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ.ಜಿ. ಸಚಿನ್ ಮಾತನಾಡಿದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಕೇಶ್, ಹುಣಸೆಕಟ್ಟೆ ಲಿಂಗಾನಂದ ಸ್ವಾಮಿ, ಬಿಜೆಪಿ ಮುಖಂಡರು, ಗ್ರಾಮಸ್ಥರು ಇದ್ದರು.