ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ಮಂಗಳವಾರ ಕಂಡುಬಂದ ಭಕ್ತಸಂದಣಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಮ್ಮನಿಗೆ ಸಿಹಿ ಭಕ್ಷೃಗಳ ಎಡೆ ಅರ್ಪಿಸಿದ ಭಕ್ತರು
ದೀಡು ನಮಸ್ಕಾರ, ಉರುಳುಸೇವೆ ಸಮರ್ಪಣೆ
ಹರಕೆಯ ಕುರಿಗಳ ಕಡೇ ದೇಗುಲ ಪ್ರದಕ್ಷಿಣೆ!
ದಾವಣಗೆರೆ:ನಗರದೇವತೆ ಶ್ರೀ ದುರ್ಗಾಂಬಿಕಾ ಜಾತ್ರೆ ಹಿನ್ನೆಲೆಯಲ್ಲಿ ಅಮ್ಮನ ಸನ್ನಿಧಿಗೆ ವಿವಿಧೆಡೆಗಳಿಂದ ಜನಸಾಗರವೇ ಹರಿದುಬರುತ್ತಿದೆ. ಸೋಮವಾರ ತಡರಾತ್ರಿಯಿಂದಲೇ ಭಕ್ತರ ಸಂದಣಿ ಹೆಚ್ಚಿರುವ ದೇವಸ್ಥಾನ ಸಮೂಹಸನ್ನಿಯಾಗಿದೆ.
ಚರಗ ಚೆಲ್ಲುವ ಮುನ್ನಾ ದಿನವಾದ ಮಂಗಳವಾರವೂ ಕೂಡ ಎರಡು ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತ ಜನರು ದೇವಿಯ ದರ್ಶನ ಪಡೆದರು. ಕೆಲವರು ದೇವಸ್ಥಾನದ ಪಕ್ಕದ ರಾಜಮಾರ್ಗದಲ್ಲೇ ಒಳ ಹೊಕ್ಕರು.
ನಸುಗತ್ತಲಿಂದಲೇ ದೇಗುಲದ ಸುತ್ತಲಿನ ಮರಳು ಹಾಸಿನ ಮೇಲೆ ದೀಡು ನಮಸ್ಕಾರ, ಉರುಳುಸೇವೆಯ ಪರಾಕಾಷ್ಠೆ ನಡೆಯಿತು. ಯುವಕರು, ಯುವತಿಯರು, ವೃದ್ಧ್ದರಾದಿಯಾಗಿ ಹರಕೆ ಸಲ್ಲಿಸಿದರು. ಚಿಣ್ಣರು ಬೇವಿನುಡುಗೆ ಧರಿಸಿದ್ದರು.
ಉರುಳುಸೇವಕರಿಗೆ ಕುಟುಂಬ ಸದಸ್ಯರು ಕೊಡಪಾನದ ಮೂಲಕ ನೀರು ಹಾಯಿಸಿದರು. ತಮಟೆ ವಾದನದ ಸದ್ದಿನ ಜತೆಗೆ ಆಗಾಗ್ಗೆ ‘ದುಗ್ಗಮ್ಮ ನಿನ್ನಾಲ್ಕು ಉಧೋ ಉಧೋ..’ ಘೋಷವಾಕ್ಯಗಳು ಮೊಳಗಿದವು. ದೇವಿ ಕುರಿತಾದ ಧ್ವನಿಸುರುಳಿ ಹಾಡು ಕೂಡ ಹರಿದಾಡಿತು.
ದೀಡು ನಮಸ್ಕಾರ ಸಲ್ಲಿಸಿದ ಭಕ್ತರ ಅನುಕೂಲಕ್ಕಾಗಿ ದೇಗುಲ ಬಳಿ ಷವರ್‌ಬಾತ್, ತಾತ್ಕಾಲಿಕ ನಳಗಳು ಹಾಗೂ ನಿಗದಿತ ಸ್ಥಳದಲ್ಲಿರಿಸಿದ ಕೊಪ್ಪರಿಗೆಯಲ್ಲೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ತಾತ್ಕಾಲಿಕ ಶೆಡ್‌ಗಳಲ್ಲಿ ಮಹಿಳೆಯರು ಹೊಸ ಬಟ್ಟೆ ತೊಟ್ಟರು. ಮಡಿಯಾದ ಬಳಿಕ ದೇವಸ್ಥಾನ ಆವರಣದಲ್ಲೇ ಕೂರಿಸಿ ಕೆಲ ಸಾಮಗ್ರಿಗಳ ಗಂಟು ನೀಡಿ ಪೂಜೆ ಸಲ್ಲಿಸಲಾಯಿತು.
ಭಕ್ತರು ಬಿಟ್ಟ ಬಟ್ಟೆ ತೆಗೆದು ಹಾಕಲು ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ವ್ಯಾಪಾರ ಮಳಿಗೆಗಳಿಗೆ ತಾತ್ಕಾಲಿಕ ವಿದ್ಯುತ್ ಮೀಟರ್ ಅಳವಡಿಸುವ ಕಾರ್ಯ ನಡೆದಿತ್ತು.
ಮಂಗಳವಾರ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರ ಮನೆಗಳಲ್ಲಿ ಮಾಡಲಾಗಿದ್ದ ಸಿಹಿಭಕ್ಷೃಗಳನ್ನು ಬೀಗರು, ಸ್ನೇಹಿತರು ಸವಿದರು. ಹೋಳಿಗೆ ಹೂರಣಕ್ಕಾಗಿ ರುಬ್ಬುವ ಯಂತ್ರಗಳಿಗೆ ಬೇಡಿಕೆ ಕಂಡುಬಂದಿತು. ಹೋಳಿಗೆ, ಕರಿಗಡುಬು, ಪಾಯಸ ಇತ್ಯಾದಿ ದೇವಸ್ಥಾನಕ್ಕೆ ತಂದು ನೈವೇದ್ಯ ನೆರವೇರಿಸಲಾಯಿತು. ಸೀರೆ-ಕುಪ್ಪಸ, ಉಡಿಯಕ್ಕಿ ಸಹಿತ ಬಂದ ಹೆಂಗಳೆಯರು ಅಮ್ಮನಿಗೆ ಸಲ್ಲಿಸಿದರು. ಹರಕೆ ಹೆಸರಲ್ಲಿ ಬಲಿಯಾಗಲಿದ್ದ ದೈತ್ಯಗಾತ್ರದ ಕುರಿಗಳು ಕೂಡ ದೇಗುಲ ಬಳಿ ‘ಕೊನೆಯ ಸುತ್ತು’ ಹಾಕಿದವು.
ಬಿಸಿಲ ಝಳ ಹೆಚ್ಚಿದ್ದರಿಂದ ಭಕ್ತರಿಗಾಗಿ ಅಲ್ಲಲ್ಲಿ ದಾನಿಗಳಿಂದ ಪಾನಕ, ಮಜ್ಜಿಗೆ, ಕುಡಿವ ನೀರು, ಟೊಮ್ಯಾಟೋ ಬಾತ್, ಮೊಸರನ್ನ, ಬಿಸ್ಕತ್ತಿನ ಸೇವೆ ನಡೆಯಿತು. ಕನ್ಯಕಾ ಪರಮೇಶ್ವರಿ ದೇವಸ್ಥಾನದ ಭವನದಲ್ಲಿ ಪ್ರಗತಿ ಪಬ್ಲಿಕ್ ಟ್ರಸ್ಟ್‌ನಿಂದ ಮೊಸರನ್ನ ವ್ಯವಸ್ಥೆ ಮಾಡಲಾಗಿತ್ತು.
ದೇಗುಲದ ಮಹಾಮಂಟಪದ ಬಳಿ ಜನರು ಸೆಲ್ಫೀ ಮತ್ತು ಮೊಬೈಲ್ ಫೋಟೋ ತೆಗೆಸಿಕೊಳ್ಳುತ್ತಿದ್ದರೆ, ಬಳೆ, ಅಲಂಕಾರಿಕ ವಸ್ತು, ಮಕ್ಕಳ ಆಟಿಕೆ ಸಾಮಗ್ರಿಗಳ ಮಳಿಗೆಯತ್ತಲೂ ಮಹಿಳೆಯರು ಮುಗಿಬಿದ್ದರು.
ದೇವಿಯ ಭವ್ಯ ಮೆರವಣಿಗೆ
ಮಂಗಳವಾರ ರಾತ್ರಿ ಸಂಪ್ರದಾಯದಂತೆ ಸಂಜೆ ಸಾರೋಟಿನಲ್ಲಿ ನಗರದ ವಿವಿಧೆಡೆ ದುರ್ಗಾದೇವಿಯ ಭವ್ಯ ಮೆರವಣಿಗೆ ನಡೆಸಲಾಯಿತು. ಸಾರು ಹಾಕಿದ ದಿನದಿಂದ ಒಂದೊತ್ತಿನ ಉಪವಾಸ ಕೈಗೊಂಡಿದ್ದ ಗೌಡ್ರ ಮನೆತನ ಸೇರಿ ಹಲವರು ಉಪವಾಸಕ್ಕೆ ಅಂತ್ಯ ಹಾಡಿದರು. ತಡರಾತ್ರಿ ವೇಳೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗಿ ಭಕ್ತರ ದರ್ಶನಕ್ಕೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ.
ರಾತ್ರಿ ದೇವಸ್ಥಾನ ಸಮೀಪ ಚೌಕಮನೆಯಲ್ಲಿ ಅಕ್ಕಿ-ಜೋಳ ಬೇಯಿಸಿ ಚರಗಕ್ಕೆ ಸಿದ್ಧತೆ ನಡೆಸಲಾಗುತ್ತದೆ. ನಸುಕಿನಲ್ಲಿ ದೊಡ್ಡ ಬಲಿ (ಕೋಣನ ಧಾನ್ಯ ಮೂರ್ತಿ) ನಡೆಯಲಿದೆ. ಭಕ್ತರು ಮನೆಗಳ ಮುಂದಣ ಸಾಕಿದ ಕುರಿ ಕೋಳಿಗಳು ಹರಕೆಯ ಪಾಲಾಗಲಿವೆ.
ಬುಧವಾರ ಬೆಳಗ್ಗೆ ಚರಗ ಚೆಲ್ಲಿದ ಬಳಿಕ, ದುರ್ಗಾಂಬಿಕೆಯ ತವರು ದುಗ್ಗಾವತಿಯಿಂದ ತಂದ ಉಡಿದುಂಬಿಕೊಂಡ ದುಗ್ಗಮ್ಮ ಮುತ್ತೈದೆ ಭಾಗ್ಯ ಪಡೆದುಕೊಳ್ಳಲಿದ್ದಾಳೆ. ನಂತರವಷ್ಟೇ ದೇವಸ್ಥಾನ ಮರು ದರ್ಶನಕ್ಕೆ ತೆರೆದುಕೊಳ್ಳಲಿದೆ.
ಬಾಡೂಟಕ್ಕೆ ಭರ್ಜರಿ ಸಿದ್ಧತೆ
ಬುಧವಾರ ನಗರದಾದ್ಯಂತ ಬಾಡೂಟಕ್ಕೆ ಭರ್ಜರಿ ಸಿದ್ಧತೆ ನಡೆದಿವೆ. ಮನೆಯಂಗಳದಲ್ಲಿ ಶಾಮಿಯಾನ ಅಳವಡಿಸಲಾಗಿದ್ದು, ಮಸಾಲೆ ಸಾಮಗ್ರಿ ಖರೀದಿ ಜೋರಾಗಿದೆ. ತಿಂಗಳಿಡೀ ಸಾಕಿದ ಕುರಿ-ಮೇಕೆಗಳಿಗೆ ಮಾಲೀಕರು ಕೊನೆಯ ತುತ್ತುಣಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮಾರುಕಟ್ಟೆಯಲ್ಲಿ ನಾಟಿ ಕೋಳಿಗಳಿಗೂ ಬೇಡಿಕೆ ಹೆಚ್ಚಿತ್ತು. ಮಟನ್ ಸ್ಟಾಲ್‌ಗಳ ಬಳಿ ವಧಾಗಾರದ ಬಳಿ ಕಟ್ಟಿಹಾಕಿದ್ದ ಕುರಿಗಳು ನಾಳಿನ ಪರಿವಿಲ್ಲದೆ ಹುಲ್ಲು ಮೇಯುತ್ತಿದ್ದವು.
ಹೆಚ್ಚಿನ ಪೊಲೀಸ್ ಬಂದೋಬಸ್ತ್
ದುರ್ಗಾಂಬಿಕಾ ಜಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ದಾವಣಗೆರೆ ಅಲ್ಲದೆ ಚಿತ್ರದುರ್ಗ, ಹಾವೇರಿ ಜಿಲ್ಲೆಗಳೂ ಸೇರಿ 1500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ- ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
5 ಕೆಎಸ್‌ಆರ್‌ಪಿ ತುಕಡಿ, 9 ಸಶಸ್ತ್ರ ಮೀಸಲು ಪಡೆ, 2 ಕ್ಷಿಪ್ರ ಕಾರ್ಯಪಡೆ, ಆ್ಯಂಟಿ ಸಬೋಟೇಜ್‌ನ ಒಂದು ತಂಡ ನಿಯೋಜಿಸಲಾಗಿದೆ. 500 ಗೃಹರಕ್ಷಕರನ್ನು ನಿಯೋಜಿಸಲಾಗಿದೆ.
ಪ್ರಾಣಿಬಲಿ ನಿಷೇಧಕ್ಕೆ 9 ಕಡೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ದೇವಸ್ಥಾನದಲ್ಲಿ 32 ಸಿಸಿ ಕ್ಯಾಮರಾ ಕಾವಲಿದ್ದರೆ, ಪೊಲೀಸ್ ಇಲಾಖೆಯಿಂದಲೇ 40ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಜತೆಗೆ 3 ಡ್ರೋಣ್ ಕಾರ್ಯಾಚರಣೆ ಮಾಡಲಿವೆ. ದೇವಸ್ಥಾನ ಬಳಿ ಈಗಾಗಲೆ ತಾತ್ಕಾಲಿಕ ಉಪಠಾಣೆ ತೆರೆಯಲಾಗಿದೆ.
ದೇವಸ್ಥಾನ ಸುತ್ತ 15 ವೀಡಿಯೋಗ್ರಾಫರ್ಸ್ ವೀಡಿಯೋ ಚಿತ್ರಣ ಮಾಡಲಿದ್ದು, ಸುತ್ತಲಿನ ಕಟ್ಟಡಗಳ ಮೇಲೆ ಬೈನಾಕುಲರ್ ಹಿಡಿದು ಸ್ಕೈಸೆಂಟ್ರಿಗಳು ಕೂಡ ಹದ್ದಿನ ಕಣ್ಣಿಡಲಿದ್ದಾರೆ. ಈಗಾಗಲೆ ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗಿದ್ದು, ನಗರದಲ್ಲಿ ಪಥ ಸಂಚಲನ ನಡೆಸಲಾಗಿದೆ.
ಕೆಲವೆಡೆ ವಾಹನ ಸಂಚಾರ ನಿರ್ಬಂಧ
ಅರುಣ ವೃತ್ತ (ಕಿತ್ತೂರು ಚನ್ನಮ್ಮ)ದಿಂದ ಮದಕರಿನಾಯಕ ವೃತ್ತ ಮಾರ್ಗ ಹಾಗೂ ಅಭಿನವ ರೇಣುಕ ಮಂದಿರ ಬಳಿಯ ರೈಲ್ವೆ ಕೆಳಸೇತುವೆ ಮುಖಾಂತರ ವಸಂತ ರಸ್ತೆಗೆ ಬರುವ ನಾಲ್ಕು ಚಕ್ರದ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಶಿವಾಲಿ ಥಿಯೇಟರ್ ಕಡೆಯಿಂದ ಜಾಲಿನಗರ 2ನೇ ಮುಖ್ಯರಸ್ತೆ ಮುಖಾಂತರ ಮದಕರಿನಾಯಕ ವೃತ್ತದತ್ತ ಒಮ್ಮುಖವಾಗಿ ಚಲಿಸುವ ವಾಹನಗಳು ಹಾಗೂ ಗ್ಯಾಸ್‌ಕಟ್ಟೆ ಕಡೆಯಿಂದ ಕಾಳಿಕಾದೇವಿ ರಸ್ತೆ ಮುಖಾಂತರ ಹಗೇದಿಬ್ಬ ವೃತ್ತದವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.