ಜಗಳೂರು ಪಟ್ಟಣದ ನಾಲಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಂತ ಸಮ್ಮೇಳನ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ನಾಗರಾಜ್, ಬಿ.ಎನ್.ಎಂ ಸ್ವಾಮಿ, ಹೊನ್ನಮರಡಿ ರಾಜು, ಗೋಪಿ, ಚರಣ್ ಇದ್ದರು.Parinirvana Day
ಜಗಳೂರು:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್. ಅವರ ಹೋರಾಟದ ಫಲವಾಗಿಯೇ ಇಂದು ಕೋಟ್ಯಂತರ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದು ಹೋ.ಚಿ. ಬೋರಯ್ಯ ಕಾಲೇಜಿನ ಪ್ರಾಧ್ಯಾಪಕ ನಾಗರಾಜ್ ಹೇಳಿದರು.
ಪಟ್ಟಣದ ನಾಲಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಗಳೂರು ಶಾಖೆ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರ ದೇಹತ್ಯಾಗ ಮಾಡಿದ ದಿನವನ್ನು ಮಹಾ ಪರಿನಿರ್ವಾಣ ದಿನವನ್ನಾಗಿ ದೇಶ, ವಿದೇಶಗಳಲ್ಲೂ ಆಚರಿಸಲಾಗುತ್ತಿದೆ. ಇವರು ಸಂವಿಧಾನ ಶಿಲ್ಪಿ ಮಾತ್ರವಲ್ಲದೇ ಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ ಅಸ್ಪಶ್ಯತೆ, ಅಸಮಾನತೆ ವಿರುದ್ಧ ದಿಟ್ಟತನದಿಂದ ಹೋರಾಡಿದ ಧೀಮಂತ ಎಂದರು.
ಅಲ್ಲದೇ ಸಂಘರ್ಷದ ಹಾದಿ ತುಳಿಯದೇ ಸಾಮರಸ್ಯದ ಮೂಲಕ ಸಮಾಜ ಒಗ್ಗೂಡುವಂತೆ ಮಾಡಿದ್ದಾರೆ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಬಿ.ಎನ್.ಎಂ. ಸ್ವಾಮಿ ಮಾತನಾಡಿ, ಪ್ರಸ್ತುತ ಯುವಕರಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮಾದರಿಯಾಗಿದೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಅಂಬೇಡ್ಕರ್ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಅವರು ಒಂದು ಸಮುದಾಯದ ನಾಯಕರು ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಅವರು ಜಾತಿ, ಸಮುದಾಯ ಮೀರಿ ಬೆಳೆದವರು. ಜಾತಿ ಪದ್ಧತಿ ವಿರುದ್ಧ ಹೋರಾಡಿ ಸಂವಿಧಾನದಲ್ಲಿ ಈ ಬಗ್ಗೆ ಕಾನೂನುಗಳನ್ನೇ ರೂಪಿಸಿದ್ದಾರೆ. ಎಲ್ಲ ಸಮುಯದಾಗಳಿಗೂ ನ್ಯಾಯ ಕೊಟ್ಟಿದ್ದಾರೆ ಎಂದು ಹೇಳಿದರು.
ಎಬಿವಿಪಿ ಚಿತ್ರದುರ್ಗ ನಗರ ಘಟಕ ಕಾರ್ಯದರ್ಶಿ ಹೊನ್ನಮರಡಿ ರಾಜು, ವಿಭಾಗೀಯ ಸಂಚಾಲಕ ಗೋಪಿ, ಚರಣ್ ಮತ್ತಿತರರಿದ್ದರು.