ಕರಿಬಸವೇಶ್ವರನ ತೇರಿಗೆ ಸಾಕ್ಷಿಯಾದ ನಾರಿ ಪಡೆ

ಯರಗುಂಟೆ ಕ್ಷೇತ್ರದಲ್ಲಿ ಶನಿವಾರ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥವನ್ನು ಎಳೆದ ನಾರಿ ಪಡೆ.
ಯರಗುಂಟೆ ಕ್ಷೇತ್ರದಲ್ಲಿ ಶನಿವಾರ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥವನ್ನು ಎಳೆದ ನಾರಿ ಪಡೆ.
Published on

ಪ್ರಮುಖ ಮುಖ್ಯಾಂಶಗಳು

  • ಯರಗುಂಟೆಯಲ್ಲಿ ಭಕ್ತಿಯ ಸಿಂಚನ
  • ಹರಾಜಿನಲ್ಲೂ ಭಾಗಿಯಾದ ಮಹಿಳೆಯರು
  • ಜಾನಪದ ಕಲಾ ತಂಡಗಳ ಸಾಥ್
ದೇವರ ವಸ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಪ್ರಮೀಳೆಯರೇ ಪೈಪೋಟಿಗಿಳಿದಿದ್ದು ವಿಶೇಷವಾಗಿತ್ತು. ಕೈಯಳತೆಯ ಚಿಕ್ಕ ತೊಟ್ಟಿಲು ಕೊಳ್ಳಲು ಮಹಿಳೆಯರೇ ಪೈಪೋಟಿ ನಡೆಸಿದರು. ಒಂದನ್ನು ಬೆಂಗಳೂರಿನ ಉಷಾ ಎಂಬುವರು ಹರಾಜಿನಲ್ಲಿ ಪಡೆದರು. ಮತ್ತೊಂದನ್ನು ರಾಣೆಬೆನ್ನೂರಿನ ಮಹೇಶ್ ಗಳಿಸಿದರು.
ಹೂವಿನ ಮಾಲೆಗಳನ್ನು ಕಡೆನಂದಿಹಳ್ಳಿ ಶ್ರೀಗಳು, ಪರಸಪ್ಪ ಹಾಗೂ ರಾಜಶೇಖರ್ ಬಳ್ಳಾರಿ, ಲಕ್ಷ್ಮಿ-ಗಣಪತಿಯ ಬೆಳ್ಳಿ ನಾಣ್ಯಗಳನ್ನು ಗೋವಿಂದಪ್ಪ ಹಾಗೂ ಬಸವರಾಜಪ್ಪ, ಅಂತರಗಾಯಿಗಳನ್ನು ಮಹಾಂತೇಶ್, ಪ್ಲಂಬರ್ ವಿಶ್ವನಾಥ್ ಹರಾಜಿನಲ್ಲಿ ಪಡೆದುಕೊಂಡರು.
ಕಳೆದ 13 ವರ್ಷದಿಂದಲೂ ರಥೋತ್ಸವದಲ್ಲಿ ಭಾಗಿಯಾಗುತ್ತ ಬಂದಿದ್ದೇನೆ. ನನ್ನ ಸಮಸ್ಯೆಯೂ ಬಗೆಹರಿದಿದೆ. ಮಕ್ಕಳಾಗದವರೂ ಸೇರಿ ಅನೇಕರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ ರಥ ಎಳೆಯುತ್ತ ಬಂದಿದ್ದಾರೆ ಎಂದು ಗೃಹಿಣಿ ಮಮತಾ ಹೇಳಿಕೊಂಡರು.
ಸೃಷ್ಟಿಯಲ್ಲಿ ಜನನಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ತಾಯಿಗೆ ಮೊದಲು ಗೌರವ ನೀಡಿದಲ್ಲಿ ದೇಶ, ಸಮಾಜ ಉದ್ದಾರವಾಗಲಿದೆ. ಇದೇ ದೆಸೆಯಿಂದಲೇ 14 ವರ್ಷದಿಂದಲೂ ಮಹಿಳೆಯರೇ ರಥವನ್ನು ಎಳೆಯುತ್ತಿದ್ದಾರೆ ಎಂದು ಕರಿಬಸವೇಶ್ವರ ಗದ್ದಿಗೆ ಮಠದ ಶ್ರೀ ಪರಮೇಶ್ವರ ಸ್ವಾಮೀಜಿ ಹೇಳಿಕೊಂಡರು.
ಧಾರ್ಮಿಕ ಇತಿಹಾಸದಲ್ಲಿ ಕಳಸವಾದ ಭಾರತ
ಭಾರತದಲ್ಲಿನ ಧರ್ಮ ಶ್ರದ್ಧೆ, ಗುರು ಭಕ್ತಿ ಹಾಗೂ ದೇವರ ಮೇಲಿನ ವಿಶ್ವಾಸ ಎಲ್ಲವೂ ಈ ದೇಶವನ್ನು ಧಾರ್ಮಿಕ ಇತಿಹಾಸದಲ್ಲಿ ಬಾನೆತ್ತರದ ಕಳಸ ರಾರಾಜಿಸುವಂತೆ ಮಾಡಿದೆ ಎಂದು ಉಜ್ಜಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೊಗಳಿದರು.
ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಂತರು, ಮಹಾತ್ಮರು, ದಾರ್ಶನಿಕರು ನಡೆದಾಡಿದ, ಸಾಧನೆ ಸಿದ್ಧಿ ತೋರಿದ ಭಾರತವನ್ನು ಧರ್ಮಭೂಮಿ, ಪುಣ್ಯಭೂಮಿ, ದೇವ ಭೂಮಿ ಎಂದೇ ಕರೆಯಲಾಗಿದೆ ಎಂದರು.
ಗಿಡ-ಮರಗಳು ಇತರರಿಗಾಗಿ ಹೂವು-ಹಣ್ಣು ಬಿಡುತ್ತವೆ. ಆಶ್ರಯಿಸಿ ಬಂದವರಿಗೆ ನೆರಳು ನೀಡುತ್ತವೆ. ಮರ ಅಳಿದ ಮೇಲೂ ಪೀಠೋಪಕರಣವಾಗಿ ಬಾಳಿಕೆ ಬರಲಿದೆ. ನಾವು ಹೊರಬಿಡುವ ಕಾರ್ಬನ್ ಡೈ ಆಕ್ಸೈಡನ್ನು ಪಡೆದುಕೊಳ್ಳುವ ಗಿಡಗಳು ನಮಗೆ ಆಮ್ಲಜನಕವನ್ನು ನೀಡುತ್ತವೆ. ವೃಕ್ಷಾರಾಧನೆ ಹಿಂದೆ ವೈಜ್ಞಾನಿಕತೆ ಇದೆ. ಹೀಗಾಗಿ ಗಿಡಗಳನ್ನು ಗೌರವಿಸುವ ಸಂಸ್ಕೃತಿ ಭಾರತಕ್ಕೆ ಬಂದಿದೆ.
ಪಶು-ಪಕ್ಷಿ, ನದಿ ಹೀಗೆ ಪ್ರಕೃತಿಯಲ್ಲಿರುವ ಪ್ರತಿ ವಸ್ತುವೂ ಪರೋಪಕಾರಕ್ಕಾಗಿಯೇ ಸೃಜನೆಯಾಗಿವೆ. 84 ಲಕ್ಷ ಜೀವರಾಶಿಯಲ್ಲಿ ಒಬ್ಬನಾದ ಮಾನವರೂ ಪರೋಪಕಾರ ಮಾಡಬೇಕು. ಅಜ್ಞಾನ- ಅಂಧಕಾರ ದೂರ ಮಾಡಬೇಕು ಎಂದರು.
ಧರ್ಮ ಮತ್ತು ಸ್ವಾಮೀಜಿಗಳು ಎಲ್ಲರನ್ನೂ ಒಂದುಗೂಡಿಸಬೇಕೇ ಹೊರತಾಗಿ ಒಡೆಯಬಾರದು. ಕತ್ತರಿಯಿಂದಾಗಿ ಜಾತಿ ಸ್ವರೂಪದಲ್ಲಿ ತುಂಡಾದರೆ ಧರ್ಮ ಮತ್ತು ಸ್ವಾಮೀಜಿಗಳು ಸೂಜಿಯಂತೆ ಹೊಲಿದು ಒಗ್ಗೂಡಿಸಬೇಕಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮುಷ್ಟೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೆಣ್ಣೆಹಳ್ಳಿಯ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಮುತ್ತಗಿಯ ಶಿವಯೋಗಿ ಹಾಲಸ್ವಾಮಿ, ಯರಗುಂಟೆಯ ಪರಮೇಶ್ವರ ಸ್ವಾಮೀಜಿ, ಕಡೇ ನಂದಿಹಳ್ಳಿಯ ಶಿವಕುಮಾರ ಸ್ವಾಮೀಜಿ, ಅರಕೆರೆಯ ಚನ್ನವೀರ ಸ್ವಾಮೀಜಿ, ಉಜ್ಜಿನಿಯ ಸೈಯದ್ ರಹಮತ್ ಉಲ್ಲಾ, ಹವ್ಯಾಸಿ ಗ್ರಾಮೀಣ ಕಲಾವಿದರ ಒಕ್ಕೂಟದ ಅಧ್ಯಕ್ಷ ಎನ್.ಎಸ್.ರಾಜು, ಸಹಕಾರಿ ಧುರೀಣ ಮುರುಗೇಶ ಆರಾಧ್ಯ, ರೈತ ಮುಖಂಡ ಹೊನ್ನೂರು ಮುನಿಯಪ್ಪ, ಮರುಳಸಿದ್ದಪ್ಪ, ಶರಣಪ್ಪ, ಜಗನ್ನಾಥ್, ಬನ್ನಯ್ಯಸ್ವಾಮಿ, ಸೇವಾ ಸಮಿತಿ ಅಧ್ಯಕ್ಷ ಟಿ.ಆರ್. ವಿಜಯಕುಮಾರ್, ಎಂ. ಮಂಜುನಾಥ್, ರಾಕೇಶ್ ಪಾಟೀಲ್ ಇತರರಿದ್ದರು. ಇದೇ ವೇಳೆ ಹಲವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರಿಬಸವೇಶ್ವರರು ಸಮಾಜಕ್ಕೆ ಜಗತ್ತಿಗೆ ವರವಾಗಿ, ಋಷಿಯಾಗಿ ಬಂದವರು. ಜೀವನದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ಜಗತ್ತಿಗೆ ಬೆಳಕು ನೀಡಿದರು. 600 ವರ್ಷದ ಬಳಿಕವೂ ಅವರ ಕಾಯಕ ತಪಸ್ಸಿನ ಶಕ್ತಿ ಬೆಳಕಾಗಿ ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net