ಕಡ್ಲೇಬಾಳ್‌ನಲ್ಲಿ ವಿಜೃಂಭಣೆಯ ಬ್ರಹ್ಮ ರಥೋತ್ಸವ

ದಾವಣಗೆರೆ ತಾಲೂಕು ಕಡ್ಲೇಬಾಳು ಗ್ರಾಮದಲ್ಲಿ ಮಂಗಳವಾರ ಮಧ್ವ ನವಮಿ ಅಂಗವಾಗಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ದಾವಣಗೆರೆ ತಾಲೂಕು ಕಡ್ಲೇಬಾಳು ಗ್ರಾಮದಲ್ಲಿ ಮಂಗಳವಾರ ಮಧ್ವ ನವಮಿ ಅಂಗವಾಗಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾತ್ರೆ ವೈಭವ ಕಣ್ತುಂಬಿಕೊಂಡ ಭಕ್ತರು
  • ಮಧ್ವ ನವಮಿ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ
ದಾವಣಗೆರೆ : ತಾಲೂಕಿನ ಕಡ್ಲೇಬಾಳು ಗ್ರಾಮದಲ್ಲಿ ಮಂಗಳವಾರ ಮಧ್ವ ನವಮಿ ಅಂಗವಾಗಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶ್ರೀ ಹನುಮ ಭೀಮ ಮಧ್ವ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಥೋತ್ಸವಕ್ಕೆ ಕಡ್ಲೇಬಾಳು ಮತ್ತು ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ತಂದ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕೂಡಿಸಲಾಯಿತು. ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವ ಆರಂಭವಾಗುತ್ತಿದ್ದಂತೆ ಹರ್ಷೋದ್ಗಾರ ಮಾಡಿದ ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ಪ್ರಾರ್ಥಿಸಿದರು. ಶ್ರದ್ಧಾ ಭಕ್ತಿಯಿಂದ ತೇರನ್ನು ಎಳೆದರು. ರಥೋತ್ಸವದ ಮೆರವಣಿಗೆಯಲ್ಲಿ ಕೀಲು ಕುದುರೆ ಮುಂತಾದ ಕಲಾ ತಂಡಗಳು ಪಾಲ್ಗೊಂಡಿದ್ದವು. ವಿವಿಧ ವಾದ್ಯಗಳು ಮೊಳಗಿದವು.
ಮುಖಂಡರಾದ ಬಿ.ಕೆ. ಪರಶುರಾಮ್, ಮುದೇಗೌಡ್ರ ಗಿರೀಶ್, ಮೇಕಾ ಮುರಳೀಕೃಷ್ಣ, ರಾಘವೇಂದ್ರ ನಾಯ್ಕ, ಶ್ರೀ ಹನುಮ ಭೀಮ ಮಧ್ವ ಸೇವಾ ಚಾರಿಟಬಲ್ ಟ್ರಸ್ಟ್‌ನ ಪ್ರಮುಖರಾದ ಕಂಪ್ಲಿ ಗುರುರಾಜಾಚಾರ್, ಕೆ. ಗುರುರಾಜ್, ಎ.ಎನ್. ಬದರಿ ಪ್ರಸಾದ್, ಸುಮುಖ, ಶ್ರೀನಿಧಿ, ಸಂದೀಪ್ ಶಾನುಭೋಗ, ವಿಜಯ್ ಕಲಮ್‌ದಾನಿ, ಅರವಿಂದಾಚಾರ್, ಸುದರ್ಶನ್ ಪ್ರಹ್ಲಾದರಾವ್, ಅರ್ಚಕರಾದ ವಾಸುದೇವ, ಪುರೋಹಿತರಾದ ಕಡೂರು ಪ್ರಾಣೇಶಾಚಾರ್ ಹಾಗೂ ಗ್ರಾಮಸ್ಥರು ಇದ್ದರು.
ಹರಕೆ ಹೊತ್ತಿದ್ದ ಭಕ್ತರು ದೇವಸ್ಥಾನದ ಅವರಣದಲ್ಲಿ ದೀಡ್ ನಮಸ್ಕಾರ ಹಾಕಿದರು. ಪುಷ್ಕರಣಿ ನೀರಿನಲ್ಲಿ ಮಿಂದರು. ದೇವರ ದರ್ಶನ ಮಾಡಿ ಹಣ್ಣು-ಕಾಯಿ ಸಲ್ಲಿಸಿದರು. ಕುಟುಂಬ ಸಮೇತರಾಗಿ ಆಗಮಿಸಿ ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು.
ಜಾತ್ರೆಯ ಅಂಗವಾಗಿ ಖಾರ, ಮಂಡಕ್ಕಿ, ಬೆಂಡು, ಬತ್ತಾಸು ಮುಂತಾದ ತಿನಿಸುಗಳ ಅಂಗಡಿಗಳು, ಬಳೆ, ಪೂಜಾ ಸಾಮಗ್ರಿಗಳು, ಮಕ್ಕಳ ಆಟಿಕೆ ಸಾಮಾನುಗಳ ಮಾರಾಟ ನಡೆಯಿತು.
ಬೆಳಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ವಾಯುಸ್ತುತಿ ಪುನಶ್ಚರಣ ಹಾಗೂ ಶ್ರೀ ರಾಘವೇಂದ್ರ ಅಷ್ಟೋತ್ತರ, ರಥೋತ್ಸವ ಹೋಮ ನೆರವೇರಿದ್ದವು.

ಪಿಜೆ ಬಡಾವಣೆ ರಾಯರ ಮಠ

ನಗರದ ಪಿ.ಜೆ. ಬಡಾವಣೆಯ ರಾಯರ ಮಠದಲ್ಲಿ ಮಂಗಳವಾರ ಮಧ್ವ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯತು.
ಬೆಳಗ್ಗೆ 7.30ಕ್ಕೆ ವೇದ ಪಂಡಿತ ಶ್ರೀ ಕೃಷ್ಣಾಚಾರ್ಯ ಮಣ್ಣೂರ್ ಅವರಿಂದ ಸಂಕಲ್ಪ ಮುಖೇನ ವಾಯುಸ್ತುತಿ ಮತ್ತು ಸ್ತೋತ್ರಗಳು ಹಾಗೂ ಸುಮಧ್ವ ವಿಜಯದ ಪಾರಾಯಣವನ್ನು ಭಕ್ತ ವೃಂದದವರು ನಡೆಸಿಕೊಟ್ಟರು. ಮಧ್ಯಾಹ್ನ ವೇದಪಂಡಿತ ಶ್ರೀ ಪುರಂದರಾಚಾರ್ಯ ಹಯಗ್ರೀವ ಅವರಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಧ್ವಾಚಾರ್ಯರ ‘ಸರ್ವಮೂಲ ಗ್ರಂಥ’ವನ್ನು ರಥದಲ್ಲಿರಿಸಿ ರಥೋತ್ಸವದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ನೂರಾರು ಭಕ್ತರು, ಭಾರತಿ ಭಜನಾ ಮಂಡಳಿಯ ಸದಸ್ಯರು ಭಜನೆ ಮಾಡುವುದರೊಂದಿಗೆ ವನಿತಾ ಸಮಾಜ, ಶ್ರೀರಾಮ ಪಾರ್ಕ್ ಮೂಲಕ ಪುನಃ ಶ್ರೀಮಠಕ್ಕೆ ಆಗಮಿಸಿತು. ನಂತರ ನೈವೇದ್ಯ ಸಮರ್ಪಣೆ, ಮಹಾ ಮಂಗಳಾರತಿ ಹಾಗೂ ತೀರ್ಥ, ಪ್ರಸಾದದೊಂದಿಗೆ ರಥೋತ್ಸವವು ಸಂಪನ್ನಗೊಂಡಿತು.
ರಥೋತ್ಸವದಲ್ಲಿ ಪುರಂದರಾಚಾರ್ಯ ಹಯಗ್ರೀವ, ಕೃಷ್ಣಾಚಾರ್ಯ ಮಣ್ಣೂರ್, ಸುತೀರ್ಥ ಕಟ್ಟಿ, ರಾಮಗೋಪಾಲ ಕಟ್ಟಿ, ರಾಜಣ್ಣ, ಸುಶಿಲೇಂದ್ರ ದೇವಳೆ, ಪ್ರಕಾಶ್ ನಾಡಿಗೇರ್, ಎಂ.ಬಿ. ಬದರಿನಾಥ್, ನಾಗರಾಜ್, ಸುಶಮೀಂದ್ರ, ಜಿ.ಜೆ. ವಿನೋದ್, ವಿಠ್ಠಲ ಪುರಾಣಿಕ್, ಜಯರಾಮ್, ರಾಘವೇಂದ್ರಚಾರ್ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net