ಪ್ರತಿಷ್ಠಿತ ಕಂಪನಿ ಉದ್ಯೋಗ ಬಿಟ್ಟು ಕೃಷಿಗಿಳಿದ ರೈತ

ಹುಲುಸಾಗಿ ಬೆಳೆದಿರುವ ಅಡಕೆ ತೋಟ. Agriculture
ಹುಲುಸಾಗಿ ಬೆಳೆದಿರುವ ಅಡಕೆ ತೋಟ. Agriculture
Published on

ಪ್ರಮುಖ ಮುಖ್ಯಾಂಶಗಳು

  • ಸಾವಯವ ಪದ್ಧತಿಯಲ್ಲಿ ಕೃಷಿ ಮತ್ತು ತೋಟಗಾರಿಕೆ
  • ಸಮಗ್ರ ನೀರು ನಿರ್ವಹಣೆಯಲ್ಲಿ ಬಹುಬೆಳೆ ಬೆಳೆದು ಯಶಸ್ಸು
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಕೃಷಿ ಲಾಭದಾಯಕವಲ್ಲ ಎಂದು ನಂಬಿ ಹಳ್ಳಿ ಬಿಟ್ಟು ನಗರ ಸೇರುತ್ತಿರುವ ಇಂದಿನ ಯುವ ಪೀಳಿಗೆಯ ಮಧ್ಯೆ, ಮಾಯಕೊಂಡ ಹೋಬಳಿಯ ಹೆದ್ನೇ ಗ್ರಾಮದ ಡಾ.ಎಚ್.ಬಿ. ಮುರುಗೇಶಪ್ಪ ಅವರು ಹೊಸ ಭರವಸೆಯಾಗಿ ನಿಂತಿದ್ದಾರೆ.
ಬಿಎಸ್ಸಿ ಅಗ್ರಿ ಪದವೀಧರರಾದ ಇವರು, ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯ ಉದ್ಯೋಗ ಬಿಟ್ಟು ಇಂದು ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಪಡೆಯುವ ಮೂಲಕ ಕೃಷಿ ಲೋಕದ ದಿಗ್ಗಜರಾಗಿ ಹೊರಹೊಮ್ಮಿದ್ದಾರೆ.

90% ಸಾವಯವ, 10% ಮಾತ್ರ ರಾಸಾಯನಿಕ!

40 ವರ್ಷಗಳ ಕೃಷಿ ಪ್ರಯಾಣದಲ್ಲಿ ಸಾವಯವ ಪದ್ಧತಿಗೆ ಮೊದಲ ಆದ್ಯತೆ. 18 ಎಕರೆ ಜಮೀನಿನಲ್ಲಿ ಶೇ. 10ರಷ್ಟು ಮಾತ್ರ ರಸಗೊಬ್ಬರ ಬಳಸಿ, ಉಳಿದ ಶೇ. 90ರಷ್ಟು ಸಾವಯವ ವಿಧಾನ ಅಳವಡಿಸಿಕೊಂಡಿದ್ದಾರೆ. ಇವರಿಗೆ ಮಗ ಎಚ್.ಎಂ. ದಿನೇಶ್ ನೆರವಾಗುತ್ತಿದ್ದಾರೆ.
ಡಾ. ಮುರುಗೇಶಪ್ಪ ಅವರು 1990ರಿಂದ ಸೂರ್ಯಕಾಂತಿ, ಮೆಕ್ಕೆಜೋಳ, ವರಲಕ್ಷ್ಮೀ ಮತ್ತು ಡಿಸಿಎಚ್ ತಳಿಯ ಬೆಳೆಗಳನ್ನು ಬೆಳೆದು ರಾಜ್ಯ ಬೀಜ ನಿಗಮಕ್ಕೆ ಬೀಜೋತ್ಪಾದನೆಗೆ ಕಳಿಸುತ್ತಿದ್ದರು. ಹಸಿರು ಮನೆಯಲ್ಲಿ ಕ್ಯಾಪ್ಸಿಕಂ ಮತ್ತು ಬೆಂಗಳೂರು ಸವತೆ ಬೆಳೆದು ಯಶಸ್ಸು ಕಂಡಿದ್ದರು.
ಬಳಿಕ 15 ಎಕರೆಯಲ್ಲಿ 7 ಸಾವಿರ ಅಡಕೆ ಗಿಡ ಹಾಕಿದರು. ಇವುಗಳ ಮಧ್ಯೆ ಅಂತರ ಬೆಳೆಯಾಗಿ ಪೇರಲೆ, ಜಾಯಿಕಾಯಿ, ಅರಿಶಿಣ, ಸುವರ್ಣ ಗಡ್ಡೆ, ಕೆಂಪು ಬಾಳೆ, ವೆನಿಲಾ, ಕಾಳು ಮೆಣಸು, ದಾಳಿಂಬೆ ಜತೆಗೆ ತೋಟಗಳ ಸುತ್ತ ಬದುಗಳ ಅಂಚಿನಲ್ಲಿ ಸಾಗವಾನಿ, ಮಹಾಗನಿ, ಸರ್ವ ಸಾಂಬಾರ್, ಹಲಸು, ಮಾವು, ನಿಂಬು, ಸಪೋಟ, ತೆಂಗು, ಬಟರ್ ಪ್ರೂಟ್, ಲವಂಗ, ಏಲಕ್ಕಿ ದಾಲ್ಚಿನ್ನಿ ಬೆಳೆಸಿದ್ದಾರೆ. 5 ಗೀರ್ ತಳಿಯ ಹಸುಗಳನ್ನು ಸಹ ಸಾಕಿದ್ದಾರೆ.

ಜೀವಾಮೃತ ಹಾಗೂ ನೀರು ನಿರ್ವಹಣೆ

ಸಾವಯವ ಗೊಬ್ಬರಕ್ಕಾಗಿ ಎರೆಹುಳು ತೊಟ್ಟಿ ಹಾಗೂ ಜೀವಾಮೃತ ಘಟಕ ನಿರ್ಮಿಸಿದ್ದಾರೆ. 60*60 ಅಡಿ ಹಾಗೂ 24 ಅಡಿ ಆಳದ ಕೃಷಿ ಹೊಂಡವಿದ್ದು, ಐದು ಬೋರ್‌ವೆಲ್‌ಗಳ ನೀರನ್ನು ಶೇಖರಿಸಿ ಹನಿ ನೀರಾವರಿ ಮೂಲಕ ಪೂರೈಸುತ್ತಾರೆ.
ಖರ್ಚು- ಗಳಿಕೆ: ವಾರ್ಷಿಕವಾಗಿ ಸರಾಸರಿ 30 ರಿಂದ 35 ಲಕ್ಷ ರೂಪಾಯಿ ಖರ್ಚು ಬರುತ್ತದೆ. ಬೆಳೆ ಉತ್ತಮವಾಗಿ ಬಂದರೆ ವರ್ಷಕ್ಕೆ 1 ಕೋಟಿ ರೂಪಾಯಿವರೆಗೂ ಆದಾಯ ಗಳಿಸಬಹುದು ಎನ್ನುತ್ತಾರೆ ಮುರುಗೇಶಪ್ಪ.

ಸಂದಿರುವ ಪ್ರಶಸ್ತಿಗಳು

2003-04: ರಾಜ್ಯ ಮಟ್ಟದ ಯಶಸ್ವಿ ರೈತ ಪ್ರಶಸ್ತಿ
2007: ಜಿಲ್ಲಾ ಪ್ರಗತಿಶೀಲ ರೈತ ಪ್ರಶಸ್ತಿ
2008: ಅತಿ ಹೆಚ್ಚು ಅರಿಶಿಣ ಬೆಳೆದಿದ್ದಕ್ಕೆ ರಾಜ್ಯ ಶ್ರೇಷ್ಠ ಕೃಷಿಕ ಪ್ರಶಸ್ತಿ.
2017: ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ
2019: ಬೆಂಗಳೂರು ಜಿಕೆವಿಕೆ ಅಲ್ಯೂಮಿನಿ ಪ್ರಶಸ್ತಿ
2022: ರಾಷ್ಟ್ರೀಯ ಮಿಲೇನಿಯರ್ ರೈತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
2025: ದೆಹಲಿಯ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಗೌರವ ಡಾಕ್ಟರೇಟ್

ರೈತರು ಕೃಷಿಯಲ್ಲಿ ರಾಸಾಯನಿಕ ಬಳಸಿ ಭೂಮಿಯನ್ನು ಬಂಜರು ಮಾಡುವ ಬದಲು, ಜೀವಾಮೃತ ಹಾಗೂ ಎರೆಹುಳು ಗೊಬ್ಬರಕ್ಕೆ ಒತ್ತು ನೀಡಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬೇಕು.

ಅಡಕೆ ಸಿಪ್ಪೆಯನ್ನು ಸುಡದೆ ಅದರಿಂದಲೇ ಮಣ್ಣು ಮಿಶ್ರಿತ ಗೊಬ್ಬರ ತಯಾರಿಸಿದರೆ ಅಡಕೆ ತೋಟಗಳಿಗೆ ರೋಗಬಾಧೆ ಕಡಿಮೆಯಾಗುತ್ತದೆ.

ಮುರುಗೇಶಪ್ಪ ನವರು ಇಲಾಖೆಯಿಂದ ಹಲವಾರು ತರಬೇತಿ ಪಡೆದಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಮಿತವಾಗಿ ಬಳಸಿ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಜತೆಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆಗಳನ್ನು ಬೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net