ದಾವಣಗೆರೆಯಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಎಸ್.ವಿ. ರಾಮಚಂದ್ರ, ಬಿ. ವೀರಣ್ಣ, ಹೊದಿಗೆರೆ ರಮೇಶ್, ಆಂಜನೇಯ ಗುರೂಜಿ, ಶ್ರೀನಿವಾಸ ದಾಸಕರಿಯಪ್ಪ, ಕೆ.ಪಿ. ಪಾಲಯ್ಯ, ಇಂದಿರಾ ರಾಮಚಂದ್ರಪ್ಪ ಇದ್ದರು.
ದಾವಣಗೆರೆ :ಹರಿಹರ ತಾಲೂಕಿನಲ್ಲಿ ಫೆ. 8 ಮತ್ತು 9 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸಮುದಾಯದ ಶಕ್ತಿ ಪ್ರದರ್ಶನ ಮಾಡಬೇಕು. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು, ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಸಂಕಲ್ಪ ಮಾಡಲಾಯಿತು.
ಸಂಘಟನೆಯಲ್ಲಿ ಶಕ್ತಿಯಿದೆ. ಅದನ್ನು ನಿರೂಪಿಸಲು ಮಹರ್ಷಿ ವಾಲ್ಮೀಕಿ ಜಾತ್ರೆಯು ಸೂಕ್ತ ವೇದಿಕೆಯಾಗಿದೆ. ಪಕ್ಷ ಭೇದ, ಭಿನ್ನಾಭಿಪ್ರಾಯಗಳನ್ನು ಮರೆತು ದೊಡ್ಡ ಸಂಖ್ಯೆಯಲ್ಲಿ ಸೇರುವ ಮೂಲಕ ಸರ್ಕಾರಕ್ಕೆ ಸಂದೇಶ ರವಾನಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಮಾಜದ ಮುಖಂಡ ಹೊದಿಗೆರೆ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನಗಳ ಜಾತ್ರೆಯ ಮೊದಲ ದಿನ ಜಾತ್ರೆಯಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ. ಖಾಲಿ ಕುರ್ಚಿಗಳಿದ್ದರೆ ಶೋಭೆ ತರುವುದಿಲ್ಲ. ಆದ್ದರಿಂದ ನಾವು ಅಧಿಕ ಸಂಖ್ಯೆಯಲ್ಲಿ ಸೇರಬೇಕು. ಅದಕ್ಕೆ ಮುಂಚಿತವಾಗಿ ನಮ್ಮ ತಾಲೂಕುಗಳಿಂದ ಜನರನ್ನು ಕರೆತರುವ ಪ್ರಯತ್ನಗಳು ನಡೆಯಬೇಕು ಎಂದು ತಿಳಿಸಿದರು.
ರಾಜನಹಳ್ಳಿಯ ಮಠದಲ್ಲಿ ತ್ರಿವಿಧ ದಾಸೋಹ ನಡೆಯಬೇಕು. ಶಿಕ್ಷಣ ಸಂಸ್ಥೆಗಳನ್ನು ತೆರೆಯಬೇಕು. ಮಠಕ್ಕೆ ನಾವೆಲ್ಲ ಶಕ್ತಿಯಾಗಿ ನಿಲ್ಲಬೇಕು ಎಂದು ಹೇಳಿದರು.
ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸ್ವಾಮೀಜಿ ಸಮಾಜದ ಎಲ್ಲ ಶಾಸಕರ ಸಭೆ ಕರೆದು ಮಹರ್ಷಿ ವಾಲ್ಮೀಕಿ ಜಾತ್ರೆಗೆ ಹೆಚ್ಚು ಜನರನ್ನು ಸೇರಿಸುವಂತೆ ತಿಳಿಸಿ. ನನಗೆ ಯಾವುದೇ ಜವಾಬ್ದಾರಿ ವಹಿಸಿದರೂ ನಿರ್ವಹಿಸುವೆ. ಎಲ್ಲರೂ ಸೇರಿ ಹೆಚ್ಚು ಜನ ಜಾತ್ರೆಗೆ ಸೇರುವಂತೆ ಮಾಡೋಣ ಎಂದರು.
ಜಗಳೂರು ತಾಲೂಕಿನ ಮುಖಂಡ ಕೆ.ಪಿ. ಪಾಲಯ್ಯ ಮಾತನಾಡಿ, ಜಾತ್ರೆಯನ್ನು ಹಬ್ಬದಂತೆ ಆಚರಿಸಬೇಕು. ಒಗ್ಗಟ್ಟಿನ ಪ್ರದರ್ಶನ ಮಾಡುವ ಮೂಲಕ ರಾಜ್ಯಕ್ಕೆ ಒಳ್ಳೆಯ ಸಂದೇಶ ಹೋಗಬೇಕು. ಜಗಳೂರು ಎಸ್ಟಿ ಮೀಸಲು ಕ್ಷೇತ್ರವಾದ ಕಾರಣ ನಮ್ಮ ಜವಾಬ್ದಾರಿ ಜಾಸ್ತಿ ಇದೆ. ಹಳ್ಳಿಗಳಲ್ಲಿ ಸಭೆ ನಡೆಸಿ ಹೆಚ್ಚು ಜನರನ್ನು ಜಾತ್ರೆಗೆ ಕರೆತರೋಣ ಎಂದರು.
ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಮುದಾಯದ 2.5 ಲಕ್ಷ ಜನಸಂಖ್ಯೆ ಇದೆ. ನಮ್ಮ ಜಿಲ್ಲೆಯಲ್ಲೇ ಮಠ ಇದೆ. ನಾವು ಈಗಲಾದರೂ ಜಾಗೃತರಾಗಬೇಕು. ಎಲ್ಲ ಮುಖಂಡರೂ ಸೇರಿ ತಾಲೂಕು ಪ್ರವಾಸ ಮಾಡೋಣ ಎಂದು ಹೇಳಿದರು.
ಮುಖಂಡ ಲೋಹಿತ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮಾಜದ 14 ಜನ ಶಾಸಕರಿದ್ದಾರೆ. ಬಿ. ನಾಗೇಂದ್ರ ಮತ್ತು ಕೆ.ಎನ್. ರಾಜಣ್ಣ ಅವರು ರಾಜೀನಾಮೆ ನೀಡಿದ ನಂತರ ನಮ್ಮ ಸಮಾಜದ ಒಬ್ಬರೇ ಮಂತ್ರಿ ಉಳಿದುಕೊಂಡಿದ್ದಾರೆ. ಇನ್ನಿಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಈ ನಿಟ್ಟಿನಲ್ಲಿ ಸ್ವಾಮೀಜಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಮಾತನಾಡಿ, ದಾವಣಗೆರೆಯಲ್ಲಿ ಬಾಲಕಿಯರ ಹಾಸ್ಟೆಲ್ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿಸಬೇಕಿದೆ. ಅದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ. ಈ ಉದ್ದೇಶಕ್ಕೆ 5 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಸ್ವಾಮೀಜಿ ಅವರು ಕೇಳಲಿ. ಆದಷ್ಟು ಶೀಘ್ರದಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆಯಲಿ ಎಂದರು.
ರಾಜನಹಳ್ಳಿ ಮಠದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಹೇಮಣ್ಣ ಆಗ್ರಹಿಸಿದರು. ಕುಕ್ಕುವಾಡ ಮಂಜುನಾಥ್, ವಿಜಯಶ್ರೀ, ಹೊನ್ನಾಳಿ ನಾಗೇಂದ್ರಪ್ಪ, ಜಿಗಳಿ ರಂಗಪ್ಪ, ಇಂದಿರಾ ರಾಮಚಂದ್ರಪ್ಪ ಇದ್ದರು. ಆಂಜನೇಯ ಗುರೂಜಿ ನಿರೂಪಿಸಿದರು.