ದಾವಣಗೆರೆ :ತೆರಿಗೆ ರೂಪದಲ್ಲಿ ಬರುವ ಆದಾಯದಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತೆ ಅಮೃತಾ ರಂಜನ್ ಹೇಳಿದರು.
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ, ರಾಜ್ಯ ತೆರಿಗೆ ಸಲಹೆಗಾರರ ಸಂಘದ ಸಹಯೋಗದಲ್ಲಿ ನಗರದ ಜಿ.ಎಂ. ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ ತೆರಿಗೆ ಸಲಹೆಗಾರರ ಸಮಾವೇಶದಲ್ಲಿ ಮಾತನಾಡಿದರು.
ಮೂಲಸೌಲಭ್ಯ ಕಲ್ಪಿಸುವುದು, ಶಿಕ್ಷಣ, ಆರೋಗ್ಯ ಸೇರಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೆರಿಗೆ ಹಣವೇ ಪ್ರಮುಖ ಮೂಲವಾಗಿದೆ. ಅದರಿಂದ ದೇಶವನ್ನು ಕಟ್ಟಲು ಸಾಧ್ಯ ಎಂದು ತಿಳಿಸಿದರು.
ನೂತನ ಆದಾಯ ತೆರಿಗೆ ಕಾಯ್ದೆ-2025 ಸರಳವಾಗಿದ್ದು ಅದನ್ನು ಯಶಸ್ವಿಯಾಗಿ ಜಾರಿಗೆ ತರಲು ತೆರಿಗೆ ಸಲಹೆಗಾರರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. 1961ರಲ್ಲಿ ಆದಾಯ ತೆರಿಗೆ ಕಾಯ್ದೆ ರೂಪಿಸಲಾಗಿತ್ತು, ಈಗ ಬದಲಾವಣೆಯ ಕಾಲ ಬಂದಿದೆ. ಇಂದಿನ ಅಗತ್ಯಕ್ಕೆ ಅನುಗುಣವಾಗಿ ಹಳೇ ಕಾಯ್ದೆಗೆ ಹೊಸ ರೂಪ ನೀಡಲಾಗಿದೆ ಎಂದು ವಿವರಿಸಿದರು.
ಈ ಕಾಯ್ದೆ ರೂಪಿಸುವಾಗ ಸಂವಿಧಾನದ ಆಶಯಗಳಿಗೆ ಧಕ್ಕೆ ಬಾರದಂತೆ ಎಚ್ಚರ ವಹಿಸಲಾಗಿದೆ. ತೆರಿಗೆ ಪಾವತಿ ಮಾಡುವವರ ಹಕ್ಕುಗಳನ್ನು ರಕ್ಷಿಸಲಾಗಿದೆ. ಹೊಸ ಆರ್ಥಿಕ ವ್ಯವಸ್ಥೆಯ ನಡುವೆ ಕಾಯ್ದೆಯನ್ನು ಸರಳಗೊಳಿಸಲಾಗಿದೆ ಎಂದರು.
ಹೊಸ ಕಾಯ್ದೆಯ ಬಗ್ಗೆ ಜನಸಾಮಾನ್ಯರಲ್ಲೂ ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ನೂತನ ಐಟಿ ವೆಬ್‌ಸೈಟ್, ಕ್ಯೂಆರ್ ಕೋಡ್ ರಚಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಡಿಜಿಟಲ್ ವೇದಿಕೆಯ ನೆರವು ಪಡೆಯಲಾಗುತ್ತಿದೆ. ಕರಪತ್ರಗಳನ್ನು ಹಂಚಲಾಗುತ್ತಿದೆ. ಸಮುದಾಯ ಸಂಪರ್ಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವಿಷ್ಣುತೀರ್ಥ ಜಮಖಂಡಿ ಮಾತನಾಡಿದರು. ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಚ್.ಟಿ. ಸುಧೀಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಡಿ.ಎಸ್. ಕಾರ್ತಿಕ್, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಇಂಡಿಯಾ ಅಧ್ಯಕ್ಷ ಶ್ರೀಧರ್ ಪಾರ್ಥಸಾರಥಿ, ಡಿ.ಆರ್. ಶಂಕರ್, ಕೆ.ಸಿ. ನಾಗರಾಜ್, ಮುಕುಂದ ಪೊಟ್ನಿಸ್, ಎಚ್.ವಿ. ಸುರೇಶ್, ಕೆ.ಎಸ್. ಶಿವಕುಮಾರಪ್ಪ ಇದ್ದರು.
ಎರಡು ದಿನಗಳ ಈ ಸಮಾವೇಶದಲ್ಲಿ ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ ಮತ್ತು ಶಿವಮೊಗ್ಗ ಜಿಲ್ಲೆಗಳ ತೆರಿಗೆ ಸಲಹೆಗಾರರು ಭಾಗವಹಿಸಿದ್ದಾರೆ.
ನಿರಂತರ ಜ್ಞಾನಾರ್ಜನೆ ಅಗತ್ಯ
ತೆರಿಗೆ ವೃತ್ತಿಪರರು ನಿರಂತರ ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಹೇಳಿದರು.
ಆದಾಯ ತೆರಿಗೆ ಕಾಯ್ದೆ-2025ರ ಬಗ್ಗೆ ತೆರಿಗೆ ಸಲಹೆಗಾರರು, ಲೆಕ್ಕ ಪರಿಶೋಧಕರು ಹಾಗೂ ಕೈಗಾರಿಕೋದ್ಯಮಿಗಳು ಸಮಗ್ರವಾಗಿ ತಿಳಿವಳಿಕೆ ಹೊಂದುವುದು ಅವಶ್ಯಕವಾಗಿದೆ ಎಂದರು.
ಸ್ವಾತಂತ್ರ್ಯದ ಅಮೃತೋತ್ಸವದ ಅವಧಿಯಲ್ಲೂ ನಾವು ವಿವಿಧ ಅಭಿವೃದ್ಧಿ ಚಟುವಟಿಕೆಯಲ್ಲಿ ಆರಂಭಿಕ ಹಂತದಲ್ಲಿದ್ದೇವೆ. 12 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳು ಅಭಿವೃದ್ಧಿಗೆ ವೇಗ ನೀಡಿವೆ. ಇದಕ್ಕೆ ಪೂರಕವಾಗಿ ಆದಾಯ ತೆರಿಗೆ ಕ್ಷೇತ್ರವೂ ಹೆಜ್ಜೆ ಹಾಕಬೇಕು ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿ, ತೆರಿಗೆ ಕ್ಷೇತ್ರವು ಮಹತ್ತರ ಬದಲಾವಣೆ ಕಾಣುತ್ತಿದೆ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಮುಖರಹಿತ ಮೌಲ್ಯಮಾಪನ, ದತ್ತಾಂಶ ವಿಶ್ಲೇಷಣೆ ಮತ್ತು ಹೊಸ ಆದಾಯ ತೆರಿಗೆ ಕಾಯ್ದೆಯು ನಾವು ಕೆಲಸ ಮಾಡುವ ರೀತಿಯನ್ನೇ ಬದಲಾಯಿಸುತ್ತಿದೆ. ಕಾನೂನುಗಳು ಮತ್ತು ಕಾರ್ಯವಿಧಾನಗಳು ಬದಲಾಗಬಹುದು. ಆದರೆ, ವೃತ್ತಿಪರ ನೈತಿಕತೆ, ಜ್ಞಾನ ಮತ್ತು ತೆರಿಗೆದಾರರಿಗೆ ನೀಡುವ ಸೇವೆಯ ಬಗೆಗಿನ ಬದ್ಧತೆಯನ್ನು ಎಂದೂ ಮರೆಯಬಾರದು ಎಂದು ಸಲಹೆ ನೀಡಿದರು.
"
ಹೊಸ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಬೇಕು. ಆರಂಭದಲ್ಲಿ ಕಷ್ಟವೆನಿಸಬಹುದು, ಆದರೆ ನಂತರ ಅದೇ ರೂಢಿಯಾಗುತ್ತದೆ. ಈ ಕಾಯ್ದೆಯಲ್ಲಿರುವ ವಿವಿಧ ಸೆಕ್ಷನ್‌ಗಳನ್ನು ಅರ್ಥ ಮಾಡಿಕೊಳ್ಳಬೇಕು. ತೆರಿಗೆ ಸಲಹೆಗಾರರಿಗೆ ಆಯೋಜಿಸಿರುವ ಈ ಕಾರ್ಯಕ್ರಮದ ಲಾಭ ಪಡೆಯಬೇಕು.
— ಡಿ.ಎಂ. ಭತ್ತದ್, ತೆರಿಗೆ ಸಲಹೆಗಾರರ ಅಖಿಲ ಭಾರತ ಫೆಡರೇಷನ್‌ನ ದಕ್ಷಿಣ ವಲಯ ಚೇರ್ಮನ್