ದಲಿತ ಸಂಘಟನೆಗಳ ಸಮ್ಮಿಲನಕ್ಕೆ ಬೇಕು ಪ್ರಬಲ ಪ್ರಯತ್ನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ’ದಲ್ಲಿ ಸಾಹಿತಿ ಇಂದಿರಾ ಕೃಷ್ಣಪ್ಪ ಮಾತನಾಡಿದರು. ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ, ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ’ದಲ್ಲಿ ಸಾಹಿತಿ ಇಂದಿರಾ ಕೃಷ್ಣಪ್ಪ ಮಾತನಾಡಿದರು. ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ, ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಆಶಯ
  • ದಾವಣಗೆರೆಯಲ್ಲೂ ಆಗಲಿ ಅಧ್ಯಯನಪೀಠ
  • ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ
ದಾವಣಗೆರೆ: ದಿ. ಪ್ರೊ. ಬಿ. ಕೃಷ್ಣಪ್ಪ ಅವರು ಕಟ್ಟಿದ ದಲಿತ ಸಂಷರ್ಷ ಸಮಿತಿಯಲ್ಲಿ ಇಂದು ಅನೇಕ ವಿಘಟನೆಗಳಾಗಿವೆ. ಎಲ್ಲ ದಲಿತ ಸಂಘಟನೆಗಳನ್ನು ಒಂದುಗೂಡಿಸಲು ಪ್ರಬಲ ಪ್ರಯತ್ನಗಳು ನಡೆಯಬೇಕು. ತಾತ್ವಿಕ ನೆಲೆಯಲ್ಲಿ ಈ ಕಾರ್ಯ ಆಗಬೇಕಿದೆ ಎಂದು ಸಾಹಿತಿ, ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಭಾಗ ವತಿಯಿಂದ ಶನಿವಾರ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ’ದಲ್ಲಿ ಮಾತನಾಡಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಸತ್ಯ. ಅದೇ ರೀತಿ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು, ಸಭೆಗಳು ನಡೆದಿವೆ. ಕೆಲವರ ಪ್ರತಿಷ್ಠೆ ಅಥವಾ ಹೊಂದಾಣಿಕೆ ಸಮಸ್ಯೆಯಿಂದಾಗಿ ಹಿನ್ನಡೆಯಾಗಿದೆ. ಕೆಲವೆಡೆ ದಲಿತ ಸಂಘಟನೆಗಳ ಒಕ್ಕೂಟದ ಹೆಸರಲ್ಲಿ ಉತ್ತಮ ಕಾರ್ಯಕ್ರಮಗಳು ನಡೆದಿವೆ. ಇಂತಹ ಪ್ರಯತ್ನ ಹೆಚ್ಚಿದಲ್ಲಿ ಎಲ್ಲರ ದೃಷ್ಟಿಕೋನ ಏಕಮುಖಿ ಆಗಿರಲಿವೆ ಎಂದರು.
ದಲಿತ ಸಂಘಟನೆಗಳನ್ನು ಒಗ್ಗೂಡಿಸುವ ಶಕ್ತಿ ಇದ್ದುದು ಬಿ. ಕೃಷ್ಣಪ್ಪ ಅವರಲ್ಲಿ ಮಾತ್ರ. ಅವರ ನಂತರದಲ್ಲಿ ಕೃಷ್ಣಪ್ಪ ಅವರ ರಥವನ್ನು ಮುಂದುವರಿಸುವ ಜವಾಬ್ದಾರಿ ವಹಿಸಬೇಕಿದ್ದ ದೇವನೂರು ಮಹಾದೇವ ಅವರು ಸಾಹಿತ್ಯ ಚಟುವಟಿಕೆಗೇ ಸೀಮಿತರಾದರು ಎಂದು ಬೇಸರ ವ್ಯಕ್ತಪಡಿಸಿದರು.
ಒತ್ತಡ ಹಾಕಿದ್ದರ ಪರಿಣಾಮ ಕುವೆಂಪು ವಿವಿಯಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರ ಅಧ್ಯಯನ ಪೀಠ ಸ್ಥಾಪನೆಯಾಗಿದೆ. ದಾವಣೆರೆ ವಿವಿಯಲ್ಲೂ ಇದರ ಸ್ಥಾಪನೆ ಸಂಬಂಧ ಎಲ್ಲರ ಒತ್ತಡ ಹೆಚ್ಚಬೇಕಿದೆ. ಬೆಂಗಳೂರು ರಸ್ತೆಯೊಂದಕ್ಕೆ ಅವರ ಹೆಸರಿಡಲು, ಒಂದೆಡೆ ಪ್ರತಿಮೆ ಸ್ಥಾಪಿಸಲು ಪ್ರಯತ್ನ ಸಾಗಿದೆ ಎಂದು ಸಂವಾದದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿದರು.
ಸಮಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ದಲಿತ ಚಳವಳಿ ಪಾತ್ರ ದೊಡ್ಡದು. ಸನಾತನವಾದಿಗಳಿಂದ ಕ್ರೂರ ನಡೆಗಳಿದ್ದ ಕಾಲದಲ್ಲೇ ಸಾಹಿತಿಗಳ, ಅಧ್ಯಾಪಕರ ಬಳಗ ನಿರ್ಮಾಣವಾದವು. ಅಂತರ್ಜಾತಿ, ಅಂತರಮತೀಯ ವಿವಾಹಗಳೂ ಹೆಚ್ಚಿದವು. ಕೃಷ್ಣಪ್ಪ ಅವರು ಮೊದಲು ಆರಂಭಿಸಿದ ದಲಿತ ವೇದಿಕೆ ನಂತರದಲ್ಲಿ ದಸಂಸ ಆಯಿತು ಎಂದರು/
ದಲಿತ ಚಳವಳಿ ಎಂಬುದು ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಚಳವಳಿ. ಇದು ಸಮಾಜದಲ್ಲಿ ಘನತೆಯ ಬದುಕನ್ನು ನೀಡಲು ವಾಸಕ್ಕೆ ಮನೆ, ಒಂದಿಷ್ಟು ಭೂಮಿ ಬೇಕಿತ್ತು. ಭೂಮಿ ಹೋರಾಟ ನಡೆಸಿದ್ದರ ಪರಿಣಾಮ ಸರ್ಕಾರಗಳು ವಸತಿ ಯೋಜನೆ ಜಾರಿಗೊಳಿಸಿದವು. ಮಹಿಳೆಯರಿಗೂ ಘನತೆಯ ಬದುಕು ಲಭ್ಯವಾಯಿತು.
ಸತ್ಯಾನಂದ ಸಮಿತಿ ಸಲಹೆ ಮೇರೆಗೆ ಕರ್ನಾಟಕದಲ್ಲಿ ಒಳಮೀಸಲಾತಿ ಸರಳೀಕರಣಗೊಳಿಸಲಾಯಿತು. ದಲಿತ ಚಳವಳಿಯಲ್ಲಿ ಶ್ರಮಿಸಿದವರಿಗೆ ಎಂಎಲ್ಸಿ ಸ್ಥಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಬೇಡಿಕೆ ಈಡೇರಲಿಲ್ಲ ಎಂದರು.
‘ಅರಳೀಮರದ ಬಳಿ ಹೋಗಬೇಡ, ಅಲ್ಲಿ ಬ್ರಹ್ಮರಾಕ್ಷಸನಿದ್ದಾನೆ’ ಎಂದು ಹೇಳಿ ಬಾಲ್ಯಾವಸ್ಥೆಯಲ್ಲೇ ನಮ್ಮನ್ನು ತಡೆಯುವ ಪ್ರಯತ್ನ ನಡೆದವು. ಆದರೂ ಕೆಲಹೊತ್ತು ಅರಳೀಮರದ ಬಳಿ ಆಡುತ್ತಿದ್ದೆವು. ಕಾಲಾನಂತರದಲ್ಲಿ ಬೋಧೀವೃಕ್ಷ ಬುದ್ಧನಿಗೆ ಜ್ಞಾನೋದಯವಾದ ಸ್ಥಳವಾಗಿದ್ದು, ಬುದ್ಧನ ತತ್ವ ಸಿದ್ಧಾಂತ ಮೂಲೆಗುಂಪು ಮಾಡುವ ನಡೆದಿದ್ದು ಗೋಚರಕ್ಕೆ ಬಂದಿತು. ನಮ್ಮಲ್ಲಿದ್ದ ತಪ್ಪು ಕಲ್ಪನೆ ಹೋಗಲಾಡಿಸಲು ಪ್ರಯತ್ನಿಸಿದೆವು ಎಂದರು.
ಜಿಪಂ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ, ಎಚ್. ಮಲ್ಲೇಶಪ್ಪ, ಮಲ್ಲಿಕಾರ್ಜುನ ಕಡಕೋಳ, ಚಿಂದೋಡಿ ಶಂಭುಲಿಂಗಪ್ಪ, ರುದ್ರಪ್ಪ ಹನಗವಾಡಿ, ಚಿದಾನಂದ್ ಮೊದಲಾದವರು ಸಂವಾದದಲ್ಲಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಂದ್ರ ಇದ್ದರು.
ಅಂತರ್ಜಾತಿ ವಿವಾಹದಿಂದ ಹಿನ್ನಡೆಯಾಗಿಲ್ಲ
ಭದ್ರಾವತಿಯ ಕಾಲೇಜಿನಲ್ಲಿ ಓದುತ್ತಿದ್ದ ನನಗೆ ಉಪನ್ಯಾಸಕರಿದ್ದ ಬಿ, ಕೃಷ್ಣಪ್ಪ ಅವರೇ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಈ ಸಂಬಂಧ ಪತ್ರಗಳು ಬಂದಿದ್ದರಿಂದ ಕುಟುಂಬದವರು ಬೆಂಗಳೂರಿಗೆ ಕರೆದೊಯ್ದಿದ್ದರು. ನಂತರದಲ್ಲಿ ಅವರೊಂದಿಗೆ ಅಂತರ್ಜಾತಿ ಮದುವೆಯಾಯಿತು. ಇದರಿಂದ ದಲಿತ ಚಳಿವಳಿಗೆ ಯಾವ ಹಿನ್ನಡೆಯೂ ಆಗಲಿಲ್ಲ ಎಂದೂ ಇಂದಿರಾ ಸಮರ್ಥಿಸಿಕೊಂಡರು.
ಶಿಷ್ಟಾಚಾರದ ಆಹ್ವಾನ ಬೇಕೆ?
ಸಂವಾದ ಕಾರ್ಯಕ್ರಮಕ್ಕೆ ಜಪ್ರತಿನಿಧಿಗಳನ್ನು ಆಹ್ವಾನಿಸಿ ಸರ್ಕಾರದ ಶಿಷ್ಟಾಚಾರದಂತೆ ನಡೆಸಬೇಕು. ದಿ. ಕೃಷ್ಣಪ್ಪ ಅವರ ವಿಚಾರಧಾರೆಗಳು ಅವರಿಗೂ ಪರಿಚಯವಾಗಬೇಕು ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಯಿತು. ಹೀಗೆಯೇ ನಡೆಸಲು ನಿರ್ದೇಶನವಿತ್ತು. ಹಿರಿಯ ಅಧಿಕಾರಿಗಳನ್ನು ಚರ್ಚಿಸಿ ಸರಿಪಡಿಸಿಕೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ ಹೇಳಿದರು. ಇಂತಹ ಕಾರ್ಯಕ್ರಮ ಕಲೆ, ಸಾಹಿತ್ಯ, ಸಂಸ್ಕೃತಿ ಪರಿಚಯವಿದ್ದವರಿಗೇ ನಡೆಸುವುದು ಸೂಕ್ತ. ಜನಪ್ರತಿನಿಧಿಗಳನ್ನು ಆಹ್ವಾನಿಸುವುದು ಬೇಡ ಎಂಬ ಮತ್ತೊಂದು ಸಲಹೆ ಸಭಿಕರಿಂದಲೇ ವ್ಯಕ್ತವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net