ಪೊದೆಗಳ ನಡುವೆ ಕಣ್ಮರೆಯಾದ ಕಟ್ಟಡ!

ಮಾಯಕೊಂಡ ಗ್ರಾಮದಲ್ಲಿ ಪಾಳು ಬಿದ್ದಿರುವ ಬಿಎಸ್‌ಎನ್‌ಎಲ್ ಕಚೇರಿ. BSNL Office
ಮಾಯಕೊಂಡ ಗ್ರಾಮದಲ್ಲಿ ಪಾಳು ಬಿದ್ದಿರುವ ಬಿಎಸ್‌ಎನ್‌ಎಲ್ ಕಚೇರಿ. BSNL Office
Published on

ಪ್ರಮುಖ ಮುಖ್ಯಾಂಶಗಳು

  • ಪಾಳು ಬಿದ್ದ ಬಿಎಸ್‌ಎನ್‌ಎಲ್ ಕಚೇರಿ
  • ಅಭಿವೃದ್ಧಿಗೆ ಸಾರ್ವಜನಿಕರ ಆಗ್ರಹ
  • ಕುಸಿಯುವ ಸ್ಥಿತಿ ತಲುಪಿದೆ ಮೇಲ್ಛಾವಣಿ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಒಂದು ಕಾಲದಲ್ಲಿ ಮನೆಗಳಲ್ಲಿ ಲ್ಯಾಂಡ್‌ಲೈನ್ ಫೋನ್‌ರಿಂಗ್ ಆಗುತ್ತಿದ್ದರೆ ಅದೊಂದು ಸಂಭ್ರಮದ ಸಂಗತಿಯಾಗಿತ್ತು. ಅಲ್ಲದೇ ಭಾರತ ಸರ್ಕಾರದ ಬಿಎಸ್‌ಎನ್‌ಎಲ್ ದೂರವಾಣಿ ಹಾಗೂ ಇಂಟರ್‌ನೆಟ್ ಸೇವೆಯನ್ನು ಅತ್ಯಂತ ಯಶಸ್ವಿಯಾಗಿ ನೀಡುತ್ತಿತ್ತು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಆಧುನೀಕರಣಗೊಳ್ಳದೆ ಹಾಗೂ ಸಮರ್ಪಕ ನಿರ್ವಹಣೆ ಇಲ್ಲದೇ ಮಾಯಕೊಂಡದಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿ ವಿನಾಶದ ಅಂಚಿಗೆ ಬಂದು ತಲುಪಿದೆ.
ಗ್ರಾಮದ ಬಸ್ ನಿಲ್ದಾಣದ ಸರ್ಕಲ್‌ನಲ್ಲಿರುವ ಕೋಟ್ಯಂತರ ರೂ. ವೆಚ್ಚದ ಬಿಎಸ್‌ಎನ್‌ಎಲ್ ಕಚೇರಿ ಪೊದೆಯಲ್ಲಿ ಅಡಗಿ ಹೋಗಿದೆ. ಇದರ ಕಾಂಪೌಂಡ್ ಒಳಗೆ ಮುಳ್ಳಿನ ಗಿಡಗಂಟಿಗಳು ಮತ್ತು ಪೊದೆಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ರಸ್ತೆಯಲ್ಲಿ ನಿಂತು ನೋಡಿದರೆ ಕಚೇರಿ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಚೇರಿಯ ಕಟ್ಟಡದ ಮೇಲೆ ನೀರು ನಿಂತು ಆರ್‌ಸಿಸಿ ಮೇಲ್ಛಾವಣಿ ಮತ್ತು ಗೋಡೆಗಳು ಕುಸಿಯುವ ಸ್ಥಿತಿ ತಲುಪಿದೆ. ಇದರ ಮೂಲಕವೇ ಗ್ರಾಮದ ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೆ ಇಂಟರ್‌ನೆಟ್ ಸಂಪರ್ಕ ನೀಡಲಾಗುತ್ತಿದೆ. ಇಂತಹ ಪ್ರಮುಖ ಕೇಂದ್ರದ ನಿರ್ವಹಣೆಗೆ ಹಲವು ವರ್ಷಗಳಿಂದ ಯಾವೊಬ್ಬ ಅಧಿಕಾರಿಯೂ ಇಲ್ಲ. ಏನಾದರೂ ತಾಂತ್ರಿಕ ಸಮಸ್ಯೆ ಎದುರಾದರೆ ದೂರದ
ದಾವಣಗೆರೆಯಿಂದ ಅಧಿಕಾರಿಗಳು ಬರಬೇಕಾದ ಅನಿವಾರ್ಯತೆ ಇದೆ.

ಸೇವೆ ವಿಫಲ

ಗ್ರಾಮೀಣ ಭಾಗದಲ್ಲಿ 4ಜಿ, 5ಜಿ ಹಾಗೂ 6ಜಿಯಂತಹ ಸುಧಾರಿತ ಸೇವೆಗಳನ್ನು ನೀಡಲು ಬಿಎಸ್‌ಎನ್‌ಎಲ್ ವಿಫಲವಾಗಿದೆ. ವಿದ್ಯುತ್ ವ್ಯತ್ಯಯವಾದರೆ ಸಾಕು, ಇಂಟರ್‌ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಪ್ರಿಪೇಯ್ಡಿ ಹಾಗೂ ಪೋಸ್ಟ್ ಪೇಯ್ಡ ಸೇವೆಗಳು ಸರಿಯಾಗಿ ಸಿಗದ ಕಾರಣ ಬೇಸತ್ತ ಗ್ರಾಹಕರು ಅನಿವಾರ್ಯವಾಗಿ ಖಾಸಗಿ ಕಂಪನಿಗಳ ಮೊರೆ ಹೋಗುತ್ತಿದ್ದಾರೆ. ಇಂದಿಗೂ ಬಿಎಸ್‌ಎನ್‌ಎಲ್ ಅನ್ನು ಅಪ್‌ಡೇಟ್ ಮಾಡಿದರೆ ಅದು ಚೇತರಿಸಿಕೊಳ್ಳಬಹುದು ಎನ್ನುವ ನಂಬಿಕೆ ಗ್ರಾಹಕರಲ್ಲಿದೆ.

ಸುಮಾರು 7-8 ವರ್ಷಗಳಿಂದ ಈ ಕಚೇರಿ ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಇಲ್ಲಿ ಕಾಯಂ ಅಧಿಕಾರಿಗಳೇ ಇಲ್ಲ. ಶಾಸಕರು ಹಾಗೂ ಉನ್ನತ ಅಧಿಕಾರಿಗಳು ಇದರ ಅಭಿವೃದ್ಧಿ ಬಗ್ಗೆ ಕನಿಷ್ಠ ಗಮನವನ್ನೂ ಹರಿಸುತ್ತಿಲ್ಲ.

"

ಹಲವು ವರ್ಷಗಳ ಹಿಂದೆ ಬಿಎಸ್‌ಎನ್‌ಎಲ್ ಉತ್ತಮ ಸೇವೆ ನೀಡುತ್ತಿತ್ತು. ಪ್ರಸ್ತುತ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗದ ಕಾರಣ ಗ್ರಾಹಕರು ಖಾಸಗಿ ಕಂಪನಿಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಕೂಡಲೇ ಪಾಳು ಬಿದ್ದಿರುವ ಈ ಕಚೇರಿಯನ್ನು ಉನ್ನತೀಕರಿಸಿ, ಸೇವೆ ಸುಧಾರಿಸಲು ಇಲಾಖೆ ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net