ರಮೇಶ ಜಹಗೀರದಾರ್ ದಾವಣಗೆರೆ :ಮುಂಗಾರುಪೂರ್ವ ಮಳೆಯಿಂದ ಜಿಲ್ಲೆಯಲ್ಲಿ 756.82 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು 1.27 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಸುರಿದ ಮಳೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿತು. ಮಳೆಗಿಂತಲೂ ಗಾಳಿಯ ಹೊಡೆತಕ್ಕೆ ಬೆಳೆಗಳು ನಲುಗಿದವು. ವಿವಿಧೆಡೆ ಭತ್ತದ ಪೈರು ನೆಲಕಚ್ಚಿತು. ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಪಪ್ಪಾಯ ಗಿಡಗಳು ನೆಲಕ್ಕುರುಳಿದವು.
ರೈತರು ಬಂಡವಾಳ ಹೂಡಿ, ಬೆವರು ಸುರಿಸಿ ಬೆಳೆದ ಬೆಳೆಗಳು ಕಣ್ಣ ಮುಂದೆಯೆ ನಾಶವಾಗಿರುವುದು ಕಂಡು ಕೃಷಿಕರು ಕಣ್ಣೀರಿಟ್ಟರು. ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ನಿರ್ದೇಶನದಂತೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿದರು. ರೈತರ ಜಮೀನುಗಳಿಗೆ ಭೇಟಿ ನೀಡಿ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಪರಿಶೀಲಿಸಿದರು. ಆ ವರದಿಯನ್ನೀಗ ಸರ್ಕಾರಕ್ಕೆ ಕಳಿಸಲಾಗಿದೆ. ಪರಿಹಾರ ಪೋರ್ಟಲ್‌ನಲ್ಲಿ ನೋಂದಣಿ ಪ್ರಕ್ರಿಯೆ ನಡೆದಿದ್ದು ಶೀಘ್ರವೇ ರೈತರಿಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ.
ಭತ್ತ 734.5 ಹೆಕ್ಟೇರ್, ರಾಗಿ 4 ಹೆಕ್ಟೇರ್ ಸೇರಿ 738.48 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 5.17 ಹೆಕ್ಟೇರ್ ಅಡಿಕೆ, 7.14 ಹೆಕ್ಟೇರ್ ಬಾಳೆ, 0.13 ಹೆಕ್ಟೇರ್ ತೆಂಗು, 5.90 ಹೆಕ್ಟೇರ್ ಪಪ್ಪಾಯ ಸೇರಿ 18.34 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟವಾಗಿದೆ.
ತಾಲೂಕುವಾರು ವಿವರ
ದಾವಣಗೆರೆ ತಾಲೂಕಿನಲ್ಲಿ ಭತ್ತ 96.4 ಹೆಕ್ಟೇರ್, ಅಡಿಕೆ 0.95 ಹೆಕ್ಟೇರ್, ಬಾಳೆ 2 ಹೆಕ್ಟೇರ್ ಸೇರಿ ಒಟ್ಟು 99.35 ಹೆಕ್ಟೇರ್ ಬೆಳೆ ಹಾನಿಯಾಗಿದ್ದು 16.89 ಲಕ್ಷ ರೂ. ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲೂಕಿನಲ್ಲಿ 412.8 ಹೆಕ್ಟೇರ್ ಭತ್ತ, 3.02 ಹೆಕ್ಟೇರ್ ಅಡಿಕೆ, 2.96 ಹೆಕ್ಟೇರ್ ಬಾಳೆ ಸೇರಿ 418.79 ಹೆಕ್ಟೇರ್ ಬೆಳೆ ಹಾನಿಯಾಗಿದ್ದು 71.36 ಲಕ್ಷ ರೂ. ನಷ್ಟವಾಗಿದೆ.
ಹೊನ್ನಾಳಿ ತಾಲೂಕಿನಲ್ಲಿ 1.72 ಹೆಕ್ಟೇರ್ ಭತ್ತ, 4 ಹೆಕ್ಟೇರ್ ರಾಗಿ, 0.2 ಹೆಕ್ಟೇರ್ ಪಪ್ಪಾಯ ಸೇರಿ 5.92 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಹರಿಹರ ತಾಲೂಕಿನಲ್ಲಿ 223.6 ಹೆಕ್ಟೇರ್ ಭತ್ತ, 0.2 ಹೆಕ್ಟೇರ್ ಅಡಿಕೆ, 0.13 ಹೆಕ್ಟೇರ್ ತೆಂಗು ಸೇರಿ 223.88 ಹೆಕ್ಟೇರ್ ಬೆಳೆ ಹಾನಿಯಾಗಿದ್ದು 38.08 ಲಕ್ಷ ರೂ. ನಷ್ಟ ಸಂಭವಿಸಿದೆ.
ಜಗಳೂರು ತಾಲೂಕಿನಲ್ಲಿ 1 ಹೆಕ್ಟೇರ್ ಅಡಿಕೆ, 2.18 ಹೆಕ್ಟೇರ್ ಬಾಳೆ, 5.7 ಹೆಕ್ಟೇರ್ ಪಪ್ಪಾಯ ಸೇರಿ ಒಟ್ಟು 8.88 ಹೆಕ್ಟೇರ್ ಬೆಳೆ ಹಾನಿಯಾಗಿದೆ.
"
ಮುಂಗಾರುಪೂರ್ವ ಮಳೆಯಿಂದ ಆಗಿರುವ ಬೆಳೆ ಹಾನಿಯ ಜಂಟಿ ಸಮೀಕ್ಷೆಯ ನಂತರ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಪರಿಹಾರ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರವೇ ರೈತರ ಖಾತೆಗಳಿಗೆ ಪರಿಹಾರ ತಲುಪಲಿದೆ.